ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮತ್ತೆ 2,267 ಕೋವಿಡ್ ಪ್ರಕರಣ ಪತ್ತೆ

ಪರೀಕ್ಷೆ ಹೆಚ್ಚಳದ ಜತೆ ಸೋಂಕಿತರ ಸಂಖ್ಯೆ ಏರಿಕೆ l ರಾಜಭವನ ರಸ್ತೆಯ ಅಂಚೆ ಕಚೇರಿ ಬಟವಾಡೆ ವಿಭಾಗ ಬಂದ್‌
Last Updated 24 ಜುಲೈ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 2,267 ಮಂದಿ ಕೊರೊನಾ ಸೋಂಕಿತರಾಗಿರುವುದು ಹಾಗೂ 50 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ.

ಕೋವಿಡ್ ಪರೀಕ್ಷೆ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ಸೋಂಕಿತರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. 48 ಗಂಟೆಗಳಲ್ಲಿ 4,474 ಮಂದಿ ಕೋವಿಡ್ ಪೀಡಿತರಾಗಿರುವುದು ಖಚಿತಪಟ್ಟಿದೆ. ಇದೇ ಅವಧಿಯಲ್ಲಿ 98 ಮಂದಿ ಸಾವಿಗೀಡಾಗಿದ್ದಾರೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41,467, ಮೃತಪಟ್ಟವರ ಸಂಖ್ಯೆ 833ಕ್ಕೆ ತಲುಪಿದೆ.

ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಪೂರ್ವ ವಲಯದಲ್ಲಿಯೇ ಅಧಿಕ ಮಂದಿ (492) ಸೋಂಕಿತರಾಗಿದ್ದಾರೆ.ದಕ್ಷಿಣ ವಲಯದಲ್ಲಿ 401, ಬೊಮ್ಮನಹಳ್ಳಿಯಲ್ಲಿ 252, ದಾಸರಹಳ್ಳಿಯಲ್ಲಿ 55, ಮಹದೇವಪುರದಲ್ಲಿ 195, ಆರ್.ಆರ್.ನಗರದಲ್ಲಿ 149, ಪಶ್ಚಿಮ ವಲಯದಲ್ಲಿ 416 ಹಾಗೂ ಯಲಹಂಕದಲ್ಲಿ 70 ಮಂದಿ ಸೋಂಕಿತರಾಗಿದ್ದಾರೆ.

ನಗರದಲ್ಲಿ 746 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 10,072ಕ್ಕೆ ಏರಿಕೆಯಾಗಿದೆ. 30,561 ಸೋಂಕಿತರು ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 362 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಅಂಚೆ ಕಚೇರಿ ವಿಭಾಗ ಬಂದ್: ರಾಜಭವನ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯ ಮೂವರು ಸಿಬ್ಬಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಇದರಲ್ಲಿ ಒಬ್ಬರು ಬನಶಂಕರಿ 2ನೇ ಹಂತ, ಇನ್ನೊಬ್ಬರು ಹೆಗಡೆ ನಗರದಲ್ಲಿ ವಾಸವಿದ್ದರು. ಮತ್ತೊಬ್ಬರು 15 ದಿನಗಳ ಹಿಂದೆ ಆಂಧ್ರಪ್ರದೇಶದಿಂದ ವಾಪಸ್ ಆಗಿ, ಮನೆ ಕ್ವಾರಂಟೈನ್‌ಗೆ ಒಳಗಾಗಿದ್ದರು.

‘ಸೋಂಕಿತರು ಕಾರ್ಯನಿರ್ವಹಿಸುತ್ತಿದ್ದ ಅಂಚೆ ಬಟವಾಡೆ ವಿಭಾಗವನ್ನು ಮಾತ್ರ ಸ್ಥಗಿತ ಮಾಡಲಾಗಿದೆ. ಎಟಿಎಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ’ ಎಂದು ಅಂಚೆ ಪೂರ್ವ ವಿಭಾಗದ ಹಿರಿಯ ಅಧೀಕ್ಷಕ ಬಿ.ಎಸ್. ಚಂದ್ರಶೇಖರ್ ತಿಳಿಸಿದರು.

ವೈದ್ಯಾಧಿಕಾರಿ ಕುಟುಂಬದವರಿಗೇ ಸಕಾಲಕ್ಕೆ ಸಿಗಲಿಲ್ಲ ಚಿಕಿತ್ಸೆ

ಬಿಬಿಎಂಪಿಯ ಆರೋಗ್ಯಾಧಿಕಾರಿ ಕುಟುಂಬದ ಮೂವರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ನಾಗೇಂದ್ರ ಕುಮಾರ್‌ ಅವರ ತಂದೆ (73), ತಾಯಿ (70) ಹಾಗೂ ಅವರ ಭಾವ (50) ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರ ಭಾವ ಕನಕಪುರದ ಚಿಕ್ಕಮುದವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು.ನಾಗೇಂದ್ರಕುಮಾರ್‌ ಅವರ ಭಾವನಿಗೆ ಜೂನ್‌ 24ರಂದು ಸೋಂಕು ಕಾಣಿಸಿಕೊಂಡಿತ್ತು. ನಂತರ ಕುಟುಂಬದ 6 ಜನರಿಗೆ ಸೋಂಕು ತಗುಲಿತ್ತು. 29ರಂದು ಅವರ ತಂದೆ ಮತ್ತು ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಭಾವ ಚಿಕಿತ್ಸೆಗಾಗಿ ಮೂರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಜುಲೈ 19ರಂದು ಅವರ ಭಾವ ನಿಧನರಾದರೆ, 22ರಂದು ತಂದೆ ಮತ್ತು 23ರಂದು ತಾಯಿ ನಿಧನರಾಗಿದ್ದಾರೆ.

‘ಭಾವ ಚಿಕಿತ್ಸೆಗಾಗಿ ಅಲೆದಾಡಿದ ವಿಷಯವನ್ನು ನಾಗೇಂದ್ರಕುಮಾರ್‌ ತಿಳಿಸಿದ ಮೇಲೆಯೇ ನಮ್ಮ ಗಮನಕ್ಕೆ ಬಂದಿತು. ಈ ಕುರಿತು ನಾಗೇಂದ್ರಕುಮಾರ್‌ ಅವರಿಂದ ಲಿಖಿತ ಹೇಳಿಕೆ ಪಡೆದು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ನೀಡಲಾಗುವುದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್‌ ತಿಳಿಸಿದ್ದಾರೆ.

ಬಾಲಕನಿಗೆ ಸೋಂಕು: ಕಟ್ಟಡವೇ ಸೀಲ್‌ಡೌನ್

ಈಜಿಪುರದಲ್ಲಿ 17 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನು ಬಿಬಿಎಂಪಿ ಸೀಲ್‌ಡೌನ್‌ ಮಾಡಿದೆ.

ಬಿಬಿಎಂಪಿ ಸಿಬ್ಬಂದಿ ತಗಡಿನ ಶೀಟ್‌ಗಳನ್ನು ಹಾಕಿ, ಕಟ್ಟಡದ ಪ್ರವೇಶದ್ವಾರ ಬಂದ್ ಮಾಡಿದ್ದಾರೆ.

‘ಕಳೆದ ಶುಕ್ರವಾರ ನನ್ನ ಮಗನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಶನಿವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ನನ್ನ ಕಾರಿನಲ್ಲಿ ನಗರದ ಎಲ್ಲ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿದೆ. ಯಾರೂ ದಾಖಲು ಮಾಡಿಕೊಳ್ಳಲಿಲ್ಲ. ನಾನು ಮನೆಗೆ ಹಿಂದಿರುಗಿದ ನಂತರವೂ ಮಗ ಕಾರಿನಲ್ಲಿಯೇ ನಾಲ್ಕು ತಾಸು ಕಳೆದ. ಕೊನೆಗೆ ಮನೆಯೊಳಗೆ ಕರೆದು, ಕೋಣೆಯೊಂದರಲ್ಲಿ ಅವನನ್ನು ಬಿಟ್ಟೆವು’ ಎಂದು ಬಾಲಕನ ತಂದೆ ತಿಳಿಸಿದರು.

‘ಭಾನುವಾರ ಬೆಳಿಗ್ಗೆ ಬಿಬಿಎಂಪಿಯ ಕೆಲವು ಗುತ್ತಿಗೆ ನೌಕರರು ಮನೆಗೆ ಭೇಟಿ ನೀಡಿ, ಕಟ್ಟಡವನ್ನು ಸೀಲ್‌ಡೌನ್‌ ಮಾಡಿದರು. ಇದನ್ನು ಪ್ರಶ್ನಿಸಿದಾಗ, ಹೊಯ್ಸಳದವರನ್ನು ಕರೆಸುತ್ತೇವೆ, ಎನ್‌ಡಿಎಂಎ ಅಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದರು’ ಎಂದು ಅವರು ಹೇಳಿದರು.

‘ಮುಖ್ಯಮಂತ್ರಿ ಕಚೇರಿ, ರಾಜಭವನ, ಕ್ಷೇತ್ರದ ಶಾಸಕ, ಪಾಲಿಕೆ ಸದಸ್ಯ ಮತ್ತು ಇತರೆ ಅಧಿಕಾರಿಗಳಿಗೆ ಕರೆ ಮಾಡಿದೆ. ಆದರೆ, ಯಾರೊಬ್ಬರೂ ಕರೆ ಸ್ವೀಕರಿಸಲಿಲ್ಲ’ ಎಂದು ಅವರು ದೂರಿದರು.

’ಕಟ್ಟಡವನ್ನು ಸೀಲ್‌ಡೌನ್‌ ಮಾಡಿದ್ದಾರೆ. ಆದರೆ, ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ, ಬಿಬಿಎಂಪಿ ಅಧಿಕಾರಿಗಳಿಗೆ ಭೇಟಿ ನೀಡಿಲ್ಲ. ಯಾವುದೇ ಔಷಧಿ ಹಾಗೂ ದಿನಸಿ ವಿತರಿಸಿಲ್ಲ. ಈ ಕಟ್ಟಡದಲ್ಲಿ ವಾಸವಿರುವ ಐದು ಕುಟುಂಬಗಳ ಸದಸ್ಯರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನೂ ವಿಚಾರಿಸಿಲ್ಲ‘ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT