ಪಾಲಿಕೆ ಸದಸ್ಯ ಕೃಷ್ಣಮೂರ್ತಿ ವಿಚಾರಣೆಗೆ ಅನುಮತಿ

ಶುಕ್ರವಾರ, ಜೂಲೈ 19, 2019
24 °C
ಬಿಲ್‌ಗೆ ₹ 15 ಲಕ್ಷ ಲಂಚ ಪಡೆದ ಆರೋಪ

ಪಾಲಿಕೆ ಸದಸ್ಯ ಕೃಷ್ಣಮೂರ್ತಿ ವಿಚಾರಣೆಗೆ ಅನುಮತಿ

Published:
Updated:
Prajavani

ಬೆಂಗಳೂರು: ಗುತ್ತಿಗೆದಾರರೊಬ್ಬರ ಕಾಮಗಾರಿ ಬಿಲ್‌ ಮಂಜೂರು ಮಾಡಿಸಲು ₹15 ಲಕ್ಷ ಲಂಚ ಪಡೆದ ಆರೋಪಕ್ಕೆ ಒಳಗಾಗಿರುವ ಬಿಬಿಎಂಪಿ 99ನೇ ವಾರ್ಡ್‌ (ರಾಜಾಜಿನಗರ) ಸದಸ್ಯ ಕೃಷ್ಣಮೂರ್ತಿ ಅವರ ವಿಚಾರಣೆಗೆ ಸಕ್ಷಮ ಪ್ರಾಧಿಕಾರ (ನಗರಾಭಿವೃದ್ಧಿ ಇಲಾಖೆ) ಅನುಮತಿ ನೀಡಿದೆ.

2017ರ ಮಾರ್ಚ್‌ 31ರಂದು ಶುಕ್ರವಾರ ಕೃಷ್ಣಮೂರ್ತಿ, ಗುತ್ತಿಗೆದಾರ ಧನಂಜಯ್ ಅವರಿಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬಂಧಿಸಿದ್ದರು. ಈ ಸಮಯದಲ್ಲಿ ಹಾಜರಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅರುಣ್‌ ಕುಮಾರ್‌ (ಈಗ ನಿವೃತ್ತಿ ಹೊಂದಿದ್ದಾರೆ) ಹಾಗೂ ಸಹಾಯಕ ಎಂಜಿನಿಯರ್‌ ಕೃಷ್ಣ ಅವರನ್ನೂ ಬಂಧಿಸಲಾಗಿತ್ತು.

ಎಸಿಬಿ ಸ್ಥಾಪನೆಯಾದ ಬಳಿಕ ನಡೆದ ಪ್ರಮುಖ ಕಾರ್ಯಾಚರಣೆ ಇದಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ತನಿಖಾ ಅಧಿಕಾರಿಗಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಕೇಳಿದ್ದರು.

ಕೃಷ್ಣಮೂರ್ತಿ ಹಾಗೂ ಕೃಷ್ಣ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ದೊರೆತಿದೆ. ಈಚೆಗೆ ಸೇವೆಯಿಂದ ನಿವೃತ್ತಿ ಆಗಿರುವ ಅರುಣ್‌ ಕುಮಾರ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಬೇಕಿರುವುದರಿಂದ ಪತ್ರ ಬರೆಯಲಾಗುವುದು ಎಂದು ಎಸಿಬಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಜಾಜಿನಗರ ಕಟ್ಟಡವೊಂದರ ನವೀಕರಣಕ್ಕೆ ₹ 3 ಕೋಟಿ ಮೌಲ್ಯದ ಗುತ್ತಿಗೆ ಧನಂಜಯ್‌ ಅವರಿಗೆ ಮಂಜೂರಾಗಿತ್ತು. ಆದರೆ, ಗುತ್ತಿಗೆ ಹಣವನ್ನು ಬಿಡುಗಡೆ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದರು. ಕೃಷ್ಣಮೂರ್ತಿ ಗುತ್ತಿಗೆ ಹಣ ಬಿಡುಗಡೆ ಮಾಡಿಸಲು ₹ 23 ಲಕ್ಷ ಲಂಚ ಕೇಳಿದ್ದರು. ಬಸವೇಶ್ವರ ನಗರದಲ್ಲಿರುವ ತಮ್ಮ ಮನೆಯಲ್ಲಿ ಗುತ್ತಿಗೆದಾರರಿಂದ ಮೊದಲ ಕಂತು ₹ 15 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಆರೋಪಿ ಎಂಜಿನಿಯರ್‌ಗಳು ಹಾಜರಿದ್ದರು.

ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಕೃಷ್ಣಮೂರ್ತಿ ಕೆಲವು ಪ್ರಭಾವಿ ರಾಜಕಾರಣಿಗಳ ಹೆಸರನ್ನು ಹೇಳಿ ಎಸಿಬಿ ಅಧಿಕಾರಿಗಳನ್ನು ವಾಪಸ್‌ ಕಳುಹಿಸಲು ಪ್ರಯತ್ನಿಸಿದ್ದರು. ‘ತಮ್ಮ ಸೋದರ ಅಮಾಯಕರಾಗಿದ್ದು, ಯಾವುದೇ ತಪ್ಪೂ ಮಾಡಿಲ್ಲ. ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ’ ಎಂದು ಅವರ ಸೋದರಿ ಪ್ರತಿಭಟನೆ ನಡೆಸಿದ್ದರು. ಆಗಿನ ಎಸಿಬಿ ಎಸ್‌ಪಿ ಗಿರೀಶ್‌ ಒತ್ತಡಕ್ಕೆ ಮಣಿದಿರಲಿಲ್ಲ ಎಂದೂ ಮೂಲಗಳು ಹೇಳಿವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !