ಬುಧವಾರ, ಮೇ 27, 2020
27 °C
ಕೊರೊನಾ ನಿಯಂತ್ರಣ– ವಿಡಿಯೊ ಕಾನ್ಫರೆನ್ಸ್‌

ಆಹಾರ ಪೂರೈಕೆ ಹೆಚ್ಚಿಸಿ– ಔಷಧ ಒದಗಿಸಿ: ಪಾಲಿಕೆ ಸದಸ್ಯರಿಂದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇ೦ದಿರಾ ಕ್ಯಾಂಟೀನ್‌ನಿಂದ ಪೂರೈಸುತ್ತಿರುವ ಆಹಾರ ಪೊಟ್ಟಣಗಳು ಸಾಲುತ್ತಿಲ್ಲ, ಇನ್ನಷ್ಟು ಆಹಾರ ಪೂರೈಸಿ, ಆಸ್ತಿ ತೆರಿಗೆ ಪಾವತಿಯ ಗಡುವನ್ನು ವಿಸ್ತರಿಸಿ, ದಿನಸಿ ಮತ್ತು ತರಕಾರಿ ಅಂಗಡಿಗಳು ಸಾಮಗ್ರಿಗಳ ದರಪಟ್ಟಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿ, ವೈದ್ಯಕೀಯ ಸೌಲಭ್ಯ ಹೆಚ್ಚಿಸಿ...

ಕಂದಾಯ ಸಚಿವ ಆರ್.ಅಶೋಕ ಹಾಗೂ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಕೊರೊನಾ ಸೋಂಕು ನಿಯಂತ್ರಣ ಕ್ರಮಗಳ ಕುರಿತು ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಮ್‌ ಮೂಲಕ ಪಾಲಿಕೆ ಸದಸ್ಯರ ಜೊತೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ವ್ಯಕ್ತವಾದ ಸಲಹೆಗಳಿವು. ವಾರ್ಡ್‌ ವ್ಯಾಪ್ತಿಯಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವರು ಹಾಗೂ ಮೇಯರ್‌ ಸಲಹೆ ಪಡೆದರು.

ಬಹುತೇಕ ಸದಸ್ಯರು ಆಹಾರ ಪೂರೈಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟರು. ಅಗತ್ಯ ಔಷಧ ಪೂರೈಕೆಗೆ ವ್ಯವಸ್ಥೆ ಮಾಡುವಂತೆ, ತ್ವರಿತ ವೈದ್ಯಕೀಯ ನೆರವು ಒದಗಿಸಲು ಆಂಬ್ಯುಲೆನ್ಸ್‌ಗಳನ್ನು ಹಚ್ಚುವರಿಯಾಗಿ ಒದಗಿಸುವಂತೆಯೂ ಕೆಲವು ಸದಸ್ಯರು ಬೇಡಿಕೆ ಸಲ್ಲಿಸಿದರು. 

ಪೌರಕಾರ್ಮಿಕರಿಗೆ ಸಾಕಷ್ಟು ಮುಖಗವಸು ಹಾಗೂ ಸೋಂಕು ನಿವಾರಕ ದ್ರಾವಣ (ಸ್ಯಾನಿಟೈಸರ್‌) ಪೂರೈಸುವಂತೆಯೂ ಅನೇಕರು ಸಲಹೆ ನೀಡಿದರು.

ದೈನಂದಿನ ಅಗತ್ಯದ ಸಾಮಗ್ರಿ ಪೂರೈಕೆಗೆ ಮಲ್ಲೇಶ್ವರದ ಆಟದ ಮೈದಾನದಲ್ಲೂ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಮಾಡುವಂತ ಆರ್‌.ಎಸ್‌.ಸತ್ಯನಾರಾಯಣ ಕೋರಿದರು.

ಸರ್ವಜ್ಞನಗರ ವಾರ್ಡ್‌ನಲ್ಲಿ ಒಳಚರಂಡಿ ಕೊಳವೆ ಕಟ್ಟಿಕೊಂಡಿದ್ದು, ದುರಸ್ತಿಗೆ ರಕ್ಷಣಾ ಇಲಾಖೆ ಅವಕಾಶ ನೀಡುತ್ತಿಲ್ಲ. ಅವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸದಸ್ಯೆ ಶಶಿರೇಖಾ ಮನವಿ ಮಾಡಿದರು.

‘ಉದಾಸಿನ ಮಠ ಗೋಶಾಲೆಯಲ್ಲಿ 200ಕ್ಕೂ ಹೆಚ್ಚು ಹಸುಗಳಿದ್ದು, ಅವುಗಳಿಗೆ ಮಂಡ್ಯದಿಂದ ಮೇವು ಪೂರೈಕೆ ಸ್ಥಗಿತಗೊಂಡಿದೆ. ಜಾನುವಾರುಗಳಿಗೆ ಆಹಾರ ಒದಗಿಸಲು ವ್ಯವಸ್ಥೆ ಕಲ್ಪಿಸಿ’ ಎಂದರು. 

ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದ್ದು, ಕೊಳವೆಬಾವಿ ದುರಸ್ತಿ ಮಾಡಿಸುವಂತೆ ನಾಗಭೂಷಣ್‌ ಮನವಿ ಮಾಡಿದರು.

ಬಡವರಿಗೆ ನೀಡುವ ಪಡಿತರ ಚೀಟಿಯನ್ನು ಸರ್ಕಾರದಿಂದ ಶೀಘ್ರವಾಗಿ ನೀಡುವಂತೆ  ಕಾಡುಗೊಂಡನಹಳ್ಳಿ ವಾರ್ಡ್‌ ಸದಸ್ಯ ನೌಷೀರ್‌ ಅಹ್ಮದ್‌ ಸಲಹೆ ನೀಡಿದರು.

ಔಷಧಿ ಸಿ೦ಪಡಿಸಲು ನೀಡಿರುವ ಜೆಟ್ಟಿಂಗ್‌ ಯಂತ್ರ ಕೆಟ್ಟುಹೋಗಿದೆ. ವಾರ್ಡ್‌ನಲ್ಲಿರುವ ಮೂರು ಕೊಳೆಗೇರಿಗಳಿಗೆ ಔಷಧ ಸಿಂಪಡಣೆಗೆ ವ್ಯವಸ್ಥೆ ಮಾಡಿ. ಬೀದಿ ದೀಪಗಳು ಉರಿಯುತ್ತಿಲ್ಲ, ಅವರನ್ನು ಸರಿಪಡಿಸಿ ಎಂದು ಜೀವನಭಿಮಾ ನಗರದ ಸದಸ್ಯೆ ವೀಣಾ ಕುಮಾರಿ ಬೇಡಿಕೆ ಸಲ್ಲಿಸಿದರು. 

ಪಡಿತರ ಪೂರೈಕೆ ಸೊಸೈಟಿಗಳಲ್ಲಿ ಆಹಾರ ಸಾಮಗ್ರಿ ಒದಗಿಸಲು ₹ 20 ಸ್ವೀಕರಿಸುತ್ತಿದ್ದಾರೆ. ಈ ಮೊತ್ತವನ್ನು ಕಡಿತಗೊಳಿಸಿ ಎಂದು ದೊಡ್ಡಬೊಮ್ಮಸಂದ್ರದ ವಿ.ವಿ.ಪಾರ್ತಿಬರಾಜನ್‌ ಹೇಳಿದರು.

‘ಹಲಸೂರು ವಾರ್ಡ್‌ನಲ್ಲಿ ಮಾರುಕಟ್ಟೆಗಳು ಬೆಳಗ್ಗಿನಿಂದ ರಾತ್ರಿಯವರೆಗೂ ತೆರೆಯುತ್ತಿವೆ. ಜನರು ಒಂದು ಮೀಟರ್‌ ಅ೦ತರವನ್ನೂ ಕಾಪಾಡುತ್ತಿಲ್ಲ’ ಎಂದು ಮಮತಾ ಸರವಣ ಕಳವಳ ವ್ಯಕ್ತಪಡಿಸಿದರು.

‘ಹೋಮ್‌ ಕ್ವಾರಂಟೈನ್‌– ಕುಟುಂಬವನ್ನು ಸ್ಥಳಾಂತರಿಸಿ’
‘ಲಿಂಗರಾಜಪುರ ವಾರ್ಡ್‌ನ ಕೊಳೆಗೇರಿಯಲ್ಲಿ ನವದೆಹಲಿಯಿಂದ ಬಂದಿರುವ ವ್ಯಕ್ತಿಯನ್ನು ಹೋಮ್‌ ಕ್ವಾರಂಟೈನ್ ಮಾಡಲಾಗಿದೆ. ಈ ಕೊಳೆಗೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನೆಲೆಸಿರುವುದರಿಂದ ಅವರ ಕುಟುಂಬವನ್ನು ಬೇರೆಡೆಗೆ ಸ್ಥಳಾ೦ತರಿಸಿ’ ಎಂದು ಸದಸ್ಯೆ ಲಾವಣ್ಯ ಗಣೇಶ್‌ ರೆಡ್ಡಿ ಮನವಿ ಮಾಡಿದರು.

ಪ್ರಮುಖ ಸಲಹೆಗಳು...

ರೈಲು ಸಂಚಾರ ಸ್ಥಗಿತಗೊ೦ಡಿರುವುದರಿಂದ ರೈಲು ಬೋಗಿಗಳನ್ನು ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಸೂರಿನ ವ್ಯವಸ್ಥ ಕಲ್ಪಿಸಲು ಬಳಸಿ.
–ಆರ್‌.ಸಂಪತ್‌ರಾಜ್‌, ಡಿ.ಜೆ.ಹಳ್ಳಿ ವಾರ್ಡ್‌

**
ಮಾರುಕಟ್ಟೆಗಳು ಮುಚ್ಚಿರುವುದರಿ೦ದ ತಳ್ಳುಗಾಡಿಗಳ ಮೂಲಕ ದೈನಂದಿನ ಅಗತ್ಯ ಸಾಮಗ್ರಿಗಳನ್ನು ಹಾಗೂ ತರಕಾರಿ, ಹಣ್ಣುಗಳ ಮಾರಾಟಕ್ಕೆ ಅನುಮತಿ ನೀಡಿ.
–ಶಿವರಾಜು, ಶಂಕರ ಮಠ ವಾರ್ಡ್

**
ನಮ್ಮ ವಾರ್ಡ್‌ನ ರಸ್ತೆಗಳನ್ನು ಬೇರೆ ದಿನಗಳಲ್ಲಿ ಕಸಗುಡಿಸುವ ಯಂತ್ರ ಬಳಸಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಈಗ ರಸ್ತೆಗಳು ಖಾಲಿ ಇರುವುದರಿಂದ ಈ ಯಂತ್ರ ಬಳಸಿ ಸ್ವಚ್ಛಗೊಳಿಸಿ.
–ನೌಷೀರ್‌ ಅಹ್ಮದ್, ಕಾಡುಗೊಂಡನಹಳ್ಳಿ ವಾರ್ಡ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು