ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಗೂದಲು ಬಿಳಿಯಾಯಿತು, ತಲೆ ಬೋಳಾಯಿತು: ಕಾರ್ಪೊರೇಟರ್‌ಗಳ ನೆನಪು

ಐದು ವರ್ಷಗಳ ಅನುಭವಗಳ ಮೆಲುಕು ಹಾಕಿದ ಪಾಲಿಕೆ ಸದಸ್ಯರು
Last Updated 9 ಸೆಪ್ಟೆಂಬರ್ 2020, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಐದು ವರ್ಷಗಳಲ್ಲಿ ನನ್ನ ಕರಿಗೂದಲು ಬಿಳಿಯಾಯಿತು, ತಲೆ ಬೋಳಾಯಿತು...‘ನರ್ಸರಿಯ ಮಗುವು ಮೊದಲ ಬಾರಿ ಶಾಲೆಗೆ ಹೋದಂತಹ ಅನುಭವ ಕೌನ್ಸಿಲ್‌ ಸಭೆ ಪ್ರವೇಶಿಸಿದಾಗ ನನಗಾಗಿತ್ತು...’

ಬಿಬಿಎಂಪಿ ಸದಸ್ಯರು ತಮ್ಮ ಐದು ವರ್ಷಗಳ ಅವಧಿಯ ಅನುಭವಗಳನ್ನು ಕೌನ್ಸಿಲ್‌ ಸಭೆಯಲ್ಲಿ ಬುಧವಾರ ಮುಕ್ತವಾಗಿ ಹಂಚಿಕೊಂಡಿದ್ದು ಹೀಗೆ.

ಬಿಬಿಎಂಪಿ ಚುನಾಯಿತ ಕೌನ್ಸಿಲ್‌ನ ಕೊನೆಯ ಸಭೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಂತೆ ಕಂಡು ಬಂತು.ಸದಸ್ಯರು ರಸ ಕ್ಷಣಗಳನ್ನು, ನೋವು ನಲಿವುಗಳನ್ನು ಮುಚ್ಚುಮರೆ ಇಲ್ಲದೇ ಹಂಚಿಕೊಂಡರು.

ಕಚ್ಚಾಟಗಳಿರಲಿಲ್ಲ, ಗದ್ದಲದ ವಾತಾವರಣಗಳಿರಲಿಲ್ಲ. ಟೀಕೆ ಟಿಪ್ಪಣಿಗಳ ವರಸೆ ಕಡಿಮೆ ಇತ್ತು. ಕೆಲ ಸದಸ್ಯರು ಲಘು ಹಾಸ್ಯ ಪ್ರಸಂಗಗಳನ್ನು ಮೆಲುಕು ಹಾಕುತ್ತಾ ಸಭೆಯಲ್ಲಿ ನಗೆಯ ಅಲೆ ಏಳುವಂತೆ ಮಾಡಿದರು. ಕೆಲವರು ಗುಟ್ಟಾಗಿಟ್ಟಿದ್ದ ವಿಚಾರಗಳನ್ನು ಪ್ರಸ್ತಾಪಿಸಿ, ಸಹಸದಸ್ಯರ ಕಾಲೆಳೆದು ನಗೆಯುಕ್ಕಿಸಿದರು.

ಚುನಾವಣೆಯಲ್ಲಿ ಗೆದ್ದ ಬಳಿಕ ಅಧಿಕಾರ ಹಿಡಿಯುವ ಮುನ್ನವೇ ಕೇರಳ ಪ್ರವಾಸ ಮಾಡಿದ ಅನುಭವದಿಂದ ಹಿಡಿದು, ನಾಮಪತ್ರ ಸಲ್ಲಿಸಲು ಯಾರದೋ ಬೈಕ್‌ ಏರಿ ಬಂದ ಅನುಭವದವರೆಗೆ ಅನೇಕ ಸ್ವಾರಸ್ಯಕರ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾದವು.

‘ನಾನು ಸಭೆಗೆ ಮೊದಲ ಬಾರಿ ಬರುವಾಗ ತಲೆಗೂದಲು ಕಪ್ಪಗಿತ್ತು. ಈಗ ತಲೆಗೂದಲು ಬಿಳಿಯಾಗಿದ್ದು ಮಾತ್ರವಲ್ಲ, ತಲೆಯೂ ಬೋಳಾಗಿದೆ. ಕಾರ್ಪೊರೇಟರ್‌ ಕೆಲಸ ಎಂದರೆ ಎಷ್ಟು ಕಷ್ಟ ಎಂಬುದು ನಿಮಗೆ ಈಗಲಾದರೂ ಅರ್ಥವಾಗಿರಬಹುದು’ ಎಂದು ದೊಮ್ಮಲೂರು ವಾರ್ಡ್‌ನ ಸದಸ್ಯ ಸಿ.ಆರ್‌. ಲಕ್ಷ್ಮೀನಾರಾಯಣ (ಗುಂಡಣ್ಣ) ತಮ್ಮ ಎಂದಿನ ಹಾಸ್ಯಮಿಶ್ರಿತ ಶೈಲಿಯಲ್ಲಿ ವಿವರಿಸಿದರು.

ಕೆಲವು ಸದಸ್ಯರು ತಮ್ಮ ಅವಧಿಯಲ್ಲಿ ವಾರ್ಡ್‌ನಲ್ಲಿ ಮಾಡಿರುವ ಸಾಧನೆಗಳನ್ನ ಹಂಚಿಕೊಂಡರು. ತಮ್ಮ ಕರ್ತವ್ಯ ನಿರ್ವಹಿಸಲು ನೆರವಾದ ಸಹಸದಸ್ಯರಿಗೆ, ಹಿರಿಯ ಸದಸ್ಯರಿಗೆ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು. ಮತ್ತೊಮ್ಮೆ ಗೆದ್ದು ಬರುವಂತೆ ಪರಸ್ಪರ ಶುಭಹಾರೈಸಿದರು.

‘ನಾಮಪತ್ರ ಸಲ್ಲಿಸಲು ಯಾರದೋ ಬೈಕ್‌ ಏರಿ ಬಂದೆ’

ಉಪಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ನಡೆದ ಫಜೀತಿಯನ್ನು ಮೆಲುಕು ಹಾಕುವ ಉಪಮೇಯರ್ ಸಿ.ಆರ್‌.ರಾಮಮೋಹನರಾಜು ಸದಸ್ಯರ ಮೊಗದಲ್ಲಿ ನಗೆ ಮೂಡಿಸಿದರು.

‘ಕಳೆದ ನಾಲ್ಕು ಅವಧಿಯಲ್ಲಿ ಪಕ್ಷಕ್ಕೆ ಮೇಯರ್‌ ಸ್ಥಾನ ಕೈತಪ್ಪಿದ್ದ ಹತಾಶೆಯಲ್ಲಿದ್ದ ನಾವು ಕೊನೆಯ ಅವಧಿಯಲ್ಲಿ ಹೇಗಾದರೂ ಅಧಿಕಾರ ಹಿಡಿಯುವ ಕಾರ್ಯತಂತ್ರ ರೂಪಿಸಿದ್ದೆವು. ಹಿಂದಿನ ವರ್ಷ ಕೊನೆವರೆಗೂ ನಮ್ಮ ಜೊತೆಗಿದ್ದಜೆಡಿಎಸ್‌ ಸದಸ್ಯ ಇಮ್ರಾನ್‌ ಪಾಷಾ, ಮೇಯರ್‌ ಚುನಾವಣೆ ಮುನ್ನಾದಿನ ರಾತ್ರಿ 2 ಗಂಟೆಗೆ ಕಣ್ಮರೆಯಾಗಿದ್ದ. ಈ ಬಾರಿ ಹಾಗಾಗಬಾರದೆಂದು ನಮಗೆ ಬೆಂಬಲ ನೀಡಿದ್ದ ಪಕ್ಷೇತರ ಸದಸ್ಯರನ್ನು ನಗರದ ಹೋಟೆಲ್‌ನಲ್ಲಿ ಸೇರಿಸಿದ್ದೆವು.’

‘ಮತದಾನದ ದಿನ ಬೆಳಿಗ್ಗೆ ಅವರನ್ನು ಕಾರಿನಲ್ಲಿ ಬಿಬಿಎಂಪಿ ಕಚೇರಿಗೆ ಕರೆ ತರುವಾಗ ಹೆಬ್ಬಾಳ ಮೇಲ್ಸೇತುವೆ ಬಳಿ ಟ್ರಾಫಿಕ್‌ ಜಾಂ ಉಂಟಾಗಿತ್ತು. ಅಷ್ಟರಲ್ಲಿ ಸಚಿವ ಆರ್‌.ಅಶೋಕ ನನಗೆ ಕರೆ ಮಾಡಿ ಉಪಮೇಯರ್‌ ಸ್ಥಾನಕ್ಕೆ ಬೆಳಿಗ್ಗೆ 9.30 ಒಳಗೆ ನಾಮಪತ್ರ ಸಲ್ಲಿಸುವಂತೆ ಹೇಳಿದರು. ಟ್ರಾಫಿಕ್‌ ಜಾಂನಲ್ಲಿ ಸಿಲುಕಿದ್ದ ನನಗೆ ಪಕ್ಷೇತರ ಸದಸ್ಯರನ್ನು ಬಿಟ್ಟುಬಂದರೆ ಅವರು ಕೈತಪ್ಪುವ ಭಯ. ಅವರ ಜೊತೆಗೇ ಬಂದರೆ ಟ್ರಾಫಿಕ್‌ ಜಾಂನಲ್ಲಿ ಸಿಲುಕಿ ಅವಧಿ ಮೀರುವ ಆತಂಕ. ನಾನು ಉಪಮೇಯರ್‌ ಆಗಲಿರುವ ವಿಚಾರ ತಿಳಿಸಿದಾಗ ಪಕ್ಷೇತರ ಸದಸ್ಯರೇ ಬೇರೆ ವಾಹನದಲ್ಲಿ ಬೇಗ ಹೋಗುವಂತೆ ಸಲಹೆ ನೀಡಿದರು’

‘ಕಾರಿನಿಂದ ಇಳಿದು ಯಾರದೋ ಬೈಕ್‌ ಏರಿದೆ. ನೋಡಿದರೆ ಅವರೊಬ್ಬರು ಕನ್ನಡ ಮೇಸ್ಟ್ರು. ನಾನು ಉಪ ಮೇಯರ್‌ ಆಗುತ್ತಿದ್ದೇನೆ ಎಂದಾಗ ಅವರಿಗೆ ಮೊದಲು ನಂಬಿಕೆಯೇ ಬರಲಿಲ್ಲ. ಕಚೇರಿ ತಲುಪುವಷ್ಟರಲ್ಲಿ ಬೆಳಿಗ್ಗೆ 9.20 ಆಗಿತ್ತು. ನಾಮಪತ್ರ ಸಲ್ಲಿಸುವಾಗ ಬೆಳಿಗ್ಗೆ 9.29 ಆಗಿತ್ತು. ಒಂದು ನಿಮಿಷ ತಡವಾಗುತ್ತಿದ್ದರೂ ನಾಮಪತ್ರ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ರಾಮಮೋಹನ ರಾಜು ತಿಳಿಸಿದರು.

***

ಕೋವಿಡ್‌ ಸಂದರ್ಭದಲ್ಲಿ ಅಧಿಕಾರಿಗಳ ದೊಡ್ಡ ತಂಡ ಕಟ್ಟಿಕೊಂಡು ಮೇಯರ್‌ ಆಗಿ ಕಾರ್ಯನಿರ್ವಹಿಸಿದ ಅನುಭವ ಕೊನೆವರೆಗೂ ಅಚ್ಚಳಿಯದೆ ನೆನಪಿನಲ್ಲಿ ಉಳಿಯಲಿದೆ.
– ಎಂ.ಗೌತಮ್‌ ಕುಮಾರ್‌, ಮೇಯರ್‌

ಐದು ವರ್ಷಗಳಲ್ಲಿ ಕೌನ್ಸಿಲ್‌ ಸಭೆಯ ಚರ್ಚೆ ಸಮರ್ಪಕವಾಗಿ ನಡೆದಿಲ್ಲ. ಮಹಿಳಾ ಸದಸ್ಯರಿಗೆ ಸಿಗಬೇಕಾದಷ್ಟು ಅವಕಾಶಗಳು ಸಿಕ್ಕಿಲ್ಲ ಎಂಬ ನೋವಿದೆ
– ಪದ್ಮಾವತಿ, ಕಾಂಗ್ರೆಸ್‌ ಸದಸ್ಯೆ

ಐದು ವರ್ಷ ಕಚ್ಚಾಡುತ್ತಾ ರಾಜಕೀಯ ಮಾಡುತ್ತಾ, ಪರಸ್ಪರ ಶತ್ರುಗಳಂತೆ ಸಭೆಯ ನಡೆಸಿದ್ದೇವೆ. ಐದು ವರ್ಷಗಳಲ್ಲಿ ಪ್ರತಿ ದಿನವೂ ಇದೇ ರೀತಿ ಸಭೆ ನಡೆಯುತ್ತಿದ್ದರೆ ಇನ್ನಷ್ಟು ಅಭಿವೃದ್ಧಿ ಸಾಧಿಸಬಹುದಿತ್ತು
–ಪದ್ಮನಾಭ ರೆಡ್ಡಿ, ಬಿಜೆಪಿ ಸದಸ್ಯ

ಸಮಾಜದಲ್ಲಿ ಬದಲಾವಣೆ ತರುವ ಸಾಧಕರನ್ನು ಮಾತ್ರ ಜನ ಸ್ಮರಿಸುತ್ತಾರೆ. ತಮ್ಮ ಬದಲು ಪರರ ಏಳಿಗೆಗಾಗಿ ದುಡಿಯುವ ಪಾಲಿಕೆ ಸದಸ್ಯರು ಮುಂದಿನ ಅವಧಿಗೆ ಗೆದ್ದುಬರಲಿ
– ಕೆ.ಎ.ಮುನೀಂದ್ರ ಕುಮಾರ್, ಆಡಳಿತ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT