ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸೂಲಿ ಆಗದ ನಿವೇಶನ ನವೀಕರಣ ದರ: ಬಿಡಿಎಗೆ ₹2.37 ಕೋಟಿ ನಷ್ಟ

ವಸೂಲಿ ಆಗದ ನಿವೇಶನ ನವೀಕರಣ ದರ: ನಾಲ್ವರು ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಆರೋಪ
Last Updated 7 ಫೆಬ್ರುವರಿ 2022, 22:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜಸ್ಥಾನ ಜೈನ್‌ ಶ್ವೇತಾಂಬರ ಮೂರ್ತಿ ಪೂಜಕ್ ಸಂಘಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದ್ದ ನಿವೇಶನದ ನವೀಕರಣ ದರ ವಸೂಲು ಮಾಡದೆಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ₹2.37 ಕೋಟಿ ನಷ್ಟ ಮಾಡಲಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆ ನಡೆಸಲು ಅನುಮತಿ ನೀಡುವ ಅಥವಾ ತಿರಸ್ಕರಿಸುವ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಎಸಿಬಿ ವಿಚಾರಣೆಗೆ ಒಪ್ಪಿಸಲು ಮುಖ್ಯಮಂತ್ರಿಯವರು ಒಲವು ತೋರಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಬಿಡಿಎ ಉಪಕಾರ್ಯದರ್ಶಿಯಾಗಿದ್ದ ಡಾ.ಎನ್‌.ಸಿ.ವೆಂಕಟರಾಜು, ಹಿರಿಯ ಶ್ರೇಣಿ ಕಾರ್ಯದರ್ಶಿಯಾಗಿದ್ದ ಬಸವರಾಜು, ನಗರಾಭಿವೃದ್ಧಿ ಇಲಾಖೆಯ ಎಸ್ಟೇಟ್ ಅಧಿಕಾರಿ ನೂರ್ ಜಹರಾ ಖಾನಂ, ಬಿಡಿಎ ಪ್ರಥಮದರ್ಜೆ ಸಹಾಯಕ ಕೆ. ರಾಜೇಂದ್ರ ಕುಮಾರ್ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ
ಕಾಯ್ದೆ–1988ರ ಕಲಂ 17(ಎ)ರ ಅಡಿಯಲ್ಲಿ ವಿಚಾರಣೆ ಅಥವಾ ತನಿಖೆ ಕೈಗೊಳ್ಳಲು ‘ಎಸಿಬಿ’ಗೆ ಅನುಮತಿ ನೀಡಲು ಯಾವುದೇ ಸಮರ್ಥನೀಯ ಅಂಶಗಳು ಕಂಡು ಬಂದಿಲ್ಲ ಎಂದು ಪ್ರಾಧಿಕಾರದ ಆಯುಕ್ತರು
ಅಭಿಪ್ರಾಯಪಟ್ಟಿದ್ದಾರೆ.

ಆದರೆ, ನವೀಕರಣ ದರ ₹2,37,88,625 ಮೊತ್ತವನ್ನು 90 ದಿವಸಗಳ ಒಳಗೆ ಪಾವತಿಸುವ ಷರತ್ತಿಗೆ ಒಳಪಡಿಸಿ 2012ರ ಜನವರಿ 13ರಂದೇ ನವೀಕರಣ ಹಂಚಿಕೆ ಪತ್ರ ನೀಡಲಾಗಿತ್ತು. ಆದರೂ, ಇದುವರೆಗೂ ಈ ಹಣವನ್ನು ವಸೂಲು ಮಾಡದೆಯೇ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಮಾಡಲಾಗಿದೆ ಎಂದು ಮುಖ್ಯ ಜಾಗೃತ ಅಧಿಕಾರಿಯವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಜಯನಗರದ 4ನೇ ಬ್ಲಾಕ್‌ನ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳ ನಿವೇಶನವನ್ನು (ಸಿ.ಎ.) ರಾಜಸ್ಥಾನ ಜೈನ್‌ ಶ್ವೇತಾಂಬರ ಮೂರ್ತಿ ಪೂಜಕ್ ಸಂಘಕ್ಕೆ ನೀಡಲಾಗಿತ್ತು. ಈ ಪ್ರಕರಣದ ಬಗ್ಗೆ ಬಿಡಿಎ ಆಯುಕ್ತರು ವರದಿ ನೀಡಿದ್ದಾರೆ.‌

ರಾಜಸ್ಥಾನ ಜೈನ್‌ ಶ್ವೇತಾಂಬರ ಮೂರ್ತಿ ಪೂಜಕ್ ಸಂಘಕ್ಕೆ ಜಯನಗರ 4ನೇ ಬ್ಲಾಕ್‌ನಲ್ಲಿನ (210+86)2x545’ ಅಳತೆಯ ಸಿ.ಎ. ನಿವೇಶನವನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ದೇವಾಲಯ, ವಿದ್ಯಾರ್ಥಿ ನಿಲಯ, ಧರ್ಮಶಾಲಾ, ಆಶ್ರಮ ಮತ್ತಿತರ ಸಾಮಾಜಿಕ ಚಟುವಟಿಕೆಗಳಿಗೆ ಹಲವು ಷರತ್ತುಗಳನ್ನು ವಿಧಿಸಿ ಗುತ್ತಿಗೆ ಕರಾರು ಪತ್ರವನ್ನು ನೋಂದಾಯಿಸಲಾಗಿತ್ತು. ಈ ಸಂದರ್ಭದಲ್ಲಿ ₹68,595 ಗುತ್ತಿಗೆ ಮೊತ್ತ ಪಾವತಿಸುವಂತೆ ಷರತ್ತಿನಲ್ಲಿ ಸೂಚಿಸಲಾಗಿತ್ತು. ಈ ಮೊತ್ತವನ್ನು ‌ಮೂವತ್ತು ವರ್ಷಗಳ ಅವಧಿಯಲ್ಲಿ ಸಮಾನ ವಾರ್ಷಿಕ ಕಂತು ₹2,286.50 ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಈ ಬಗ್ಗೆ ಗುತ್ತಿಗೆ ಕರಾರು ಪತ್ರವನ್ನು ನೋಂದಾಯಿಸಿ 1966ರ ಡಿಸೆಂಬರ್‌ 14ರಂದು ಸ್ವಾಧೀನ ಪತ್ರ ನೀಡಲಾಗಿತ್ತು.

ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ ನಿಯಮ-1989 ಜಾರಿಗೆ ಬರುವ ಮುನ್ನವೇ ಸಿ.ಎ. ನಿವೇಶನ ಮಂಜೂರು ಮಾಡಲಾಗಿತ್ತು. ಆದರೆ, ಈ ನಿಯಮ ಜಾರಿಗೆ ಬಂದ ನಂತರ 30 ವರ್ಷಗಳಿಗೆ ಗುತ್ತಿಗೆ ಅವಧಿಯನ್ನು ಸೀಮಿತಗೊಳಿಸಲಾಗಿತ್ತು. ಹೀಗಾಗಿ, ಗುತ್ತಿಗೆ ಅವಧಿಯು 1996ರ ಅಕ್ಟೋಬರ್‌ 24ಕ್ಕೆ ಮುಕ್ತಾಯವಾಗಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಿ ನವೀಕರಿಸಿಕೊಳ್ಳಬೇಕು. ಜತೆಗೆ, ಇದುವರೆಗಿನ ಗುತ್ತಿಗೆ ಮೊತ್ತವನ್ನು ಪಾವತಿಸಿರುವ ಚಲನ್‌ಗಳನ್ನು ಸಲ್ಲಿಸುವಂತೆಯೂ ಸೂಚಿಸಲಾಗಿತ್ತು.

1996ರ ಅಕ್ಟೋಬರ್‌ 24ರಂದು 30 ವರ್ಷಗಳ ಗುತ್ತಿಗೆ ಮುಗಿದಿತ್ತು. ಹೀಗಾಗಿ, ಸಂಘದ ಕೋರಿಕೆ ಮೇರೆಗೆ ನಿವೇಶನದ ನೋಂದಣಿಯನ್ನು ಮುಂದಿನ 30 ವರ್ಷಗಳಿಗೆ ನವೀಕರಿಸಲಾಗಿತ್ತು. ಈ ನಿವೇಶನವನ್ನು ಧಾರ್ಮಿಕ ಉದ್ದೇಶಕ್ಕೆ ಹಂಚಿಕೆಯಾಗಿರುವುದರಿಂದ ಮಾರ್ಗಸೂಚಿ ದರದ ಅನ್ವಯ ಒಟ್ಟಾರೆ ಗುತ್ತಿಗೆ ಮೌಲ್ಯವು ಪ್ರತಿ ಚದರ ಅಡಿಗೆ ₹9 ಸಾವಿರದಂತೆ ಲೆಕ್ಕಾಚಾರ ಹಾಕಿದಾಗ ನಿವೇಶನಕ್ಕೆ ಒಟ್ಟು ₹2,37,88,625 ನಿಗದಿಪಡಿಸಲಾಗಿತ್ತು.

ಆದರೆ, ಸಂಘವು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ನಿವೇಶನವನ್ನು 99 ವರ್ಷಗಳ ಅವಧಿಗೆ ನೀಡಲಾಗಿದ್ದು, 2065ರಲ್ಲಿ ಮುಗಿಯಲಿದೆ. ಗುತ್ತಿಗೆ ಸಂದರ್ಭದಲ್ಲಿನ ಷರತ್ತುಗಳಂತೆ ದೇವಾಲಯ ನಿರ್ಮಿಸಲಾಗಿದ್ದು, ಭಕ್ತಾದಿಗಳ ದೇಣಿಗೆಯಿಂದ ನಿರ್ವಹಿಸಲಾಗುತ್ತಿದೆ. ಹೀಗಾಗಿ, ಈ ಮೊದಲಿನಂತೆಯೇ 1966ರ ಮೂಲ ಗುತ್ತಿಗೆಯನ್ನು ಪರಿಗಣಿಸಬೇಕು ಎಂದು ಕೋರಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಡಿಎ, ‘2026ರ ಅಕ್ಟೋಬರ್‌ 24ರವರೆಗೆ ನವೀಕರಣ ಮಾಡಲಾಗಿದೆ. ನಿವೇಶನ ನವೀಕರಣದ ದರ ಕಡಿಮೆ ಮಾಡುವುದನ್ನು ಪರಿಗಣಿಸಲು ಸಾಧ್ಯ ಇಲ್ಲ’ ಎಂದು ಸಂಘಕ್ಕೆ ತಿಳಿಸಿತ್ತು.‌

ನಂತರ, ಗುತ್ತಿಗೆ ಕರಾರಿನಲ್ಲಿನ ಅಂಶಗಳನ್ನು ಗಮದಲ್ಲಿರಿಸಿಟ್ಟುಕೊಂಡು ಸಿ.ಎ. ನಿವೇಶನವನ್ನು ಯಾವ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎನ್ನುವ ಬಗ್ಗೆ ಸಮಗ್ರ ವರದಿಯನ್ನು ಕಾರ್ಯಪಾಲಕ ಎಂಜಿನಿಯರ್‌ ಅವರು ಸಹ ಸಲ್ಲಿಸಿದ್ದರು.

ಈ ಪ್ರಕರಣದ ಕುರಿತಾದ ಎಲ್ಲ ವರದಿಗಳ ಅನ್ವಯ, ಸಂಸ್ಥೆಯು ಗುತ್ತಿಗೆ ಮೊತ್ತವನ್ನು ಪಾವತಿಸಲು ವಿಳಂಬ ಮಾಡಿದ ಅವಧಿಗೆ, ಬಾಕಿ ಗುತ್ತಿಗೆ ಮೊತ್ತದ ಮೇಲೆ ಶೇಕಡ 18ರಷ್ಟು ಬಡ್ಡಿಯನ್ನು ಸಂಸ್ಥೆಗೆ ವಿಧಿಸಲಾಗಿದೆ. ಇದರಿಂದ, ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗದಿರುವಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಎಸಿಬಿಗೆ ಅನುಮತಿ ನೀಡಲು ಸಮರ್ಥನೀಯ ಅಂಶಗಳು ಕಂಡು ಬಂದಿಲ್ಲ ಎಂದು ಪ್ರಾಧಿಕಾರದ ಆಯುಕ್ತರುಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಂಗ ತನಿಖೆಗೆ ಆಗ್ರಹ

‘ಬಿಡಿಎ ಭ್ರಷ್ಟಾಚಾರದ ಕೂಪವಾಗಿದೆ. ಬಿಡಿಎ ಅಕ್ರಮಗಳನ್ನು ಸಮಗ್ರ ತನಿಖೆಗೆ ಒಳಪಡಿಸಲು ನ್ಯಾಯಾಂಗ ತನಿಖೆ ಮಾಡಬೇಕು’ ಎಂದು ಸಿಪಿಎಂ ಬೆಂಗಳೂರು ಉತ್ತರ-ದಕ್ಷಿಣ ಜಿಲ್ಲಾ ಸಮಿತಿಗಳು ಆಗ್ರಹಿಸಿವೆ.

‘ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಬಿಡಿಎ ನಿರ್ಮಿಸಿರುವ ಬಡಾವಣೆಗಳಲ್ಲಿ ಒಬ್ಬರಿಗೆ ಹಂಚಿಕೆಯಾಗಿರುವ ನಿವೇಶನವನ್ನು ಮತ್ತೊಬ್ಬರಿಗೆ ಶುದ್ಧ ಕ್ರಯಪತ್ರ ಮಾಡಿರುವ ಪ್ರಕರಣಗಳಿವೆ. ಭ್ರಷ್ಟ ಅಧಿಕಾರಿಗಳಿಂದ ಇಂತಹ ಅಕ್ರಮಗಳು ನಡೆಯುತ್ತಿವೆ’ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್‌.ಪ್ರತಾಪ್ ಸಿಂಹ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ.ಎನ್‌. ಮಂಜುನಾಥ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹರಾಜಿನ ಮೂಲಕ ಹಂಚಿಕೆ ಮಾಡಬೇಕಾದ ಮೂಲೆ ನಿವೇಶನಗಳನ್ನು ವಸತಿ ನಿವೇಶನಕ್ಕೆ ಬದಲಿ ನಿವೇಶನವಾಗಿ ಹಂಚಿಕೆ ಮಾಡಲಾಗುತ್ತಿದೆ. ನಿವೇಶನದಾರರ ಗಮನಕ್ಕೆ ಬಾರದೆ ಅವರ ನಿವೇಶನ ಹಂಚಿಕೆ ರದ್ದುಪಡಿಸಿ ಬೇರೆ ಯಾರದೋ ಹೆಸರಿಗೆ ಅದನ್ನು ಬದಲಿ ನಿವೇಶನವನ್ನಾಗಿ ನೀಡಿರುವ ಅಕ್ರಮಗಳು ನಡೆದಿವೆ’ ಎಂದು ವಿವರಿಸಿದ್ದಾರೆ.

‘ನಕಲಿ ದಾಖಲೆಗಳನ್ನು ಸೃಷ್ಟಿಸುವ, ನೋಂದಣಿ ಪುಸ್ತಕಗಳ ಹಾಳೆಗಳನ್ನೇ ಬದಲಾಯಿಸುವ ಮೂಲಕ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಬಿಡಿಎ ಅಧ್ಯಕ್ಷರು ಸಹ ಅಕ್ರಮಗಳ ಕುರಿತು ಪರಿಶೀಲಿಸದೆಯೇ ಉದಾಸೀನ ತೋರಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT