ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧೀರ್ ಅಂಗೂರ್ ಜಾಮೀನು ಅರ್ಜಿ ವಜಾ

ಅಲಯನ್ಸ್ ವಿ. ವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ
Last Updated 28 ಏಪ್ರಿಲ್ 2020, 22:06 IST
ಅಕ್ಷರ ಗಾತ್ರ

ಬೆಂಗಳೂರು: ಅಲಯನ್ಸ್ ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಸುಪಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಅಂಗೂರ್ ಅವರಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಈ ಕುರಿತಂತೆ ಪ್ರಕರಣದ ಒಂದನೇ ಆರೋಪಿ ಸುಧೀರ್ ಅಂಗೂರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 56ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್ ವಜಾಗೊಳಿಸಿದ್ದಾರೆ.

ವಜಾಕ್ಕೆ ನೀಡಿರುವ ಕಾರಣಗಳು:

*ಅಯ್ಯಪ್ಪ ಕೊಲೆಯಾಗುವ ದಿನವೇ, ಎರಡನೇ ಆರೋಪಿ ಸೂರಜ್ ಸಿಂಗ್‌ಗೆ ಸುಧೀರ್ ಅಂಗೂರ್ ₹ 50 ಸಾವಿರ ಪಾವತಿ ಮಾಡಿರುವುದು ಸುಪಾರಿ ಕೊಲೆಯ ಆರೋಪಕ್ಕೆ ಪುಷ್ಟಿ ನೀಡುತ್ತದೆ.

*ಸುಪಾರಿ ಕೊಲೆ ಆರೋಪಕ್ಕೆ ಇಂಬು ನೀಡುವಂತೆ ಅಯ್ಯಪ್ಪ ಅವರ ಚಲನವಲನಗಳನ್ನು ಆರೋಪಿಗಳು, ಸುಧೀರ್ ಅಂಗೂರ್ ನಿರ್ದೇಶ‌ನದ ಮೇರೆಗೆ 2019ರ ಮಾರ್ಚ್‌ ತಿಂಗಳಿನಿಂದ ಅಕ್ಟೋಬರ್‌ವರೆಗೆ ಬೆನ್ನು ಹತ್ತಿ ಮಾಹಿತಿ ಸಂಗ್ರಹಿಸಿದ್ದರು ಎಂಬ ವಾದ ಸರಣಿ ಗಮನಾರ್ಹ.

*ಬಂಧಿತ 12 ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಸಾಕ್ಷ್ಯಗಳು ಆರೋಪಿಗೆ ಜಾಮೀನು ನೀಡಬಾರದು ಎಂಬ ಆಕ್ಷೇಪಕ್ಕೆ ಸಕಾರಣವಾಗಿವೆ.

*ಅಯ್ಯಪ್ಪ ದೊರೆ ಕೊಲೆಯಾದ ದಿನ ಸುಧೀರ್ ಮೊಬೈಲ್ ನಲ್ಲಿದ್ದ ಮಾಹಿತಿಗಳನ್ನು ನಾಶಪಡಿಸಲಾಗಿತ್ತು ಎಂಬ ಪ್ರಾಸಿಕ್ಯೂಷನ್ ವಾದ ಜಾಮೀನು ಅರ್ಜಿ ವಜಾಕ್ಕೆ ಪುಷ್ಟಿ ನೀಡುತ್ತದೆ.

'ಅಯ್ಯಪ್ಪ ದೊರೆ ಅವರನ್ನು 2019ರ ಅಕ್ಟೋಬರ್ 15ರಂದು ರಾತ್ರಿ ಅವರ ಮನೆಯಿಂದ ಕೂಗಳತೆ ದೂರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಕೊಲೆ ನಡೆದ ದಿನ ಸುಧೀರ್ ಅಂಗೂರ್ ಅಲಯನ್ಸ್ ವಿವಿ ಕುಲಪತಿಯಾಗಿದ್ದರು.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಆರ್.ಟಿ ನಗರ ಠಾಣೆ ಪೊಲೀಸರು 2020ರ ಜನವರಿ 25ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಚ್.ಹನುಮಂತರಾಯ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT