ಸೋಮವಾರ, ನವೆಂಬರ್ 18, 2019
28 °C
ಮೃತ ಮಹಿಳೆಯ ಮಗಳಿಗೆ ₹ 25 ಸಾವಿರ

ಪತ್ನಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ

Published:
Updated:

ಬೆಂಗಳೂರು: ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪತ್ನಿಯನ್ನೇ ಕತ್ತು ಹಿಸುಕಿ ಕೊಂದಿದ್ದ ಅಪರಾಧಿ ಅನಿಲ್‌ಕುಮಾರ್ (35) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 59ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮುನಿಲಕ್ಷ್ಮಮ್ಮ ಎಂಬುವರ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶೆ ಕೆ.ಬಿ.ಗೀತಾ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ರೇವಣಸಿದ್ದಪ್ಪ ವಾದಿಸಿದ್ದರು. 

ಅಪರಾಧಿ ಅನಿಲ್‌ಕುಮಾರ್ ಹಾಗೂ ಮುನಿಲಕ್ಷ್ಮಮ್ಮ, ಮಗಳ ಜೊತೆ ಬಂಡೇಪಾಳ್ಯದಲ್ಲಿ ವಾಸವಿದ್ದರು. ಮುನಿಲಕ್ಷ್ಮಮ್ಮ ಅವರ ಶೀಲದ ಬಗ್ಗೆ ಅನುಮಾನಗೊಂಡಿದ್ದ ಅಪರಾಧಿ, ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದ.

2014ರ ಆಗಸ್ಟ್ 26ರಂದೂ ಜಗಳ ತೆಗೆದಿದ್ದ ಅಪರಾಧಿ, ಮುನಿಲಕ್ಷ್ಮಮ್ಮ ಅವರ ಕತ್ತು ಹಿಸುಕಿ ಕೊಂದಿದ್ದ. ಆ ಸಂಬಂಧ ಮೃತ ಮಹಿಳೆಯ ತಂದೆ ಗಿಡ್ಡಪ್ಪ ಮಡಿವಾಳ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಅಂದಿನ ಇನ್‌ಸ್ಪೆಕ್ಟರ್ ಎಂ.ಎಂ.ಪ್ರಶಾಂತ್, 23 ಮಂದಿ ಸಾಕ್ಷಿಗಳ ಹೇಳಿಕೆ ಹಾಗೂ ಪುರಾವೆಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮಗಳಿಗೆ ₹25 ಸಾವಿರ: ‘ಜೀವಾವಧಿ ಶಿಕ್ಷೆಯ ಜೊತೆಗೆ ಅಪರಾಧಿಗೆ ₹50 ಸಾವಿರ ದಂಡವನ್ನೂ ವಿಧಿಸಲಾಗಿದೆ. ಅದರಲ್ಲಿ ₹25 ಸಾವಿರವನ್ನು ಮುನಿಲಕ್ಷ್ಮಮ್ಮ ಅವರ ಮಗಳಿಗೆ ನೀಡುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ’ ಎಂದು ಕೆ.ಎಸ್.ರೇವಣಸಿದ್ದಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)