ಭಾನುವಾರ, ಮಾರ್ಚ್ 29, 2020
19 °C
ಕೆಪಿಎಸ್‌ಸಿ: 2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದ

ಕೆಪಿಎಸ್‌ಸಿ: ನ್ಯಾಯಾಲಯಕ್ಕೆ ಪುನರ್‌ ಪರಿಶೀಲನಾ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ನೇಮಕಾತಿ ವಿಷಯದಲ್ಲಿ ಕೋರ್ಟ್‌ಗೆ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ’ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.

ವಿಧಾನಪರಿಷತ್‌ನಲ್ಲಿ ಮಂಗಳವಾರ ಕಾಂಗ್ರೆಸ್ಸಿನ ಪಿ.ಆರ್‌. ರಮೇಶ, ಜೆಡಿಎಸ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ, ಶ್ರೀಕಂಠಯ್ಯ ಮತ್ತಿತರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಸಾಲಿನ ನೇಮಕಾತಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ಅದೇ ಆದೇಶವನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದೆ. ಹುದ್ದೆಗಳಿಗೆ ನೇಮಕಗೊಂಡ ಬಳಿಕ ಪಟ್ಟಿ ರದ್ದುಗೊಂಡಿದ್ದರಿಂದ ಕೆಲಸದಿಂದ ವಂಚಿತರಾದವರ ಬಗ್ಗೆ ಸರ್ಕಾರಕ್ಕೂ ಅನುಕಂಪವಿದೆ’ ಎಂದರು.

ವಿಷಯ ಪ್ರಸ್ತಾಪಿಸಿದ ರಮೇಶ್‌, ‘ನೇಮಕಾತಿ ವಿಷಯದಲ್ಲಿ ಸತ್ಯವನ್ನು ಮುಚ್ಚಿಟ್ಟು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಅಲ್ಲದೆ, ಕರ್ನಾಟಕ ಲೋಕ ಸೇವಾ ಆಯೋಗ ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ವರದಿ ಮಂಡಿಸಿದರೂ, ಸಂವಿಧಾನದ ವಿಧಿ 323 (2) ಅನ್ವಯ ಸದಸ್ಯರಿಗೆ ಚರ್ಚೆಗೆ ಅವಕಾಶ ಸಿಕ್ಕಿಲ್ಲ’ ಎಂದರು.

‘ಯಾರೊ ಮಾಡಿದ ತಪ್ಪಿಗೆ 362 ಅಭ್ಯರ್ಥಿಗಳು ಬಲಿಯಾಗಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆ ಆದವರಿಗೂ ಅನ್ಯಾಯವಾಗಿದೆ. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳ ಮೇಲೆ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಹೀಗಾಗಿ‌, ಈ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಬೇಕು’ ಎಂದು ಹೊರಟ್ಟಿ ವಾದಿಸಿದರು.

‘ಸಿಐಡಿ ನೀಡಿದ್ದ ಮಧ್ಯಂತರ ವರದಿ ಆಧರಿಸಿ ಅಧಿಸೂಚನೆಯನ್ನು ವಾಪಸು‍ ಪಡೆದಿತ್ತು. ಈ ರೀತಿ ಮಧ್ಯಂತರ ವರದಿ ಮೇಲೆ ನೇಮಕಾತಿ ಅಧಿಸೂಚನೆ ವಾಪಸು ಪಡೆಯಲು ಕಾನೂನಿನಲ್ಲಿ ಅವಕಾಶ ಇದೆಯೇ’ ಎಂದು ಮರಿತಿಬ್ಬೇಗೌಡ ಪ್ರಶ್ನಿಸಿದರು.’

‘ನೇಮಕಾತಿ ವೇಳೆ ಕೆಪಿಎಸ್‌ಸಿ ಸದಸ್ಯರಾಗಿದ್ದವರು ನಿವೃತ್ತರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಪ್ರಶ್ನೆ ಈಗ ಉದ್ಭವಿಸುವುದಿಲ್ಲ’ ಎಂದು ಮಾಧುಸ್ವಾಮಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು