ಶುಕ್ರವಾರ, ಜೂನ್ 5, 2020
27 °C

ಕೊರೊನಾ: 7 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಗುರುವಾರ ಒಂದೇ ದಿನ ಏಳು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಕೋವಿಡ್‌ ಪೀಡಿತರ ಸಂಖ್ಯೆ 256ಕ್ಕೆ ಏರಿಕೆಯಾಗಿದೆ. 

ನಗರದಲ್ಲಿ ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ ಒಬ್ಬರು ಹೊರ ರಾಜ್ಯದವರಾಗಿದ್ದಾರೆ. ಪಾದರಾಯನಪುರದಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದವರಲ್ಲಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿದೆ. 15 ವರ್ಷದ ಬಾಲಕಿ, 14 ವರ್ಷದ ಬಾಲಕ, 17 ವರ್ಷದ ಬಾಲಕಿ ಹಾಗೂ 40 ವರ್ಷದ ಪುರುಷ ಸೋಂಕಿತರಾಗಿದ್ದಾರೆ. ಕ್ವಾರಂಟೈನ್‌ ಕೇಂದ್ರಕ್ಕೆ ದಾಖಲಾದಾಗ ನಡೆಸಿದ ಪರೀಕ್ಷೆಯಲ್ಲಿ ಇವರಿಗೆ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ಅಲ್ಲಿಂದ ಬಿಡುಗಡೆಗೊಳಿಸುವ ಮೊದಲು ನಡೆಸಿದ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಪಾದರಾಯನಪುರದಲ್ಲಿ ಸೋಂಕಿತರ ಸಂಖ್ಯೆ 61ಕ್ಕೆ ತಲುಪಿದೆ.

ಆಂಧ್ರಪ್ರದೇಶದ ಅನಂತಪುರದ ವೃದ್ಧರೊಬ್ಬರು ಕೆಲದಿನಗಳ ಹಿಂದಷ್ಟೇ ಕೊರೊನಾ ಸೋಂಕಿಗೆ ನಗರದಲ್ಲಿ ಬಲಿಯಾಗಿದ್ದರು. ಅವರ ಸಂಪರ್ಕದಿಂದ ಪತ್ನಿಗೂ ಸೋಂಕು ತಗುಲಿತ್ತು. ಆದರೆ, ಪುತ್ರನಿಗೆ ಪರೀಕ್ಷೆ ವೇಳೆ ಸೋಂಕು ಕಾಣಿಸಿಕೊಂಡರಲಿಲ್ಲ. ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. 12ನೇ ದಿನ ಎರಡನೇ ಬಾರಿ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಚೆನ್ನೈನಿಂದ ನಗರಕ್ಕೆ ವಾಪಸ್ ಆಗಿದ್ದ ಕೆ.ಆರ್.ಪುರದ ನಿವಾಸಿಗೆ ಸೋಂಕು ಇರುವುದು ಕೆಲ ದಿನಗಳ ಹಿಂದೆ ದೃಢವಾಗಿತ್ತು. ಈಗ ಅವರ 40 ವರ್ಷದ ಪತ್ನಿ ಹಾಗೂ 10 ವರ್ಷದ ಮಗನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಮೂವರು ಒಟ್ಟಿಗೆ ಕಾರಿನಲ್ಲಿ ಚೆನ್ನೈಗೆ ತೆರಳಿ, ನಗರಕ್ಕೆ ಮರಳಿದ್ದರು.

ನಗರದಲ್ಲಿ ಈವರೆಗೆ 124 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 122 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು