ಸೋಮವಾರ, ಜನವರಿ 25, 2021
15 °C

ಕೋವಿಡ್-19: ಸಂಕಷ್ಟದಲ್ಲಿರುವವರಿಗೆ ಅಕ್ಷಯಪಾತ್ರೆ–ಹಿಮಾಲಯದಿಂದ ಹ್ಯಾಪಿನೆಸ್ ಕಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19 ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುವ ಸಲುವಾಗಿ ಅಕ್ಷಯಪಾತ್ರೆ ಪ್ರತಿಷ್ಠಾನದ ಜೊತೆಗೆ ಬಹುರಾಷ್ಟ್ರೀಯ ಔಷಧ ಕಂಪೆನಿ ಹಿಮಾಲಯ ಕೈಜೋಡಿಸಿದೆ. ನಿರ್ಗತಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುವ ಸಲುವಾಗಿ 2016ರಿಂದ ಇಲ್ಲಿಯವರೆಗೆ ಸುಮಾರು 4 ಕೋಟಿ ರೂಪಾಯಿಗಳ ಕೊಡುಗೆ ನೀಡಿರುವ ಕಂಪನಿಯು, ಇದೀಗ ಸುಮಾರು 7,146 ಹ್ಯಾಪಿನೆಸ್‌ ಕಿಟ್‌ಗಳ ಪ್ರಾಯೋಜಕತ್ವ ವಹಿಸಿದೆ. ಇದರಿಂದ ಸುಮಾರು 36,300 ಮಕ್ಕಳಿಗೆ ನೆರವಾಗಿದೆ.

ಈ ಬಗ್ಗೆ ಮಾತನಾಡಿರುವ ಹಿಮಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಹಣಕಾಸು ಅಧಿಕಾರಿ ಜೈಶ್ರೀ ಉಲ್ಲಾಳ್‌ ಅವರು, ‘ಸಮುದಾಯ ಸೇವಾ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹಿಮಾಲಯ ದೃಢ ಸಂಕಲ್ಪವನ್ನು ಹೊಂದಿದೆ. ಹ್ಯಾಪಿನೆಸ್‌ ಕಿಟ್‌ಗಳನ್ನು ವಿತರಿಸುವ ಮೂಲಕ ಮಕ್ಕಳ ಜೀವನದಲ್ಲಿ ಸಂತಸ ಮೂಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ಅಕ್ಷಯ ಪಾತ್ರೆ ಪ್ರತಿಸ್ಠಾನದೊಂದಿಗೆ ಕೈಜೋಡಿಸಲಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳು ಮತ್ತು ಅವರ ಕುಟುಂಬಕ್ಕೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಕಿಟ್‌ ಪೂರೈಸಲಿವೆ. ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಕ್ರಮವನ್ನು ಕೈಗೊಳ್ಳುವ ಮೂಲಕ ಸೌಲಭ್ಯವಂಚಿತ ಸಮುದಾಯಗಳ ಅಭಿವೃದ್ಧಿಯ ಮೇಲೆ ಸುಸ್ಥಿರ ಪರಿಣಾಮ ಉಂಟುಮಾಡುವುದರ ಕಡೆಗೂ ಕಂಪನಿ ಗಮನಾರ್ಹ ಹೆಜ್ಜೆ ಇರಿಸಿದೆ’ ಎಂದು ತಿಳಿಸಿದ್ದಾರೆ.

ಅಕ್ಷಯಪಾತ್ರೆ ಪ್ರತಿಷ್ಠಾನದ ಸಿಇಒ ಶ್ರೀಧರ್ ವೆಂಕಟ್ ಅವರು, ‘ಲಕ್ಷಾಂತರ ಮಕ್ಕಳಿಗೆ ಪೋಷಕಾಂಶಯುತ ಆಹಾರ ಪೂರೈಸುವ ಗುರಿಯತ್ತ ಸಾಕಷ್ಟು ಕೊಡುಗೆ ನೀಡಿರುವ ಹಿಮಾಲಯಕ್ಕೆ ಧನ್ಯವಾದಗಳು. ಭಾರತ ತೀವ್ರ ಅಪೌಷ್ಟಿಕತೆ ಹೊಂದಿರುವುದಲ್ಲದೆ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ಹಿಂದುಳಿದಿದೆ ಎಂಬುದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಕೋವಿಡ್–19 ಬಳಿಕ ಇದು ಮತ್ತಷ್ಟು ಹದಗೆಟ್ಟಿದೆ. 2025ರ ಹೊತ್ತಿಗೆ ಹಸಿವು ಮತ್ತು ಅಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸುವ ವಿಶ್ವಾಸ ಹೊಂದಿದ್ದೇವೆ. 2025ರ ವೇಳೆಗೆ 500 ಕೋಟಿಯಷ್ಟು ಭೋಜನ ಒದಗಿಸುವ ಗುರಿ ಹೊಂದಿದ್ದು, ಹಿಮಾಲಯ ನೆರವಾಗಲಿದೆ’ ಎಂದು ಹೇಳಿದ್ದಾರೆ.

ಹಿಮಾಲಯ ಸಂಸ್ಥೆಯು ಜೈವಿಕ ಸಂರಕ್ಷಣೆ–ಸುಸ್ಥಿರತೆ, ಆರೋಗ್ಯ–ನೈರ್ಮಲ್ಯ, ಅಂಗವಿಕಲರು, ರೋಗಿಗಳು ಮತ್ತು ಕೃಷಿಕ ಸಮುದಾಯದ ಸಬಲೀಕರಣಕ್ಕಾಗಿಯೂ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು