ಮಂಗಳವಾರ, ಜೂನ್ 15, 2021
23 °C
ಖಚಿತ ಫಲಿತಾಂಶ ನೀಡದ ಆರ್‌ಟಿ ಪಿಸಿಆರ್‌ ಪರೀಕ್ಷೆ

‘ಬಿಯು’ ಸಂಖ್ಯೆಗೆ ಪಡಿಪಾಟಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವ್ಯಕ್ತಿಯ ಆರೋಗ್ಯ ಪರಿಸ್ಥಿತಿಗಿಂತ ಅವರು ನೀಡಬೇಕಾದ ‘ದಾಖಲೆ’ಗಳಂತಹ ತಾಂತ್ರಿಕ ಅಂಶಗಳ ಕಡೆಗೆ ಆದ್ಯತೆ ನೀಡುತ್ತಿರುವುದರಿಂದ ಹಲವರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿದ್ದವರೂ ಬಿ.ಯು (ಬೆಂಗಳೂರು ಅರ್ಬನ್‌) ಸಂಖ್ಯೆ ಸಿಗದೆ ಪಡಿಪಾಟಲು ಅನುಭವಿಸುವಂತಾಗಿದೆ.

‘ನಮ್ಮ ಸಂಬಂಧಿಕರೊಬ್ಬರಿಗೆ ಉಸಿರಾಟದ ಸಮಸ್ಯೆ ಇತ್ತು. ಜ್ವರ, ಕೆಮ್ಮುನಂತಹ ಲಕ್ಷಣಗಳೂ ಇದ್ದವು. ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿದಾಗ, ಕೊರೋನಾ ಸೋಂಕು ಇಲ್ಲ ಎಂದು ವರದಿ ಬಂದಿತ್ತು. ಆದರೆ, ಸಿಟಿ ಸ್ಕ್ಯಾನ್‌ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಬಿಯು ಸಂಖ್ಯೆ ಸಿಗದೆ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಾಪಸ್‌ ಕಳುಹಿಸಿದರು’ ಎಂದು ರೋಗಿಯ ಸಂಬಂಧಿಯೊಬ್ಬರು ಅಳಲು ತೋಡಿಕೊಂಡರು.

‘ನಮ್ಮ ಭಾವ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆರ್‌ಟಿ ಪಿಸಿಆರ್‌ ಪರೀಕ್ಷೆ ಮಾಡಿಸಿದಾಗ ಅದರಲ್ಲಿ ನಿಖರ ಫಲಿತಾಂಶ ಸಿಗಲಿಲ್ಲ. ₹ 6,000 ಕೊಟ್ಟು ಸಿಟಿ ಸ್ಕ್ಯಾನ್ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ಬಿಯು ಸಂಖ್ಯೆ ಇಲ್ಲದಿದ್ದರೆ ಶೇ 70ರಷ್ಟು ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುವುದೇ ಇಲ್ಲ. ಕಣ್ಮುಂದೆಯೇ ಭಾವ ಅವರನ್ನು ಕಳೆದುಕೊಳ್ಳಬೇಕಾಯಿತು’ ಕಿರುತೆರೆ ನಟ ಪವನ್ ‘ಫೇಸ್‌ಬುಕ್‌’ನಲ್ಲಿ ಅಳಲು ಹೇಳಿಕೊಂಡಿದ್ದಾರೆ. 

‘ಬಿಯು ಸಂಖ್ಯೆ ಸಿಗದೆ ಆಸ್ಪತ್ರೆಗಳಲ್ಲಿ ದಾಖಲಾದರೆ, ಆಕ್ಸಿಜನ್, ಐಸಿಯು ಹಾಸಿಗೆ, ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಎಲ್ಲದಕ್ಕೂ ಮೂರು ನಾಲ್ಕು ಪಟ್ಟು ಹೆಚ್ಚು ದುಡ್ಡು ಕೊಡಬೇಕು. ಬಿಯು ಸಂಖ್ಯೆ ಸಿಗದವರು ಬೀದಿಯಲ್ಲಿಯೇ ಸಾಯಬೇಕಾ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಗ ಬದುಕುತ್ತಿದ್ದ: ‘ಮಲ್ಲತ್ತಹಳ್ಳಿ ನಿವಾಸಿಯಾದ ನನ್ನ ಮಗ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಆಸ್ಪತ್ರೆಯವರಿಗೆ ಕೇಳಿದರೆ ಬಿಯು ಸಂಖ್ಯೆ ಕೇಳಿದರು. ಈ ಸಂಖ್ಯೆಗಾಗಿ 108ಕ್ಕೆ ಕರೆ ಮಾಡಿದರೆ 1912ಗೆ ಫೋನ್ ಮಾಡುವಂತೆ ಹೇಳಿದರು. ಅವರಿಗೆ ಮಾಡಿದರೆ ಮತ್ತೊಂದು ಸಂಖ್ಯೆಗೆ ಮಾಡುವಂತೆ ಹೇಳಿದರು. ನೋಡಲ್‌ ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಜನರಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ನನ್ನ ಮಗ ಕೊನೆಯುಸಿರೆಳೆದ’ ಎಂದು ಪೋಷಕರೊಬ್ಬರು ಕಣ್ಣೀರಿಟ್ಟರು.

‘ಸಾರಿ ಪ್ರಕರಣಕ್ಕೂ ಬಿಯು ಸಂಖ್ಯೆ ನೀಡಿ’
‘ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಹೊಂದಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಇಂತಹ ಪ್ರಕರಣಗಳ ರೋಗಿಗಳಿಗೂ ಬಿಯು ಸಂಖ್ಯೆ ನೀಡಿ ಪೋರ್ಟಲ್‌ನಲ್ಲಿ ಅವರ ವಿವರ ದಾಖಲಿಸಿದರೆ ಬಹಳಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ನಾಗರಾಜ್‌ ಹೇಳಿದರು.

‘ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದಾಗ ಸಾರಿ ಸಮಸ್ಯೆಯಿಂದ ನಮ್ಮ ಆಸ್ಪತ್ರೆಯಿಂದ ದಾಖಲಾದವರ ಪೈಕಿ ಶೇ 25ರಷ್ಟು ಮಂದಿಯಲ್ಲಿ ಕೋವಿಡ್‌ ದೃಢಪಡುತ್ತಿತ್ತು. ಆದರೆ, ಈಗ ಈ ಪ್ರಮಾಣ ಶೇ 90ರಿಂದ ಶೇ 92ಕ್ಕೆ ಏರಿದೆ’ ಎಂದು ಅವರು ಹೇಳಿದರು.

‘ಸದ್ಯ ನಮ್ಮ ಆಸ್ಪತ್ರೆಯಲ್ಲಿ ಸಾರಿ ರೋಗಿಗಳು 92 ಜನ ಇದ್ದರೆ, ಕೋವಿಡ್‌ ರೋಗಿಗಳು 90 ಜನ ಇದ್ದಾರೆ. 34 ಐಸಿಯು ಹಾಸಿಗೆಗಳೂ ಭರ್ತಿಯಾಗಿವೆ’ ಎಂದು ಹೇಳಿದರು.

‘ಕೋವಿಡ್‌ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಮೀಸಲಿರಿಸಿದಂತೆ ಸಾರಿ ಪ್ರಕರಣಗಳಿಗೂ ಇನ್ನೂ ಹೆಚ್ಚಿನ ಆಸ್ಪತ್ರೆಗಳನ್ನು ಮೀಸಲಿಡಬೇಕು. ಈ ರೋಗಿಗಳ ಚಿಕಿತ್ಸೆಗೂ ಹೆಚ್ಚಿನ ಹಾಸಿಗೆಗಳನ್ನು ಮೀಸಲಿಡುವಂತೆ ಆಸ್ಪತ್ರೆಗಳಿಗೆ ಸೂಚಿಸಬೇಕು’ ಎಂದು ಸಲಹೆ ನೀಡಿದರು.

‘ಸಾರಿ ರೋಗಿಗಳಿಗೂ ಹಾಸಿಗೆ ಮೀಸಲು’
‘ಸಾರಿ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ವಾರ್ಡ್‌ಗಳನ್ನು ಮೀಸಲಿರಿಸಲಾಗಿದೆ. ನಗರದ ರಾಜೀವ್‌ ಗಾಂಧಿ ಆಸ್ಪತ್ರೆ ಮತ್ತು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 108 ಕರೆ ಮಾಡಿ, ತೀವ್ರ ಉಸಿರಾಟದ ಸಮಸ್ಯೆ ಇದೆ ಎಂದು ಹೇಳಿದರೆ ಈ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ. ಸಾರಿ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರ್ವಹಣೆಯ ಸವಾಲು
‘ಕೋವಿಡ್‌ ಪರೀಕ್ಷೆ ಮಾಡಿದಾಗ ಸೋಂಕು ದೃಢಪಡುವುದಕ್ಕಿಂತ ಸೋಂಕು ಇಲ್ಲ ಎಂದು ವರದಿ ಬರುವ ರೋಗಿಗಳ ಸಂಖ್ಯೆ ಜಾಸ್ತಿ ಇರುತ್ತದೆ. ಈಗ ಸೊಂಕು ದೃಢಪಟ್ಟವರ ಮಾಹಿತಿಯನ್ನು ಆದ್ಯತೆಯ ಮೇರೆಗೆ ಪೋರ್ಟಲ್‌ನಲ್ಲಿ ಮೊದಲು ಭರ್ತಿ ಮಾಡಲಾಗುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ಪ್ರಕ್ರಿಯೆ ಸರಾಗವಾಗಿ ನಡೆಯುವ ಉದ್ದೇಶದಿಂದ ಆಯಾ ನಗರ ಅಥವಾ ಜಿಲ್ಲೆಯ ಕೋಡ್‌ ಬಳಸಿ ರೋಗಿಗಳ ಸಂಖ್ಯೆ ನೀಡಲಾಗುತ್ತಿದೆ’ ಎಂದು ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಸಾರಿ ಪ್ರಕರಣಗಳನ್ನೂ ಕೋವಿಡ್‌ ಎಂದು ಪರಿಗಣಿಸಿ, ಅವುಗಳಿಗೆ ಸಂಖ್ಯೆ ನೀಡಬೇಕು ಎಂದರೆ ಸಾಕಷ್ಟು ಕೆಲಸ ಹಿಡಿಯುತ್ತದೆ, ಸಿಬ್ಬಂದಿಯೂ ಬೇಕಾಗುತ್ತಾರೆ. ಇವುಗಳ ನಿರ್ವಹಣೆಯ ಸವಾಲು ಎದುರಾಗುತ್ತದೆ’ ಎಂದೂ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು