ಶನಿವಾರ, ಮಾರ್ಚ್ 28, 2020
19 °C
ಎರಡನೇ ಅಭಿಪ್ರಾಯಕ್ಕೆ ಪುಣೆಯ ಎನ್‌ಐವಿಗೆ ಮಾದರಿ ರವಾನೆ

ಪ್ರಯೋಗಾಲಯ ಇದ್ದರೂ ವರದಿ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳ ಪರೀಕ್ಷೆಗೆ ಪ್ರಯೋಗಾಲಯಗಳನ್ನು ಸ್ಥಾಪಿಸಿದರೂ ವರದಿಗಳು ಅಂದೇ ರೋಗಿಗಳ ಕೈಸೇರುತ್ತಿಲ್ಲ. 

ರಾಜ್ಯದಲ್ಲಿ ಸದ್ಯ ಐದು ಪ್ರಯೋಗಾಲಯ ಹಾಗೂ ಎರಡು ಮಾದರಿಗಳ ಸಂಗ್ರಹ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಗಳಿಗೆ ರವಾನೆ ಮಾಡಲಾಗುತ್ತದೆ. ಅಂದೇ ವರದಿ ಬಂದರೂ ಎರಡನೇ ಅಭಿಪ್ರಾಯ ಪಡೆಯಲು  ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ ವ್ಯಕ್ತಿಗಳ ಮಾದರಿಗಳನ್ನು (ಎನ್‌ಐವಿ) ಕಳುಹಿಸಲಾಗುತ್ತಿದೆ. ಇದರಿಂದಾಗಿ ವರದಿಗಳು ರೋಗಿಗಳ ಕೈಸೇರುವುದು ವಿಳಂಬವಾಗುತ್ತಿದೆ. 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿಯಮಾವಳಿ ಪ್ರಕಾರ ಸೋಂಕು ದೃಢಪಟ್ಟಲ್ಲಿ ಅವರ ಮಾದರಿಗಳನ್ನು  (2ಎಂ.ಎಲ್) ಪುಣೆಯ ಎನ್‌ಐವಿಗೆ ಕಡ್ಡಾಯವಾಗಿ ಕಳುಹಿಸಬೇಕು. ಅದೇ ರೀತಿ, ಮೊದಲ 10 ಪ್ರಕರಣಗಳಲ್ಲಿ ನೆಗೆಟಿವ್ ಎಂದು ವರದಿ ಉಲ್ಲೇಖಿಸಿದರೂ ಎರಡನೇ ಅಭಿಪ್ರಾಯ ಪಡೆಯಲು ಮಾದರಿಯನ್ನು (1 ಎಂ.ಎಲ್) ರವಾನಿಸಬೇಕು. 

ನೂತನ ಪ್ರಯೋಗಾಲಯವು ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, ಕೊರೊನಾ ವೈರಸ್, ಹೆಪಟೈಟಿಸ್-ಬಿ, ಡಿಪ್ತೀರಿಯಾ ಸೇರಿದಂತೆ 5 ರೋಗಗಳನ್ನು ಪತ್ತೆಹಚ್ಚಬಹುದಾಗಿದೆ.

ವರದಿ ಬಹಿರಂಗ ಇಲ್ಲ: ಮಂಡಳಿಯ ನಿಯಮಾವಳಿಯ ಪ್ರಕಾರ ಪ್ರಾದೇಶಿಕ ಪ್ರಯೋಗಾಲಯಗಳಲ್ಲಿ ಸೋಂಕು ಶಂಕಿತರ ವರದಿ ಪಾಸಿಟಿವ್ ಬಂದರೂ ಬಹಿರಂಗಪಡಿಸುವಂತಿಲ್ಲ. ರೋಗಿಗೆ ಚಿಕಿತ್ಸೆಯನ್ನು ಮುಂದುವರಿಸಿ, ಪ್ರತ್ಯೇಕ ವಾರ್ಡ್‌ನಲ್ಲಿ ನಿಗಾ ಇಡಬೇಕು. ಕೂಡಲೇ ಅವರ ಮಾದರಿಯನ್ನು ಪುಣೆಯ ಎನ್‌ಐವಿ ಕೇಂದ್ರಕ್ಕೆ ರವಾನಿಸಬೇಕು. ಅಲ್ಲಿ ದೃಢಪಟ್ಟಾಗ ಮಾತ್ರ ಅಧಿಕೃತವಾಗಿ ಘೋಷಿಸಿ, ಅಗತ್ಯ ಚಿಕಿತ್ಸೆ ನೀಡಬೇಕು. ಅದೇ ರೀತಿ, ನೆಗೆಟಿವ್ ಬಂದರೂ ಎನ್‌ಐವಿ ಸ್ಪಷ್ಟಪಡಿಸಬೇಕು. 

ಮಾದರಿಗಳ ಸಂಗ್ರಹ, ಪ್ಯಾಕೇಜಿಂಗ್ ಹಾಗೂ ರವಾನೆಗೂ ನಿಯಮಾವಳಿ ರೂಪಿಸಲಾಗಿದೆ. 

ರಾಜ್ಯದ ಪ್ರಯೋಗಾಲಯಗಳು 

1. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥ

2. ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆ (ಎನ್‌ಐವಿ) ಬೆಂಗಳೂರು ಘಟಕ

3. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

4. ಹಾಸನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

5. ಶಿವಮೊಗ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ

ಮಾದರಿಗಳ ಸಂಗ್ರಹ ಕೇಂದ್ರಗಳು

1. ಕಲಬುರ್ಗಿ ವೈದ್ಯಕೀಯ ಮಹಾವಿದ್ಯಾಲಯ

2. ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು