ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ವಂಚನೆಗೆ ‘ಕೋವಿಡ್‌’ ಬಂಡವಾಳ!

Last Updated 23 ಮೇ 2021, 20:43 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ನಿತ್ಯವೂ ಸಾವು–ನೋವುಗಳ ಸುದ್ದಿಯನ್ನೇ ನೀಡುತ್ತಿದೆ. ಒಂದೆಡೆ ಜನರು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ಇದರ ನಡುವೆಯೇ ಸೈಬರ್ ವಂಚಕರು, ‘ಕೋವಿಡ್’ನಿಂದ ಎದುರಾದ ಅಸಹಾಯಕತೆಯನ್ನೇ ವಂಚನೆಗೆ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

‘ಜೀವ ಉಳಿದರೆ ಸಾಕಪ್ಪಾ’ ಎಂದು ಹಂಬಲಿಸುವ ಸಾವಿರಾರು ಮಂದಿ, ತಮಗೆ ಅರಿವಿಲ್ಲದಂತೆ ಸೈಬರ್ ವಂಚಕರ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಆಮ್ಲಜನಕ, ಲಸಿಕೆ, ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯರ ಸಂಪರ್ಕ, ರೆಮ್‌ಡಿಸಿವಿರ್ ಚುಚ್ಚುಮದ್ದು, ಔಷಧಿಗಳ ಮಾರಾಟದ ಹೆಸರಿನಲ್ಲಿ ಜನರನ್ನು ಸಂಪರ್ಕಿಸುವ ವಂಚಕರು, ವೈಯಕ್ತಿಕ ಹಾಗೂ ಬ್ಯಾಂಕ್‌ ಖಾತೆಗಳ ವಿವರ ಪಡೆದು ಹಣ ದೋಚುತ್ತಿದ್ದಾರೆ.

ಒನ್‌ ಟೈಂ ಪಾಸ್‌ವರ್ಡ್ (ಒಟಿಪಿ), ಫೇಸ್‌ಬುಕ್ ನಕಲಿ ಖಾತೆ, ಮೊಬೈಲ್‌ ಸೇವಾ ಕಂಪನಿಗಳ ಪ್ರತಿನಿಧಿಗಳ ಸೋಗು, ಒಎಲ್‌ಎಕ್ಸ್, ಮನೆ ಬಾಡಿಗೆ, ಆನ್‌ಲೈನ್‌ ಬ್ಯಾಂಕಿಂಗ್ ಮುಂತಾದ ನಾನಾ ಸೋಗುಗಳನ್ನು ಧರಿಸಿ ಮುಗ್ಧ ಜನರನ್ನು ವಂಚಿಸುತ್ತಿದ್ದ ಪ್ರಕರಣಗಳು ಇದುವರೆಗೂ ವರದಿಯಾಗುತ್ತಿದ್ದವು. ಆದರೆ, ಈಗ ‘ಕೋವಿಡ್’ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆಯೇ ನಿತ್ಯವೂ ಹತ್ತಾರು ಪ್ರಕರಣಗಳು ದಾಖಲಾಗುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಜಾಹೀರಾತು ಹಾಗೂ ಮೊಬೈಲ್‌ಗೆ ಬರುವ ಸಂದೇಶಗಳನ್ನು ನಂಬುತ್ತಿರುವ ಜನ, ಅವುಗಳನ್ನು ಪರಿಶೀಲಿಸದೇ ಬೇರೆಯವರಿಗೆ ಕಳುಹಿಸುತ್ತಿದ್ದಾರೆ. ಸ್ನೇಹಿತರು ಹಾಗೂ ಪರಿಚಯಸ್ಥರು ಕಳುಹಿಸಿದರೆಂಬ ಕಾರಣಕ್ಕೆ ಅಂಥ ಸಂದೇಶಗಳನ್ನು ನಂಬುವವರ ಸಂಖ್ಯೆಯೂ ಅಧಿಕವಾಗಿದೆ.

ಜಾಹೀರಾತು ಹಾಗೂ ಸಂದೇಶದಲ್ಲಿರುವ ಮೊಬೈಲ್‌ ನಂಬರ್‌ಗೆ ಕರೆ ಮಾಡುತ್ತಿರುವ ಜನ, ತಮಗೆ ಬೇಕಾದ ಸೌಲಭ್ಯಗಳ ಬಗ್ಗೆ ವ್ಯವಹಾರ ಮಾಡುತ್ತಿದ್ದಾರೆ. ಕರೆ ಮಾಡುವವರ ಜೊತೆ ನಯವಾಗಿ ಮಾತನಾಡುವ ವಂಚಕರು, ಸೋಂಕಿತರು ಹಾಗೂ ಅವರ ಸಂಬಂಧಿಕರ ದಾಖಲೆಗಳನ್ನು ಪಡೆಯುತ್ತಿದ್ದಾರೆ. ಸೌಲಭ್ಯ ಒದಗಿಸಲು ಮುಂಗಡವಾಗಿ ಹಣ ನೀಡಬೇಕು ಹಾಗೂ ಕೆಲ ಶುಲ್ಕ ಪಾವತಿಸಬೇಕೆಂದು ಹೇಳಿ ಬ್ಯಾಂಕ್‌ ಖಾತೆಗಳಿಗೆ ಹಣ ಹಾಕಿಸಿಕೊಂಡು ನಾಪತ್ತೆಯಾಗುತ್ತಿದ್ದಾರೆ.

ಇನ್ನೂ ಕೆಲ ವಂಚಕರು, ಜನರ ಬ್ಯಾಂಕ್ ಖಾತೆ ವಿವರ ಪಡೆದು ಅದರಲ್ಲಿರುವ ಹಣವನ್ನು ತಮ್ಮ ಬೇರೊಂದು ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಅಂಥ ಖಾತೆಗಳು ಹೊರ ರಾಜ್ಯದವರ ಹೆಸರಿನಲ್ಲಿವೆ. ಅದರ ಜಾಡು ಹಿಡಿದು ಹೊರಟ ಪೊಲೀಸರು ವಂಚಕರನ್ನು ಪತ್ತೆ ಹಚ್ಚುವುದೂ ಕಷ್ಟವಾಗುತ್ತಿದೆ.

ಔಷಧಿ ಪೂರೈಕೆ ಕಂಪನಿಗಳ ಹೆಸರಿನಲ್ಲೂ ಸೈಬರ್ ವಂಚಕರು ಕೃತ್ಯ ಎಸಗುತ್ತಿದ್ದಾರೆ. ರೆಮ್‌ಡಿಸಿವಿರ್ ಚುಚ್ಚುಮದ್ದು, ಕಪ್ಪು ಶೀಲಿಂದ್ರ ರೋಗಕ್ಕೆ ಔಷಧ, ಮಾಸ್ಕ್‌... ಹೀಗೆ ನಾನಾ ಸಾಮಗ್ರಿಗಳ ಮಾರಾಟದ ಸೋಗಿನಲ್ಲಿ ವಂಚಕರು ಜಾಹೀರಾತು ನೀಡುತ್ತಿದ್ದಾರೆ. ಔಷಧಿ ವಿತರಕರು ಹಾಗೂ ಉದ್ಯಮಿಗಳು, ಜಾಹೀರಾತು ನಂಬಿ ಆರೋಪಿಗಳನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಆರ್ಥಿಕ ತೊಂದರೆಗೀಡಾಗಿ ‘ಕೋವಿಡ್’ ಚಿಕಿತ್ಸೆಗೆಂದು ಜೀವಮಾನದ ಗಳಿಕೆಯನ್ನೆಲ್ಲಾ ಖರ್ಚು ಮಾಡುವ ಜನ, ವಂಚಕರ ಜಾಲಕ್ಕೆ ಸಿಲುಕಿ ಮತ್ತಷ್ಟು ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೆಲ ನಿಮಿಷಗಳಲ್ಲೇ ತಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣವೆಲ್ಲವೂ ವಂಚಕರ ಕೈ ಸೇರುತ್ತಿದ್ದಂತೆ ಪೊಲೀಸರ ಮೊರೆ ಹೋಗುತ್ತಿದ್ದಾರೆ.

‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಸಾವುಗಳು ಸಂಭವಿಸುತ್ತಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ಅದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು, ಜನರನ್ನು ನಂಬಿಸಿ ಕೃತ್ಯ ಎಸಗುತ್ತಿದ್ದಾರೆ. ಕೋವಿಡ್‌ ಸಂಬಂಧಿತ ವಂಚನೆಗಳ ಬಗ್ಗೆಯೇ ಇತ್ತೀಚಿಗೆ ಹೆಚ್ಚಿನ ದೂರುಗಳು ಬರುತ್ತಿವೆ’ ಎಂದು ನಗರದ ಸೈಬರ್ ಕ್ರೈಂ ಠಾಣೆಯೊಂದರ ಇನ್‌ಸ್ಪೆಕ್ಟರ್ ಹೇಳಿದರು.

‘ಪ್ರತಿಯೊಂದು ಪ್ರಕರಣದಲ್ಲೂ ಜನರೇ ವಂಚಕರನ್ನು ಸಂಪರ್ಕಿಸಿ ಹಣ ಕಳೆದುಕೊಂಡಿದ್ದಾರೆ. ಆ ಪೈಕಿ ಕೆಲವರಷ್ಟೇ ಠಾಣೆಗೆ ಬಂದು ದೂರು ನೀಡುತ್ತಾರೆ. ಹಲವರು ದೂರು ಸಹ ನೀಡುವುದಿಲ್ಲ’ ಎಂದೂ ತಿಳಿಸಿದರು.

ಉತ್ತರ ಭಾರತದ ಗ್ಯಾಂಗ್‌ಗಳು: ‘ಜಾರ್ಖಂಡ್, ಬಿಹಾರ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ್ ಹಾಗೂ ಇತರೆ ರಾಜ್ಯಗಳ ಗ್ಯಾಂಗ್‌ಗಳು ಸೈಬರ್ ಅಪರಾಧ ಎಸಗುತ್ತಿರುವ ಮಾಹಿತಿ ಇದೆ. ಈಗಾಗಲೇ ಕೆಲ ಗ್ಯಾಂಗ್‌ಗಳ ಸದಸ್ಯರನ್ನು ಸೆರೆ ಹಿಡಿಯಲಾಗಿದ್ದು, ಮತ್ತಷ್ಟು ಗ್ಯಾಂಗ್‌ಗಳು ಇದೀಗ ಕೃತ್ಯದಲ್ಲಿ ಸಕ್ರಿಯವಾಗಿವೆ’ ಎಂದು ಇನ್‌ಸ್ಪೆಕ್ಟರ್‌ ಹೇಳಿದರು.

‘ನಿರುದ್ಯೋಗಿಗಳು ಹಾಗೂ ಅರ್ಧಕ್ಕೆ ಶಾಲೆ ಬಿಟ್ಟವರನ್ನು ಗ್ಯಾಂಗ್‌ಗೆ ಸೇರಿಸಿಕೊಂಡು ಸೈಬರ್ ಪರಿಣಿತರಿಂದ ತರಬೇತಿ ಕೊಡಿಸಲಾಗುತ್ತಿದೆ. ಅಂಥವರೇ ಸೈಬರ್ ಕೃತ್ಯ ಎಸಗುತ್ತಿದ್ದು, ಕೆಲ ಗ್ರಾಮಗಳಲ್ಲಿ ಸಾಫ್ಟ್‌ವೇರ್‌ ಕಂಪನಿ ರೀತಿಯಲ್ಲೇ ದೊಡ್ಡ ಕಚೇರಿಗಳನ್ನೇ ತೆರೆಯಲಾಗಿದೆ. ಇತ್ತೀಚೆಗೆ ಕರ್ನಾಟಕದ ಪೊಲೀಸರು, ಜಾರ್ಖಂಡ್‌ಗೆ ಹೋದಾಗ ಅಂಥದ್ದೇ ಕಚೇರಿ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದರು’ ಎಂದೂ ಅವರು ಮಾಹಿತಿ ನೀಡಿದರು.

‘ಸ್ಥಳೀಯರ ದಾಖಲಾತಿಗಳನ್ನು ಹಣ ಕೊಟ್ಟು ಖರೀದಿಸುತ್ತಿರುವ ವಂಚಕರು, ಅದನ್ನೇ ಬಳಸಿಕೊಂಡು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದಾರೆ. ಪ್ರತಿಯೊಂದು ಗ್ಯಾಂಗ್‌ ಬಳಿ ಸಾವಿರಾರು ಬ್ಯಾಂಕ್‌ ಖಾತೆಗಳಿರುವ ಮಾಹಿತಿ ಇದೆ. ಜನರಿಂದ ದೋಚುವ ಹಣವನ್ನು ಅದೇ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಕೆಲದಿನಗಳ ನಂತರ, ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ. ಹಣದ ವಹಿವಾಟಿಗಾಗಿ ಖಾತೆದಾರನಿಗೂ ಕಮಿಷನ್ ನೀಡುತ್ತಿರುವ ಮಾಹಿತಿಯೂ ಲಭ್ಯವಿದೆ’ ಎಂದೂ ಇನ್‌ಸ್ಪೆಕ್ಟರ್‌ ತಿಳಿಸಿದರು.

‘ಸೈಬರ್ ವಂಚಕರ ಜಾಲದಲ್ಲಿ ಸಿಲುಕಿ ಸಾವಿರದಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡವರು ನಮ್ಮಲ್ಲಿದ್ದಾರೆ. ಪ್ರತಿಯೊಂದು ಪ್ರಕರಣಗಳಲ್ಲಿ ಆಳವಾದ ತನಿಖೆ ಮಾಡಲು ಆಗುತ್ತಿಲ್ಲ. ಕೆಲ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳ ಬಂಧನವಾಗಿದೆ. ವಿಶೇಷ ತಂಡಗಳನ್ನು ಹೊರ ರಾಜ್ಯಕ್ಕೆ ಕಳುಹಿಸಿ, ಸ್ಥಳೀಯವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತರುವುದು ಅಷ್ಟು ಸುಲಭದ ಕೆಲಸವಲ್ಲ. ಸಮಯ ಹಾಗೂ
ಆರ್ಥಿಕ ಬೆಂಬಲವೂ ಬೇಕಾಗುತ್ತದೆ. ಸೈಬರ್ ಕ್ರೈಂ ನಿಯಂತ್ರಣ ಕುರಿತ ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗುತ್ತದೆ’ ಎಂದೂ ಅವರು ಹೇಳಿದರು.

ನಿತ್ಯವೂ 10ಕ್ಕೂ ಹೆಚ್ಚು ಪ್ರಕರಣ
ಕೋವಿಡ್ ಚಿಕಿತ್ಸೆ ಹಾಗೂ ಅದಕ್ಕೆ ಸಂಬಂಧಪಟ್ಟ ವಸ್ತುಗಳ ಮಾರಾಟದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ನಗರದಲ್ಲಿ ನಿತ್ಯವೂ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

‘ನಗರದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ಈಶಾನ್ಯ ಹಾಗೂ ವೈಟ್‌ಫೀಲ್ಡ್ ವಿಭಾಗಗಳಲ್ಲಿ ಪ್ರತ್ಯೇಕ ಸೈಬರ್ ಕ್ರೈಂ ಠಾಣೆ ತೆರೆಯಲಾಗಿದೆ. ವಂಚನೆಗೀಡಾದ ಜನ ನಿತ್ಯವೂ ಠಾಣೆಗೆ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಅವರಿಂದ ದೂರು ಪಡೆದು ಎಫ್‌ಐಆರ್
ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಇನ್‌ಸ್ಪೆಕ್ಟರ್ ಹೇಳಿದರು.

‘ಕೆಲ ಪ್ರಕರಣಗಳಲ್ಲಿ ಆರೋಪಿಗಳು ಅಪರಿಚಿತರು. ಇನ್ನು ಕೆಲ ಪ್ರಕರಣಗಳಲ್ಲಿ ಆರೋಪಿಗಳು ನಕಲಿ ಹೆಸರು ಹೇಳಿಕೊಂಡಿದ್ದಾರೆ. ಸಂದೇಶ ಹಾಗೂ ಬ್ಯಾಂಕ್‌ ಖಾತೆಗಳ ಮಾಹಿತಿ ಆಧರಿಸಿ ತನಿಖೆ ಕೈಗೊಂಡರೂ ಆರೋಪಿಗಳ ಸುಳಿವು ಸಿಗುವುದು ವಿರಳ’ ಎಂದೂ ತಿಳಿಸಿದರು.

ಸೈಬರ್ ಕ್ರೈಂ ತಡೆಗೆ ಎಚ್ಚರಿಕೆಯೊಂದೇ ಅಸ್ತ್ರ
‘ಸೈಬರ್ ಕ್ರೈಂ ಆದ ನಂತರ ಹೆಚ್ಚಾಗಿ ಹಣ ವಾಪಸು ಬರುವುದಿಲ್ಲ. ಆರೋಪಿಗಳೂ ಸಿಗುವುದಿಲ್ಲ. ಹೀಗಾಗಿ, ಯಾವುದೇ ಅಪರಿಚಿತರ ಸಂದೇಶ ಬಂದಾಗಲೇ ಎಚ್ಚರಿಕೆ ವಹಿಸುವುದೊಂದೇ ಸೈಬರ್ ಕ್ರೈಂ ತಡೆಗೆ ಅಸ್ತ್ರ’ ಎಂದು ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಆನ್‌ಲೈನ್ ಜಾಹೀರಾತು, ಮೊಬೈಲ್‌ಗೆ ಬರುವ ಸಂದೇಶಗಳನ್ನು ನಂಬುವ ಮುನ್ನ ಪರಿಶೀಲಿಸಬೇಕು. ಅಪರಿಚಿತರಿಗೆ ಕರೆ ಮಾಡಿ ಅವರು ಕೇಳಿದ ಮಾಹಿತಿಯನ್ನೆಲ್ಲ ನೀಡಬಾರದು. ಯಾವುದೇ ಸೌಲಭ್ಯ ಪಡೆಯಬೇಕಾದರೂ ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿ ಮುಂದುವರಿಯುವುದು ಉತ್ತಮ’ ಎಂದೂ ತಿಳಿಸಿದರು.

ವಂಚನೆ ಪ್ರಕರಣ 1: ಭೂಪಸಂದ್ರದ ನಿವಾಸಿಯಾಗಿರುವ ಉದ್ಯಮಿಯೊಬ್ಬರು ಆಮ್ಲಜನಕ ಸಾಂದ್ರಕಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದ್ದ ಜಾಹೀರಾತು ನಂಬಿ, ‘ಸುರಭಿ ಎಂಟರ್‌ಪ್ರೈಸಸ್’ ಎಂಬ ಕಂಪನಿ ಪ್ರತಿನಿಧಿಯನ್ನು ಸಂಪರ್ಕಿಸಿದ್ದರು.

ಅಗತ್ಯವಿರುವಷ್ಟು ಸಾಂದ್ರಕಗಳನ್ನು ನೀಡಲು ಒಪ್ಪಿದ್ದ ಪ್ರತಿನಿಧಿ, ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹೇಳಿ ₹ 12.59 ಲಕ್ಷ ಪಡೆದು ನಾಪತ್ತೆಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ವಂಚನೆ ಪ್ರಕರಣ 2: ಕೋರಮಂಗಲ ನಿವಾಸಿಯಾಗಿರುವ ವೈದ್ಯರೊಬ್ಬರ ಹೆಸರಿನಲ್ಲಿ ‘ಇಂಡಿಯಾ ಮಾರ್ಟ್’ ಜಾಲತಾಣದಲ್ಲಿ ನಕಲಿ ಖಾತೆ ತೆರೆದಿದ್ದ ವಂಚಕರು, ‘ಕೋವಿಡ್ ಔಷಧಿ ಮಾರಾಟ ಮಾಡಲಾಗುವುದು’ ಎಂಬ ಜಾಹೀರಾತು ನೀಡಿ ಜನರನ್ನು ವಂಚಿಸಿದ್ದಾರೆ.

ವೈದ್ಯರೇ ಔಷಧಿ ಮಾರಾಟ ಮಾಡುತ್ತಿರಬೇಕೆಂದು ನಂಬಿದ್ದ ಜನ, ಆರೋಪಿಗಳನ್ನು ಸಂಪರ್ಕಿಸಿ ಹಣ ಕಳೆದುಕೊಂಡಿದ್ದಾರೆ. ಪರಿಚಯಸ್ಥರೊಬ್ಬರ ಮೂಲಕ ವಿಷಯ ತಿಳಿಯುತ್ತಿದ್ದಂತೆ ವೈದ್ಯ, ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚನೆ ಪ್ರಕರಣ 3: ಶ್ರೀನಗರದಲ್ಲಿ ವಾಸವಿರುವ ಔಷಧಿ ವಿತರಣಾ ಏಜೆನ್ಸಿ ಮಾಲೀಕರೊಬ್ಬರು ರೆಮ್‌ಡಿಸಿವಿರ್ ಚುಚ್ಚುಮದ್ದು ಖರೀದಿಸಲು ಹುಡುಕಾಟ ನಡೆಸುತ್ತಿದ್ದರು. ಆನ್‌ಲೈನ್‌ನಲ್ಲಿ ಸೂರತ್‌ನ ಆದಿನಾಥ್ ಏಜೆನ್ಸಿಯ ಸಂಪರ್ಕ ಸಂಖ್ಯೆ ಸಿಕ್ಕಿತ್ತು.

ಅದಕ್ಕೆ ಕರೆ ಮಾಡಿದಾಗ, ವೋರಾ ಹೆಸರಿನ ಪ್ರತಿನಿಧಿ ಮಾತನಾಡಿದ್ದ. ಚುಚ್ಚುಮದ್ದು ಸರಬರಾಜು ಮಾಡಲು ಒಪ್ಪಿದ್ದ ಆರೋಪಿ, ₹ 5 ಲಕ್ಷ ಮುಂಗಡವಾಗಿ ಪಡೆದಿದ್ದ. ನಂತರ, ಚುಚ್ಚುಮದ್ದು ಕಳುಹಿಸದೇ ನಾಪತ್ತೆಯಾಗಿದ್ದಾನೆ.

ವಂಚನೆ ಪ್ರಕರಣ 4: ವೈಟ್‌ಫೀಲ್ಡ್ ನಿವಾಸಿಯೊಬ್ಬರ ಮೊಬೈಲ್‌ಗೆ, ‘ನೀವು ಲಸಿಕೆ ಪಡೆದುಕೊಂಡಿದ್ದೀರಾ? ನೀವು ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕೇ?’ ಎಂಬ ಸಂದೇಶ ಬಂದಿತ್ತು.

ಅದನ್ನು ನಂಬಿದ್ದ ನಿವಾಸಿ, ಅದರಲ್ಲಿರುವ ಸಂಖ್ಯೆಗೆ ಕರೆ ಮಾಡಿದ್ದರು. ‘ನೀವು ಲಸಿಕೆ ಪಡೆದಿದ್ದಿರಾ? ಎಂಬುದಾದರೆ 1 ಸಂಖ್ಯೆ ಒತ್ತಿ’ ಎಂಬ ಪ್ರತಿಕ್ರಿಯೆ ಸಿಕ್ಕಿತ್ತು. ಅದನ್ನು ನಂಬಿ 1 ಸಂಖ್ಯೆ ಒತ್ತಿದಾಗ ಮೊಬೈಲ್ ಹ್ಯಾಕ್ ಆಗಿದೆ.

ವಂಚನೆ ಪ್ರಕರಣ 5: ಮಲ್ಲೇಶ್ವರದ ನಿವಾಸಿಯೊಬ್ಬರು, ತಮ್ಮ ತಂದೆ–ತಾಯಿಗೆ ತೀವ್ರ ನಿಗಾ ಘಟಕದಲ್ಲಿ ಹಾಸಿಗೆ ಹುಡುಕುತ್ತಿದ್ದರು. ಆನ್‌ಲೈನ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತು ನಂಬಿ ವಂಚಕನಿಗೆ ಕರೆ ಮಾಡಿದ್ದರು. ಬಿಬಿಎಂಪಿ ವತಿಯಿಂದಲೇ ಹಾಸಿಗೆ ಕೊಡಿಸುವುದಾಗಿ ಹೇಳಿದ್ದ ವಂಚಕ, ಮುಂಗಡವಾಗಿ ಹಣ ಪಡೆದು ವಂಚಿಸಿದ್ದಾನೆ. ಇದರ ನಡುವೆಯೇ ನಿವಾಸಿ, ತಮ್ಮ ತಂದೆ–ತಾಯಿಗಳಿಬ್ಬರನ್ನೂ ಕಳೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸೈಬರ್ ಕ್ರೈಂ ‌ಪ್ರಕರಣಗಳು (ವರ್ಷವಾರು ವಿವರ)
ವರ್ಷ; ದಾಖಲಾದ ಪ್ರಕರಣ
2017;
2,023

2018; 5,036

2019; 10,131

2020; 17,190

2021(ಏಪ್ರಿಲ್ 30ರವರೆಗೆ); 2,458

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT