ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮನೆಯಲ್ಲೇ ರೋಗಿಗಳ ಪರದಾಟ

ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು l ಸೋಂಕು ಹರಡುವ ಸಾಧ್ಯತೆ
Last Updated 12 ಜುಲೈ 2020, 21:11 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಮನೆ ಆರೈಕೆ ಮುನ್ನೆಲೆಗೆ ಬಂದಿದೆ. ಆದರೆ, ಮಾರ್ಗಸೂಚಿಗಳನ್ನು ರೂಪಿಸಿದವರೇ ಅದನ್ನು ಪಾಲಿಸದ ಪರಿಣಾಮ ಮನೆಯ ಹಂತದಲ್ಲಿಯೇ ಸೋಂಕು ಹರಡಲು ಅವಕಾಶ ಮಾಡಿಕೊಟ್ಟಂತಾಗಿದೆ.

ನಗರದಲ್ಲಿ ಕೆಲವು ದಿನಗಳಿಂದ ನಿತ್ಯ ಸರಾಸರಿ ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದಾಗಿ ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದಿದ್ದು, ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲೂ ಹಾಸಿಗೆಗಳು ಭರ್ತಿಯಾಗುತ್ತಿವೆ.

ಹೀಗಾಗಿ, ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳು ಕಾಣಿಸಿಕೊಂಡ ರೋಗಿಗಳಿಗೆ ಮನೆಯಲ್ಲೇ ಆರೈಕೆಗೆ ಸೂಚಿಸಲಾಗುತ್ತಿದೆ. ಹೋಮ್‌ ಕ್ವಾರಂಟೈನ್‌ಗೆ ಆರೋಗ್ಯ ಇಲಾಖೆ ಕಳೆದ ವಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿತ್ತು.

ಮಾರ್ಗಸೂಚಿ ಪ್ರಕಾರ, ಯಾವುದೇ ವ್ಯಕ್ತಿಯನ್ನು ಮನೆ ಆರೈಕೆಗೆ ಒಳಪಡಿಸುವ ಮೊದಲು ಸ್ಥಳೀಯ ಅಧಿಕಾರಿಗಳು ಸೋಂಕಿತನ ಮನೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಪ್ರತ್ಯೇಕ ಕೊಠಡಿ, ಸ್ನಾನಗೃಹ, ಶೌಚಾಲಯ ಸೇರಿದಂತೆ ವಿವಿಧ ಸೌಕರ್ಯಗಳು ಇವೆಯೇ ಎಂಬುದನ್ನು ಖಚಿತಪಡಿಸಬೇಕು. ಬಳಿಕ ಸೋಂಕಿತನ ಆರೋಗ್ಯದ ಬಗ್ಗೆ ನಿತ್ಯ ಮಾಹಿತಿ ಕಲೆ ಹಾಕಬೇಕು. ಆದರೆ, ಅಧಿಕಾರಿಗಳು ಕನಿಷ್ಠ ಒಮ್ಮೆ ಕೂಡ ಮನೆಗೆ ಭೇಟಿ ನೀಡಿ, ಪರಿವೀಕ್ಷಣೆ ನಡೆಸುತ್ತಿಲ್ಲ. ಬದಲಾಗಿ ದೂರವಾಣಿ ಮೂಲಕವೇ ಮನೆ ಆರೈಕೆಗೆ ಸೂಚಿಸಿ, ಕೈತೊಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೆಲವರು ತಮ್ಮ ಕಿರಿದಾದ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದೆಕಂಗಾಲಾಗುತ್ತಿದ್ದಾರೆ.

ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ: ಮನೆಯಲ್ಲಿನ ಆರೈಕೆ ವಿಧಾನಗಳ ಬಗ್ಗೆ ಸೋಂಕಿತರಿಗೆ ಸೂಕ್ತ ಮಾಹಿತಿಗಳು ದೊರಕುತ್ತಿಲ್ಲ. ವೈದ್ಯರು ಕೂಡ ಆರೋಗ್ಯದ ಬಗ್ಗೆ ಪ್ರತಿನಿತ್ಯ ವಿಚಾರಿಸುತ್ತಿಲ್ಲ. ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ ಹಾಗೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಹೊಂದಿರದ ಪರಿಣಾಮ ಬಹುತೇಕರಿಗೆ ತಮ್ಮ ಆರೋಗ್ಯದ ಸ್ಥಿತಿಗತಿಯ ಬಗ್ಗೆ ತಿಳಿಯದಂತಾಗಿದೆ. ತಮ್ಮಿಂದ ಮನೆಯಲ್ಲಿನ ವೃದ್ಧರು, ಮಕ್ಕಳು ಹಾಗೂ ಇತರ ಸದಸ್ಯರಿಗೆ ಸೋಂಕು ಹರಡಬಹುದೆಂಬ ಕಾರಣಕ್ಕೆ ಸ್ವಯಂಪ್ರೇರಿತರಾಗಿ ಆಸ್ಪತ್ರೆಗಳಿಗೆ ತೆರಳಲಾರಂಭಿಸಿದ್ದಾರೆ.

‘ಪಾಸಿಟಿವ್‌ ಬಂದ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಲು ಸೂಚಿಸಿದರು.ನಮ್ಮದು ಒಂದು ಕೊಠಡಿಯ ಕಿರಿದಾದ ಮನೆ. ಯಾವುದೇ ಅಧಿಕಾರಿ ಮನೆಗೆ ಬಂದು ಪರಿಶೀಲಿಸಿಲ್ಲ. ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಅವಕಾಶವಿಲ್ಲ. ನನ್ನಿಂದ ಮನೆಯ ಸದಸ್ಯರಿಗೆ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ನಾನಾಗಿಯೇ ಕೆ.ಸಿ. ಜನರಲ್ ಆಸ್ಪತ್ರೆಗೆ ಸ್ಥಳಾಂತರವಾಗಿದ್ದೇನೆ’ ಎಂದು 34 ವರ್ಷದ ಮೂಡಲಪಾಳ್ಯದ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು ಎಂದು ಎರಡು ದಿನಗಳಿಂದ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇಲ್ಲ. ಹಾಗಾಗಿ, ಮನೆಯಲ್ಲೇ ಇರಲು ತಿಳಿಸಿದ್ದೇವೆ. ಇಂತಹ ಸ್ಥಿತಿಯಲ್ಲಿ ನಾವು ಏನು ಮಾಡಲು ಸಾಧ್ಯ’ ಎಂದು ಬಿಬಿಎಂ‍ಪಿಯ ವೈದ್ಯರೊಬ್ಬರು ಪ್ರಶ್ನಿಸಿದರು.

‘ನಗರದ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳು ಇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಪ್ರತಿನಿತ್ಯ ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ, ವಾಸ್ತವ ಸ್ಥಿತಿ ಬೇರೆ ಇದೆ. ಸೋಂಕು ತಗುಲಿ ಮೂರು ದಿನಗಳು ಕಳೆದ ಬಳಿಕವೂ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗಿಲ್ಲ’ ಎಂದು ಎಚ್‌ಎಸ್‌ಆರ್‌ ಬಡಾವಣೆಯ ಸೋಂಕಿತರೊಬ್ಬರು ಹೇಳಿಕೊಂಡರು.

ಸೋಂಕಿತರ ಮನೆಗಳಿಗೆ ಭಿತ್ತಿಪತ್ರವೂ ಇಲ್ಲ
ಆರೈಕೆಗೆ ಒಳಪಟ್ಟ ವ್ಯಕ್ತಿಯ ಮನೆಯ ಪ್ರವೇಶದ್ವಾರಕ್ಕೆ ಕಡ್ಡಾಯವಾಗಿ ಭಿತ್ತಿಪತ್ರ ಅಂಟಿಸಬೇಕು. ಆ ಭಿತ್ತಿಪತ್ರದಲ್ಲಿ ಮನೆಯ ಆರೈಕೆಯ ಅವಧಿಯನ್ನೂ ನಮೂದಿಸಲಾಗುತ್ತದೆ. ಭಿತ್ತಿಪತ್ರ ಅಂಟಿಸುವುದರಿಂದ ಸುತ್ತಮುತ್ತಲಿನ ನಿವಾಸಿಗಳು ಕೂಡ ನಿಗಾ ಇಟ್ಟು, ವ್ಯಕ್ತಿ ಮನೆಯಿಂದ ಹೊರಗಡೆ ಬಂದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಾಧ್ಯ. ಆದರೆ, ಈಗ ಭಿತ್ತಿಪತ್ರ ಅಂಟಿಸುವ ಕಾರ್ಯ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ.

‘ಮನೆ ಆರೈಕೆ ಮಾಡಿಕೊಳ್ಳುವಂತೆ ದೂರವಾಣಿ ಮೂಲಕ ಸೂಚಿಸಿದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮಾತ್ರೆ ತಂದುಕೊಡುವುದಾಗಿ ತಿಳಿಸಿದ್ದರು. ಎರಡು ದಿನವಾದರೂ ಯಾರೂ ಬಂದಿಲ್ಲ. ಮನೆಯಲ್ಲಿ ಒಬ್ಬನೇ ಇದ್ದೇನೆ. ಅಗತ್ಯ ವಸ್ತುಗಳಿಗಾಗಿ ಸ್ನೇಹಿತರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದೇನೆ. ಯಾವುದೇ ಭಿತ್ತಿಪತ್ರವನ್ನೂ ಅಂಟಿಸಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಕೆಂಗೇರಿಯ 32 ವರ್ಷದ ಸೋಂಕಿತರೊಬ್ಬರು ಬೇಸರ ವ್ಯಕ್ತಪಡಿಸಿದರು.

**

ಮನೆ ಪರಿಶೀಲನೆ ಬಳಿಕವೇ ಮನೆ ಆರೈಕೆಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸುತ್ತೇನೆ.
-ಡಾ. ಓಂ ಪ್ರಕಾಶ್ ಪಾಟೀಲ್,ಆರೋಗ್ಯ ಇಲಾಖೆ ನಿರ್ದೇಶಕ

**

ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದಿದ್ದರೂ ಅವರಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
-ಡಾ.ಸಿ. ನಾಗರಾಜ್,ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT