ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ | ಬೂತ್‌ ಮಟ್ಟದಲ್ಲಿ ಕಾರ್ಯಪಡೆ ರಚನೆ: ಡಿಜಿಟಲ್‌ ಎಕ್ಸ್‌ರೇ ಯಂತ್ರ ಕಡ್ಡಾಯ

Last Updated 13 ಜುಲೈ 2020, 20:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಹರಡುವುದನ್ನು ತಡೆಯಲು ಎಲ್ಲಾ 8,145 ಬೂತ್‌ಗಳಲ್ಲಿ ಕಾರ್ಯಪಡೆ ರಚಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್‌ ಎಕ್ಸ್‌ರೇ ಯಂತ್ರಗಳನ್ನು ಅಳವಡಿಸಲು ತಾಕೀತು ಮಾಡಲಾಗಿದೆ.

‘ಡಿಜಿಟಲ್‌ ಎಕ್ಸ್‌ರೇ ಯಂತ್ರಗಳಿಂದ ಶ್ವಾಸಕೋಶದಲ್ಲಿನ ತೊಂದರೆಗಳನ್ನು ಬಹು ಬೇಗ ಪತ್ತೆಹಚ್ಚುವುದು, ಆ ಮೂಲಕ ಕೋವಿಡ್‌ ಪರೀಕ್ಷೆ ಮಾಡುವುದು ಸಾಧ್ಯವಾಗಲಿದೆ. ಹೀಗಾಗಿ ಎಲ್ಲಾ ಆಸ್ಪತ್ರೆಗಳೂ ಈ ಯಂತ್ರವನ್ನು ಖರೀದಿಸಲು ಸೂಚಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಬೂತ್‌ ಮಟ್ಟದ ಕಾರ್ಯಪಡೆ ರಚನೆ ಮಂಗಳವಾರ ಸಂಜೆಯೊಳಗೆ ಕೊನೆಗೊಳ್ಳಲಿದ್ದು, ಎರಡು ದಿನಗಳ ತರಬೇತಿಯ ಬಳಿಕ ತಂಡ ಸಕ್ರಿಯ ಕೆಲಸಕ್ಕೆ ಸಜ್ಜಾಗಲಿದೆ.‌ ಪ್ರತಿ ತಂಡಕ್ಕೆ ಒಂದು ಪಲ್ಸ್ ಅಕ್ಸಿಮೀಟರ್‌, ಥರ್ಮಲ್ಸ್ಕ್ರೀನಿಂಗ್‌ ಉಪಕರಣ ನೀಡಲಾಗುವುದು. ಮನೆಗಳಲ್ಲಿ ಪ್ರತ್ಯೇಕ ವಾಸಕ್ಕೆ ಅವಕಾಶ ಇರುವವರಿಗೆ ಅದಕ್ಕೆ ಬೇಕಾದ ಸೌಲಭ್ಯ ಒದಗಿಸುವುದಕ್ಕೆ ಸಹಕರಿಸುವುದು, ಅಗತ್ಯ ಮಾಹಿತಿಗಳನ್ನು ಒದಗಿಸುವ ಕೆಲಸವನ್ನು ಈ ತಂಡ ಮಾಡುತ್ತದೆ’ ಎಂದು ಅವರು ವಿವರಿಸಿದರು.

ವರದಿ ಬರುವವರೆಗೆ ತಿರುಗಾಡುವಂತಿಲ್ಲ
‘ಗಂಟಲ ದ್ರವ ಪರೀಕ್ಷೆಗೆ ಕೊಟ್ಟ ಬಳಿಕ ಅದರ ವರದಿ ಬರುವವರೆಗೆ ಪ್ರತ್ಯೇಕ ವಾಸ ಮಾಡಬೇಕು, ಎಲ್ಲಿಯೂ ಹೊರಗಡೆ ತಿರುವಾಡುವಂತಿಲ್ಲ ಎಂಬ ಹೊಸ ನಿಯಮ ಜಾರಿಗೆ ತರಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ನಿಶ್ಚಿತ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್ ಪಾಂಡೆ ಎಚ್ಚರಿಸಿದರು.

‘ಅಪಾರ್ಟ್‌ಮೆಂಟ್‌ಗಳಲ್ಲಿಯೇ ಮಿನಿ ಕೋವಿಡ್ ಆರೈಕೆ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ವರದಿಯಲ್ಲಿ ಪಾಸಿಟಿವ್ ಬಂದರೂ, ರೋಗ ಲಕ್ಷಣ ಇಲ್ಲದವರು ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಬರಬಾರದು. ನಗರದಲ್ಲಿ 5 ಸಾವಿರ ಹಾಸಿಗೆಗಳು ಆಸ್ಪತ್ರೆಗಳಲ್ಲಿ ಖಾಲಿ ಇವೆ. ಜನರು ಗಾಬರಿಗೊಳ್ಳಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT