ಶನಿವಾರ, ಜೂನ್ 19, 2021
26 °C
ತಾವರೆಕೆರೆ ಬಳಿ ಚಿತಾಗಾರದ ಬಳಿ ಶವಗಳ ಸಾಲು

26 ಶವಗಳ ಸಾಮೂಹಿಕ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಾವರೆಕೆರೆ ಬಳಿ ಹೊಸದಾಗಿ ಸಿದ್ಧಪಡಿಸಿರುವ ಚಿತಾಗಾರದಲ್ಲಿ ಈಗ ದೆಹಲಿ ಮಾದರಿಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಆರಂಭವಾಗಿದೆ. ಶುಕ್ರವಾರ ಏಕಕಾಲಕ್ಕೆ 26 ಶವಗಳನ್ನು ಸಂಸ್ಕಾರ ಮಾಡಲಾಯಿತು.

ನಗರದಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ರಾಜ್ಯ ಸರ್ಕಾರ ತಾವರೆಕೆರೆ ಬಳಿ ಹೊಸದಾಗಿ ಚಿತಾಗಾರ ಆರಂಭಿಸಿದೆ. ಈ ಚಿತಾಗಾರಕ್ಕೆ ಒಂದೇ ದಿನ 47 ಶವಗಳನ್ನು ಸುಡಲಾಗಿದೆ.

ಶುಕ್ರವಾರ ಇಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡುವ ಮೂಲಕ ಹೊರ ರಾಜ್ಯಗಳಲ್ಲಿ ನಡೆಯುತ್ತಿದ್ದ ಈ ರೀತಿಯ ಅಂತ್ಯಕ್ರಿಯೆ ಬೆಂಗಳೂರಿನಲ್ಲೂ ಆರಂಭವಾದಂತೆ ಆಗಿದೆ.

4 ಗಂಟೆ ನಂತರ ಶವಗಳನ್ನು ಕಳುಹಿಸದಿರಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದರು. ‘ದಿನಕ್ಕೆ 70ರಿಂದ 80 ಶವಗಳು ಅಂತ್ಯಕ್ರಿಯೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ನಗರದಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಮಳೆಯಾಗುತ್ತಿರುವ ಕಾರಣ ಸಂಜೆ 4 ಗಂಟೆ ನಂತರ ಶವಗಳನ್ನು ಕಳುಹಿಸದಿರಲು ನಿರ್ಧರಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾವರೆಕೆರೆ ಗಿಡ್ಡೇನಹಳ್ಳಿ ಬಳಿ ಇನ್ನೂ ಒಂದು ಚಿತಾಗಾರ ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಮೊದಲೇ ದಿನ 25 ಶವಗಳ ಅಂತ್ಯಕ್ರಿಯೆ ಇಲ್ಲಿ ನಡೆದಿದೆ.

ಚಿತಾಗಾರಗಳ ಬಳಿ ಕಣ್ಣೀರ ಕೋಡಿ
ಚಿತಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಒಬ್ಬೊಬ್ಬರ ಕಣ್ಣೀರು ಒಂದೊಂದು ಕತೆ ಹೇಳುತ್ತಿವೆ.

ಕುರುಬರಹಳ್ಳಿಯ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು. ತಂದೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂಬ ಕಾರಣಕ್ಕೆ ಮಗ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಕಲ್ಲು ಹೃದಯದವರನ್ನೂ ಘಾಸಿ ಮಾಡುವಂತಿದ್ದವು.

‘ಹಾಸಿಗೆ ಒದಗಿಸಿ ಎಂದು ವೈದ್ಯರ ಕಾಲು ಹಿಡಿದುಕೊಂಡರೂ ಕೊಡಲಿಲ್ಲ. ಚಿಕಿತ್ಸೆ ಸಿಗದೆ ತಂದೆ ಮೃತಪಟ್ಟ ಬಳಿಕ ಬಿಬಿಎಂಪಿ ಅಧಿಕಾರಿಗಳು ಹಾಸಿಗೆ ಲಭ್ಯವಿದೆ ಎಂದು ಕರೆ ಮಾಡಿದರು. ಈಗ ಹಾಸಿಗೆ ತಗೆದುಕೊಂಡು ಏನು ಮಾಡಲಿ’ ಎಂದು ಅವರು ಕಣ್ಣೀರಿಟ್ಟರು.

ಅಂತ್ಯಕ್ರಿಯೆಗೆ ಹಾಜರಾಗಲು ಹಿಂದೇಟು
ಕೋವಿಡ್‌ ನಿಯಮಗಳನ್ನು ಅನುಸರಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸೋಂಕಿತರ ಕುಟುಂಬ ಸದಸ್ಯರು ಹಾಜರಾಗಲು ಅವಕಾಶ ನೀಡಿದ್ದರೂ, ಹಾಜರಾಗಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕರು ಆಂಬುಲೆನ್ಸ್ ಚಾಲಕರಿಗೆ ಎಲ್ಲ  ಜವಾಬ್ದಾರಿ ವಹಿಸುತ್ತಿದ್ದಾರೆ.

‘ಕೋವಿಡ್‌ ಸೋಂಕಿಗೆ ಹೆದರಿ ಕುಟುಂಬ ಸದಸ್ಯರು ಶವ ಸಂಸ್ಕಾರಕ್ಕೆ ಹಾಜರಾಗುತ್ತಿಲ್ಲ. ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲೂ ಹೆದರುತ್ತಿದ್ದಾರೆ. ಆಂಬುಲೆನ್ಸ್ ಚಾಲಕರಿಗೇ ಪ್ಯಾಕೇಜ್ ನೀಡಿ ಮರುದಿನ ಚಿತಾಭಸ್ಮ ಪಡೆಯುತ್ತಿದ್ದಾರೆ’ ಎಂದು ಚಾಲಕರೊಬ್ಬರು ವಿವರಿಸಿದರು.

‘ಕಳೆದ ನಾಲ್ಕು ದಿನದಿಂದ ನಾನೇ ವಿಧಿವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು