ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಜನಸಾಮಾನ್ಯರಿಗೆ ದುಬಾರಿಯಾದ ಲಸಿಕೆ

ಖಾಸಗಿ ಲಸಿಕೆ ಕೇಂದ್ರಗಳಲ್ಲಿ ₹ 2 ಸಾವಿರದವರೆಗೂ ಮಾರಾಟ
Last Updated 25 ಮೇ 2021, 19:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಿದ ಬೆನ್ನಲ್ಲೇ ಕೋವಿಡ್ ಲಸಿಕೆಗೆ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವು ಖಾಸಗಿ ಆರೋಗ್ಯ ಕೇಂದ್ರಗಳು ಪ್ರತಿ ಡೋಸ್‌ ಲಸಿಕೆಯನ್ನು ₹ 2 ಸಾವಿರದವರೆಗೂ ಮಾರಾಟ ಮಾಡಲಾರಂಭಿಸಿವೆ.

ಮೇ 1ರಿಂದ 18ರಿಂದ 44 ವರ್ಷದವರಿಗೆ ಲಸಿಕೆ ವಿತರಣೆ ಆರಂಭಿಸಲಾಗಿತ್ತು. ಆದರೆ, ತಯಾರಿಕಾ ಕಂಪನಿಗಳು ಬೇಡಿಕೆಯಷ್ಟು ಲಸಿಕೆ ಪೂರೈಸದ ಕಾರಣ ಸರ್ಕಾರಿ ವ್ಯವಸ್ಥೆಯಡಿ 18ರಿಂದ 44 ವರ್ಷದವರಿಗೆ ಲಸಿಕೆ ವಿತರಣೆಯನ್ನು ತಾತ್ಕಾಲಿಕವಾಗಿಸ್ಥಗಿತ ಮಾಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್‌ಗೆ ಆದ್ಯತೆ ನೀಡಲು ಸರ್ಕಾರ ಸೂಚಿಸಿದೆ. ಹಾಗಾಗಿ 18 ವರ್ಷ ಮೇಲ್ಪಟ್ಟವರು ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಮುಗಿಬೀಳುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಈ ವಯೋಮಾನದವರು ಸಾವಿರಾರು ರೂಪಾಯಿ ಪಾವತಿಸಿ ಲಸಿಕೆ ಪಡೆದುಕೊಳ್ಳಲಾರಂಭಿಸಿದ್ದಾರೆ.

ಸದ್ಯ ‘ಕೋವಿಶೀಲ್ಡ್‌’ ಹಾಗೂ ‘ಕೋವ್ಯಾಕ್ಸಿನ್‘ ಲಸಿಕೆ ನೀಡಲಾಗುತ್ತಿದೆ. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಯುಪ್ರತಿ ಡೋಸ್‌ ‘ಕೋವಿಶೀಲ್ಡ್’ ಲಸಿಕೆಗೆ ಸರ್ಕಾರಕ್ಕೆ ₹ 300 ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳಿಗೆ ₹ 600 ನಿಗದಿ ಮಾಡಿದೆ. ಅದೇ ರೀತಿ, ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಯು ‘ಕೋವ್ಯಾಕ್ಸಿನ್’ ಲಸಿಕೆಯನ್ನು ಸರ್ಕಾರಗಳಿಗೆ ₹ 400 ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳಿಗೆ ಗರಿಷ್ಠ ₹1,200 (ಪ್ರತಿ ಡೋಸ್‌ಗೆ) ಗೊತ್ತುಪಡಿಸಿದೆ.

ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಕಂಪನಿಯಿಂದ ಖರೀದಿಸಿ ನೀಡುವ ‘ಕೋವಿಶೀಲ್ಡ್‌’ ಲಸಿಕೆಗೆ ₹ 850 ಹಾಗೂ ‘ಕೋವ್ಯಾಕ್ಸಿನ್’ ಲಸಿಕೆಗೆ ₹ 1,250 ಪಡೆಯುತ್ತಿವೆ. ನಿರ್ವಹಣಾ ಶುಲ್ಕದ ಹೆಸರಿನಲ್ಲಿ ಕೆಲವೆಡೆ ಹೆಚ್ಚುವರಿಯಾಗಿ ₹ 200 ನಿಗದಿಪಡಿಸಲಾಗಿದೆ.

ಖಾಸಗಿ ಲಸಿಕಾ ಕೇಂದ್ರಗಳಿಗೆ ಕೇಂದ್ರ ಸರ್ಕಾರವು ಪೂರೈಕೆ ಮಾಡಿದ ಲಸಿಕೆಗೆ (ಒಂದು ಡೋಸ್) ಗರಿಷ್ಠ ₹ 250 ಮಾತ್ರ ಪಡೆಯಬೇಕು.

ಇದರಲ್ಲಿ ₹ 150 ಸರ್ಕಾರಕ್ಕೆ ಪಾವತಿಸಿ, ₹ 100 ಸೇವಾ ಶುಲ್ಕದ ರೂಪದಲ್ಲಿ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ಈಗ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿಯೇ ದಾಸ್ತಾನು ಇರದ ಕಾರಣ ಖಾಸಗಿ ಕೇಂದ್ರಗಳಿಗೆ ನಿಗದಿತ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗುತ್ತಿಲ್ಲ.

ನೋಂದಾಯಿಸಿದರೂ ಸಿಗುತ್ತಿಲ್ಲ: ಮೇ 1ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ 18ರಿಂದ 44 ವರ್ಷದವರಿಗೆ ಲಸಿಕೆ ವಿತರಣೆ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಲಸಿಕೆ ಉತ್ಪಾದನಾ ಕಂಪನಿಗಳಿಂದ ಕೆಲ ಖಾಸಗಿ ಆಸ್ಪತ್ರೆಗಳು ಮಾತ್ರ ಲಸಿಕೆ ಖರೀದಿಸಿ, ನೀಡುತ್ತಿವೆ. ಲಸಿಕೆ ಪಡೆದುಕೊಳ್ಳುವವರು ಮುಂಚಿತವಾಗಿ ‘ಕೋವಿನ್’ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ಕಾಯಬೇಕಿದೆ. ಲಸಿಕೆ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಈಗಾಗಲೇ ಹೆಸರು ನೋಂದಾಯಿಸಿದವರಿಗೆ ಕೂಡ ನಿಗದಿತ ದಿನಾಂಕದಂದು ಲಸಿಕೆ ದೊರೆಯುತ್ತಿಲ್ಲ. ಲಸಿಕೆ ಬಂದೊಡನೆ ದೂರವಾಣಿ ಸಂಖ್ಯೆಗೆ ಸಂದೇಶ ರವಾನಿಸುವುದಾಗಿ ಆಸ್ಪತ್ರೆಗಳು ತಿಳಿಸುತ್ತಿವೆ.

‘ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಕಂಪನಿಗಳಿಂದ ನೇರವಾಗಿ ಖರೀದಿಸಿದ ಲಸಿಕೆಯನ್ನು ಒದಗಿಸಲಾಗುತ್ತಿದೆ. ‘ಕೋವಿಶೀಲ್ಡ್‌’ ಪ್ರತಿ ಡೋಸ್‌ಗೆ ₹ 850 ಹಾಗೂ ‘ಕೋವ್ಯಾಕ್ಸಿನ್‌’ ₹ 1,250 ಪಡೆದುಕೊಳ್ಳುತ್ತಿದ್ದೇವೆ. ಇದಕ್ಕಿಂತ ಹೆಚ್ಚಿನ ದರ ಪಡೆಯುತ್ತಿಲ್ಲ’ ಎಂದು ಅಪೋಲೊ ಆಸ್ಪತ್ರೆಗಳ ಸಮೂಹ ತಿಳಿಸಿದೆ.

ಕಾಳಸಂತೆಗೆ ಕೋವಿಡ್ ಲಸಿಕೆ?
ಕೋವಿಡ್ ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ, ಗಂಭೀರವಾಗಿ ಅಸ್ವಸ್ಥರಾಗುತ್ತಿದ್ದಾರೆ. ಇದರಿಂದಾಗಿ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ 18ರಿಂದ 44 ವರ್ಷದವರೆಗಿನವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಲಭ್ಯತೆ ಬಗ್ಗೆ ವಿಚಾರಿಸಲಾರಂಭಿಸಿದ್ದಾರೆ. ನೋಂದಣಿ ಮಾಡಿಕೊಂಡವರಿಗೆ ಲಭ್ಯತೆ ಅನುಸಾರ ಖಾಸಗಿ ಆಸ್ಪತ್ರೆಗಳು ‘ಕೋವಿಶೀಲ್ಡ್‌’ ಲಸಿಕೆ ನೀಡುತ್ತಿವೆ.

45 ವರ್ಷ ಮೇಲ್ಪಟ್ಟವರಲ್ಲಿ ಇನ್ನೂ ಅರ್ಧದಷ್ಟು ಮಂದಿ ಲಸಿಕೆ ಪಡೆದುಕೊಳ್ಳಬೇಕಿದೆ. ಕೇಂದ್ರ ಸರ್ಕಾರವು ಖಾಸಗಿಯಾಗಿ ಖರೀದಿಸಿ, ವಿತರಿಸುವ ಲಸಿಕೆಗೆ ದರ ನಿಗದಿಪಡಿಸಿಲ್ಲ. ಇದರಿಂದಾಗಿ ಲಸಿಕೆಯು ‘ರೆಮ್‌ಡಿಸಿವಿರ್’ ಔಷಧದದಂತೆ ಕಾಳಸಂತೆಯಲ್ಲಿ ಮಾರಾಟವಾಗುವ ಸಾಧ್ಯತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.

‘44 ವರ್ಷ ವಯೋಮಿತಿಯೊಳಗಡೆ ಬರುವ ನಾನು, ಲಸಿಕೆಗಾಗಿ ವಿವಿಧ ಖಾಸಗಿ ಆಸ್ಪತ್ರೆಗಳನ್ನು ವಿಚಾರಿಸಿದೆ. ಕೆಲವೆಡೆ ಸದ್ಯ ಲಭ್ಯವಿಲ್ಲ ಎಂದು ತಿಳಿಸಿದರು. ಒಂದೊಂದು ಆಸ್ಪತ್ರೆಯವರು ಒಂದೊಂದು ದರ ಹೇಳುತ್ತಿದ್ದಾರೆ. ಅಂತಿಮವಾಗಿ ಜಯನಗರದ ಕ್ಲಿನಿಕ್‌ ಒಂದರಲ್ಲಿ ₹ 1,350 ಪಾವತಿಸಿ, ಲಸಿಕೆ ಪಡೆದುಕೊಂಡೆ. ಸರ್ಕಾರ ದರ ನಿಗದಿ ಪಡಿಸಿ, ಪಾರದರ್ಶಕ ವ್ಯವಸ್ಥೆ ರೂಪಿಸಬೇಕು’ ಎಂದು ವಿಜಯನಗರದ ನಿವಾಸಿಯೊಬ್ಬರು ತಿಳಿಸಿದರು.

***

ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಿದ ಲಸಿಕೆಗೆ ಗರಿಷ್ಠ ₹ 250 ಮಾತ್ರ ಪಡೆಯಬೇಕು. ಕಂಪನಿಯಿಂದ ನೇರವಾಗಿ ಖರೀದಿಸಿದರೂ ದರವು ಪಾರದರ್ಶಕವಾಗಿರಬೇಕು.
-ಡಾ.ಜಿ. ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ

***

ಖಾಸಗಿಯಾಗಿ ಖರೀದಿಸಿದಾಗ ಪೂರೈಕೆದಾರರು ಒಬ್ಬೊಬ್ಬರಿಗೆ ಒಂದೊಂದು ದರಕ್ಕೆ ಲಸಿಕೆ ನೀಡುತ್ತಾರೆ. ಅಗತ್ಯ ಪ್ರಮಾಣದ ಲಸಿಕೆ ದಾಸ್ತಾನು ಇಲ್ಲ.
-ಡಾ. ಪ್ರಸನ್ನ ಎಚ್‌.ಎಂ., ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT