ಸೋಮವಾರ, ಆಗಸ್ಟ್ 2, 2021
24 °C
ರಸ್ತೆಗಿಳಿಯದ ಸಾರಿಗೆ ಬಸ್, ಟ್ಯಾಕ್ಸಿ, ಆಟೊ; ಜನ ಸಂಚಾರವೂ ವಿರಳ

ಭಾನುವಾರದ ಲಾಕ್‌ಡೌನ್‌: ಮೈಸೂರಿನಲ್ಲಿ ಜನ ಸಂಚಾರ ವಿರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ‘ಭಾನುವಾರದ ಲಾಕ್‌ಡೌನ್‌’ಗೆ ಭಾರಿ ಜನ ಬೆಂಬಲ ವ್ಯಕ್ತವಾಯಿತು.

ಶನಿವಾರ ರಾತ್ರಿಯೇ ಸ್ಥಗಿತಗೊಂಡಿದ್ದ ಚಟುವಟಿಕೆಗಳು ಭಾನುವಾರ ದಿನವಿಡಿ ಬಂದ್ ಇದ್ದವು. ಶೇ 90ಕ್ಕಿಂತ ಹೆಚ್ಚು ಜನರು ತಮ್ಮ ಮನೆಗಳಿಂದ ಹೊರ ಬರದೆ ಸರ್ಕಾರದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಅನಗತ್ಯವಾಗಿ ಸಂಚರಿಸುತ್ತಿದ್ದವರನ್ನು ಕೆಲವೆಡೆ ತಡೆದು ರಸ್ತೆಯಲ್ಲೇ ವಿಚಾರಣೆಗೊಳಪಡಿಸಿದ ಪೊಲೀಸರು, ಬೆರಳೆಣಿಕೆಯ ಮಂದಿಗೆ ಲಾಠಿ ರುಚಿಯನ್ನು ತೋರಿಸಿದ್ದು ಮೈಸೂರಿನ ವಿವಿಧೆಡೆ ಗೋಚರಿಸಿತು.

ಮೈಸೂರಿನ ಪ್ರಮುಖ ಮಾರುಕಟ್ಟೆಗಳು ಬಾಗಿಲು ಮುಚ್ಚಿದ್ದವು. ಯಾವೊಂದು ವಹಿವಾಟು ನಡೆಯಲಿಲ್ಲ. ಪ್ರಮುಖ ರಸ್ತೆಗಳಲ್ಲಿ ಜನ–ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯಾವಳಿ ಎಲ್ಲೆಡೆ ರಾರಾಜಿಸಿದವು.

ನಗರ ಬಸ್‌ ನಿಲ್ದಾಣ, ಕೇಂದ್ರೀಯ ಬಸ್‌ ನಿಲ್ದಾಣ (ಸಬರ್‌ ಬನ್‌) ಸಂಪೂರ್ಣ ಸ್ಥಗಿತಗೊಂಡಿದ್ದವು. ಕೆಎಸ್‌ಆರ್‌ಟಿಸಿಯ ಯಾವೊಂದು ಬಸ್‌ ಜಿಲ್ಲೆಯಲ್ಲಿ ರಸ್ತೆಗಿಳಿಯಲಿಲ್ಲ. ಟ್ಯಾಕ್ಸಿಗಳು ಸಹ ಓಡಾಟ ನಡೆಸಲಿಲ್ಲ. ಕೆಲವೊಂದು ಆಟೊ ಚಾಲಕರು ಚಲಿಸಿದರೂ, ಜನ ಸಂಚಾರವಿಲ್ಲದಿದ್ದರಿಂದ ಅನಿವಾರ್ಯವಾಗಿ ತಮ್ಮ ಮನೆಗಳಿಗೆ ಮರಳಿದರು.

ತರಕಾರಿ–ಹಣ್ಣು–ಹೂವು, ಕೋಳಿ–ಕುರಿ ಮಾಂಸ, ಮೀನು ಮಾರಾಟಗಾರರು ವಿವಿಧೆಡೆ ಸಂಜೆವರೆಗೂ ವಹಿವಾಟು ನಡೆಸಿದರೆ, ಔಷಧಿ ಅಂಗಡಿಗಳು, ಹಾಲಿನ ಬೂತ್‌ಗಳು ದಿನವಿಡಿ ಕಾರ್ಯ ನಿರ್ವಹಿಸಿದವು.

ಪ್ರಮುಖ ರಸ್ತೆಗಳಲ್ಲಿ ವಹಿವಾಟು ನಡೆಯಲಿಲ್ಲ. ಜನರ ಗುಂಪು ಗೋಚರಿಸಲಿಲ್ಲ. ಬಡಾವಣೆಯ ಒಳಭಾಗದಲ್ಲಿ ಚಟುವಟಿಕೆ ಕೊಂಚ ಹೆಚ್ಚಿದ್ದವು. ಜನರ ಓಡಾಟವೂ ನಡೆದಿತ್ತು. ಯುವಕರು ಗುಂಪಾಗಿದ್ದು ಕಂಡು ಬಂದಿತು. ಕೆಲ ದಿನಸಿ ಅಂಗಡಿಗಳು ತೆರೆದಿದ್ದವು.

ದ್ವಿಪಥ ರಸ್ತೆ ಸಂಚಾರವನ್ನು ಮುಚ್ಚಲಾಗಿತ್ತು. ಒಂದೇ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ವಾಹನ ಸಂಚಾರ ವಿರಳವಾಗಿತ್ತು. ಕೆಲ ಒಳ ರಸ್ತೆಗಳ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಲಾಗಿತ್ತು. ಕೆಲವರು ಸುತ್ತಿ ಬಳಸಿ ಓಡಾಟ ನಡೆಸಿದರು. ಪೊಲೀಸರ ಕಣ್ಣಿಗೆ ಬೀಳದಂತೆ ಚಲಿಸಲು ಹರಸಾಹಸ ನಡೆಸಿದರು.

ಪ್ರವೇಶದ್ವಾರ ಬಂದ್: ನಸುಕಿನಲ್ಲೇ ಭಾನುವಾರದ ವಾಯುವಿಹಾರ ಮುಗಿಸಿಕೊಂಡು ಮನೆಗೆ ಮರಳಿದರಾಯ್ತು ಎಂದು ಕುಕ್ಕರಹಳ್ಳಿ ಕೆರೆಯ ಆವರಣಕ್ಕೆ ಬಂದಿದ್ದ ವಾಯುವಿಹಾರಿಗಳಿಗೆ ನಿರಾಸೆ ಉಂಟಾಯಿತು.

ಕೆರೆಯ ಅಂಗಳ ಪ್ರವೇಶಿಸುವ ಮೂರು ದ್ವಾರಗಳನ್ನು ಮುಚ್ಚಿ ಲಾಕ್‌ಡೌನ್‌ ನಿಯಮಾವಳಿಗಳನ್ನು ಸಿಬ್ಬಂದಿ ಪಾಲಿಸಿದ್ದರು. ಇದರಿಂದ ಬೇಸರಗೊಂಡ ವಾಯುವಿಹಾರಿಗಳು ಮನೆಗೆ ಮರಳಿದರು. ಇದಕ್ಕೂ ಮುನ್ನ ಹೊರ ಆವರಣದಲ್ಲೇ ಒಂದೆರಡು ಸುತ್ತು ಹಾಕಿದ್ದು ಕಂಡು ಬಂತು.

ಗುರು ಪೂರ್ಣಿಮೆ ಅಂಗವಾಗಿ ಪ್ರತಿ ವರ್ಷದಂತೆ ಸಾಯಿಬಾಬಾ ದೇಗುಲ, ಅವಧೂತ ದೇಗುಲಗಳಲ್ಲಿ ನಡೆಯಬೇಕಿದ್ದ ವಿಶೇಷ ಪೂಜೆ ಲಾಕ್‌ಡೌನ್‌ನಿಂದ ಭಾನುವಾರ ನಡೆಯಲಿಲ್ಲ. ಭಕ್ತರು ಹೊರ ಭಾಗದಲ್ಲೇ ನಮಿಸಿ ಮನೆಗಳಿಗೆ ಮರಳಿದರು.

‘ಅರ್ಥವಾಗದ ಲಾಕ್‌ಡೌನ್‌’

‘ಭಾನುವಾರ ಸಹಜವಾಗಿಯೇ ಶೇ 60ರಷ್ಟು ಜನ ಮನೆಯಲ್ಲೇ ಉಳಿದಿರುತ್ತಾರೆ. ಈ ದಿನ ಲಾಕ್‌ಡೌನ್‌ ಮಾಡಿದರೆ ಏನು ಪ್ರಯೋಜನ’ ಎಂದು ಆಟೊ ಚಾಲಕ ಕುಮಾರ್ ‘ಪ್ರಜಾವಾಣಿ’ ಬಳಿ ಪ್ರಶ್ನಿಸಿದರು.

‘ಉಳಿದ ದಿನಗಳಲ್ಲಿಯೂ ಹಗಲು ಮುಕ್ತ ಸಂಚಾರಕ್ಕೆ ಅವಕಾಶ ಕೊಟ್ಟು, ರಾತ್ರಿ ನಿಷೇಧ ಹೇರಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ಇದರಿಂದ ತಡೆಯಲು ಸಾಧ್ಯವೇ’ ಎಂದು ಅವರು ಕೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು