ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳಿಗೆ ಅಲೆದಾಟ: 33 ವರ್ಷದ ವ್ಯಕ್ತಿ ಸಾವು

ಕೋವಿಡ್‌ ರೋಗಿಯ ದಾಖಲಿಸಿಕೊಳ್ಳಲು ಹಿಂದೇಟು * ಹಾಸಿಗೆ ಲಭ್ಯ ಇಲ್ಲ ಎಂದ ಆಸ್ಪತ್ರೆಗಳು
Last Updated 10 ಏಪ್ರಿಲ್ 2021, 16:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 33 ವರ್ಷದ ಕೋವಿಡ್ ಪೀಡಿತ ವ್ಯಕ್ತಿಯೊಬ್ಬರು ಎರಡು ಆಸ್ಪತ್ರೆಗಳಿಗೆ ಅಲೆದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆಯೇ ಶನಿವಾರ ಕೊನೆಯುಸಿರೆಳೆದಿದ್ದಾರೆ.

ಶಿವಾಜಿನಗರದ ನಿವಾಸಿ ಆಗಿರುವ ಅವರು, ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಮಡಿವಾಳದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅವರಿಗೆ ಶುಕ್ರವಾರ (ಏ.9) ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಿಂದಾಗಿ ಆಸ್ಪತ್ರೆಯ ವೈದ್ಯರು ಕೋವಿಡ್ ಚಿಕಿತ್ಸೆ ಸಂಬಂಧ ಬೇರೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಸೋಂಕಿತ ವ್ಯಕ್ತಿಯನ್ನು ಕುಟುಂಬದ ಸದಸ್ಯರು ಎರಡು ಆಸ್ಪತ್ರೆಗಳಿಗೆ ಕರೆದೊಯ್ದರೂ ದಾಖಲಿಸಿಕೊಳ್ಳಲಿಲ್ಲ. ಪರಿಣಾಮ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಮೃತಪಟ್ಟಿದ್ದಾರೆ.

‘ಸರ್ಕಾರಿ ಸಹಾಯವಾಣಿಗೆ ಸಂಪರ್ಕಿಸಿದಾಗ ವಸಂತನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವುದಾಗಿ ಸಿಬ್ಬಂದಿ ತಿಳಿಸಿದರು. ಆದರೆ, ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ಹಾಸಿಗೆ ಇಲ್ಲ ಎಂಬ ಕಾರಣ ನೀಡಿ, ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದರು. ಬಳಿಕ ಗಿರಿನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಿರುವುದಾಗಿ ಸಿಬ್ಬಂದಿ ಹೇಳಿದರು. ಆದರೆ, ಅಲ್ಲಿ ಕೂಡ ಹಾಸಿಗೆ ಇಲ್ಲ ಎಂಬ ಕಾರಣ ನೀಡಿ, ದಾಖಲಿಸಿಕೊಂಡಿಲ್ಲ’ ಎಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

‘ಗಿರಿನಗರಕ್ಕೆ ಹೋದಾಗಲೇ ರಾತ್ರಿ 10 ಗಂಟೆಯಾಗಿತ್ತು. ಆ ವೇಳೆ ವ್ಯಕ್ತಿಯ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 25ಕ್ಕೆ ಇಳಿಕೆಯಾಗಿತ್ತು. ಬಳಿಕ ಕೋರಮಂಗಲದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೆಯೇ ಶನಿವಾರ ಬೆಳಿಗ್ಗೆ 4 ಗಂಟೆಗೆ ಮೃತಪಟ್ಟರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದಲ್ಲಿ ಅವರನ್ನು ನಾವು ಕಳೆದುಕೊಳ್ಳುತ್ತಿರಲಿಲ್ಲ’ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಮಹಾವೀರ್ ಜೈನ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ನಿಶಾಂತ್ ಹಿರೇಮಠ್ ಪ್ರತಿಕ್ರಿಯಿಸಿದ್ದು, ‘ರೋಗಿಯನ್ನು ಆಸ್ಪತ್ರೆಗೆ ಕರೆತರುವ ಬಗ್ಗೆ 108 ಸಹಾಯವಾಣಿ ಅಥವಾ ಬಿಬಿಎಂಪಿಯಿಂದ ನಮಗೆ ಸೂಚನೆಯೇ ಬಂದಿಲ್ಲ. ಹೀಗಾಗಿ, ವಸಂತನಗರದ ಶಾಖೆಯಲ್ಲಿ ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದರು.

ಮಹಾವೀರ್ ಜೈನ್‌ ಆಸ್ಪತ್ರೆಗೆ ನೋಟಿಸ್

ಆಸ್ಪತ್ರೆಗಳಲ್ಲಿನ ಹಾಸಿಗೆಗಳ ನಿರ್ವಹಣೆಯಕೇಂದ್ರೀಕೃತ ವ್ಯವಸ್ಥೆ (ಸಿಎಚ್‌ಬಿಎಂಎಸ್‌) ಮೂಲಕ ಹಾಸಿಗೆ ಕಾಯ್ದಿರಿಸಿದ್ದರೂ, ರೋಗಿಯನ್ನು ದಾಖಲಿಸಿಕೊಳ್ಳದ್ದಕ್ಕೆ ವಿವರಣೆ ಕೋರಿ ವಸಂತನಗರದಲ್ಲಿನ ಭಗವಾನ್‌ ಮಹಾವೀರ್‌ ಜೈನ್ ಆಸ್ಪತ್ರೆಗೆ ಬಿಬಿಎಂಪಿಯು ಶನಿವಾರ ನೋಟಿಸ್‌ ನೀಡಿದೆ.

25 ಗಂಟೆಗಳ ಒಳಗೆ ವಿವರಣೆ ನೀಡದಿದ್ದರೆ 2005ರ ವಿಕೋಪ ನಿರ್ವಹಣೆ ಕಾಯ್ದೆ ಮತ್ತು 2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

‘ಕೋವಿಡ್ ರೋಗಿಗಳಿಗೆ ಶೇ 50ರಷ್ಟು ಹಾಸಿಗೆ ಮೀಸಲು ಇಡಬೇಕು ಎಂದು ಸರ್ಕಾರ ಆದೇಶ ನೀಡಿದ್ದರೂ ಅದನ್ನು ಪಾಲಿಸಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವಿಗೀಡಾಗಿದ್ದಾರೆ. ಇದಕ್ಕೆ ವಿವರಣೆ ನೀಡಿ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT