ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ತಪಾಸಣೆಗೆ ವೈದ್ಯ ವಿದ್ಯಾರ್ಥಿಗಳ ನಿಯೋಜನೆ

400 ಮಂದಿ ಗಂಟಲಿನ ದ್ರವ, ರಕ್ತ ಪರೀಕ್ಷೆ: ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ
Last Updated 7 ಮಾರ್ಚ್ 2020, 22:02 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್‌–19 ಸೋಂಕು ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲು ಆರೋಗ್ಯ ಇಲಾಖೆಯು, ವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಿಯೋಜಿಸಿದೆ.

ಈವರೆಗೆ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಲ್ಲಿ 77,469 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ರೋಗ ಲಕ್ಷಣ ಆಧರಿಸಿ 400 ಮಂದಿಯ ಗಂಟಲಿನ ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 326 ಮಂದಿಯ ವರದಿ ಬಂದಿದೆ. ಈವರೆಗೆ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.

ಸೋಂಕು ಪ್ರಕರಣಗಳು ವರದಿಯಾದ 77 ದೇಶಗಳ ಪ್ರಜೆಗಳ ಮೇಲೆಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ನಿಗಾ ಇಡಲಾಗಿದ್ದು, ಥರ್ಮಲ್‌ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ನಿರ್ದೇಶಕ ಓಂಪ್ರಕಾಶ್ ಪಾಟೀಲ ಹಾಗೂ ಅಧಿಕಾರಿಗಳು ವಿಮಾನನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ, ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಗಳಲ್ಲಿ ಶಂಕಿತರ ಸರ್ವೇಕ್ಷಣೆ ನಡೆಸಲುವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಆಸ್ಪತ್ರೆಗಳ ವೈದ್ಯರು ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸರ್ವೇಕ್ಷಾಣಾಧಿಕಾರಿಗಳಿಗೆ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಸೋಂಕಿನ ಲಕ್ಷಣ ಹಾಗೂ ಮುನ್ನೆಚ್ಚರಿಕೆ ಬಗ್ಗೆ ದೂರವಾಣಿ ಸಂದೇಶದ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.

‘ತುಳಸಿ, ಅಮೃತಬಳ್ಳಿ ಅರಿಶಿಣ ಬಳಸಿ’: ಸೋಂಕು ಬರದಂತೆ ಮುನ್ನೆಚ್ಚರಿಕೆ ವಹಿಸಲು ಆಯುಷ್ ಸಚಿವಾಲಯವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ತುಳಸಿ, ಅಮೃತಬಳ್ಳಿ ಮತ್ತು ಅರಿಶಿಣವನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದೆ.

ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ತುಳಸಿ, ಶುಂಠಿ ಹಾಗೂ ಅರಿಶಿಣವನ್ನು ಬಿಸಿನೀರಿನಲ್ಲಿ ಕುದಿಸಿ, ಸ್ವಲ್ಪ ಸ್ವಲ್ಪ ಕುಡಿಯಬೇಕು. ಕೆಮ್ಮು ಇದ್ದಾಗ ಜೇನುತುಪ್ಪದೊಂದಿಗೆ 1 ಚಿಟಕಿ ಕಾಳುಮೆಣಸನ್ನು ಸೇರಿಸಿ, ಸೇವಿಸಬೇಕು. ಶೀತಲೀಕರಿಸಿದ ಪದಾರ್ಥಗಳನ್ನು ಸೇವಿಸದಿರುವುದು ಒಳ್ಳೆಯದು. ತಂಪಾದ ಗಾಳಿಯಿಂದ ಅಂತರ ಕಾಯ್ದುಕೊಳ್ಳಬೇಕು. ಯೋಗಾಸನ ಮತ್ತು ಪ್ರಾಣಾಯಾಮ ಮಾಡಬೇಕು ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT