ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಸಂಕಷ್ಟಕ್ಕೆ ಸ್ಪಂದಿಸುವ ‘ಮರ್ಸಿ ಮಿಷನ್‌’

Last Updated 30 ಏಪ್ರಿಲ್ 2021, 21:38 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲೊಂದು ತಂಡ ನೊಂದವರ ನೋವಿಗೆ ಮಿಡಿಯುತ್ತಿದೆ. ಹಸಿದವರಿಗೆ ಆಹಾರ ಒದಗಿಸುತ್ತಿದೆ. ಅಶಕ್ತರಿಗೆ ವೈದ್ಯಕೀಯ ಆಮ್ಲಜನಕ ಒದಗಿಸುವ ಜೊತೆಗೆ ಸತ್ತವರ ಶವಸಂಸ್ಕಾರಕ್ಕೂ ನೆರವಾಗುತ್ತಿದೆ. ಅದರ ಹೆಸರು ‘ಮರ್ಸಿ ಮಿಷನ್‌’.

ಕಳೆದ ವರ್ಷ ಮಾರ್ಚ್‌ನಲ್ಲಿ ತಲೆ ಎತ್ತಿದ ಈ ತಂಡ ಅಂದಿನಿಂದಲೂ ಸೇವೆ ಮಾಡುತ್ತಾ ಬಂದಿದೆ. ಸಮಾನ ಮನಸ್ಕ ಸಂಘಟನೆಗಳನ್ನು ಒಂದೇ ಸೂರಿನಡಿ ತಂದು ತನ್ನ ಕಾರ್ಯಜಾಲ ವಿಸ್ತರಿಸಿಕೊಂಡಿದೆ. ಆ ಮೂಲಕ ಕಷ್ಟದಲ್ಲಿರುವವರ ಕಣ್ಣೊರೆಸುವ ಕಾಯಕದಲ್ಲಿ ತೊಡಗಿಕೊಂಡಿದೆ.

ಹೋದ ವರ್ಷ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದ ಈ ತಂಡ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪಿತ್ತು. ಪ್ರಮುಖ ಹೋಟೆಲ್‌ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ನಗರದ ವಿವಿಧ ಭಾಗಗಳಲ್ಲಿ 35 ಅಡುಗೆ ಮನೆಗಳನ್ನು ಸ್ಥಾಪಿಸಿ ಅಲ್ಲಿ ಸಿದ್ಧವಾದ ಒಟ್ಟು 12.3 ಲಕ್ಷದಷ್ಟು ಆಹಾರದ ಪೊಟ್ಟಣಗಳನ್ನು ವೈದ್ಯರು, ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ತಲುಪಿಸುವ ಕೆಲಸ ಮಾಡಿತ್ತು. ತಂಡದ ಈ ಕಾರ್ಯ ಈಗಲೂ ಮುಂದುವರಿದಿದೆ.

‘ಎರಡನೇ ಅಲೆ ಕಾಣಿಸಿಕೊಂಡ ನಂತರ ರಾಜ್ಯದಲ್ಲಿ ಹಾಸಿಗೆ, ಆಮ್ಲಜನಕ ಹಾಗೂ ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ಸಮಸ್ಯೆ ತಲೆದೋರಿದೆ. ಈ ಸಂಬಂಧ ನಮ್ಮ ಸಹಾಯವಾಣಿಗೆ ಪ್ರತಿನಿತ್ಯ ಸಾವಿರಾರು ಕರೆಗಳು ಬರುತ್ತಿವೆ. ಇದಕ್ಕೆ ತ್ವರಿತಗತಿಯಲ್ಲಿ ಸ್ಪಂದಿಸುವ ಕೆಲಸವನ್ನು ‘ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌’ ಮಾಡುತ್ತಿದೆ. ‘ಮರ್ಸಿ ಪ್ಲಾಸ್ಮಾ’, ‘ಮರ್ಸಿ ಟೆಲಿಮೆಡಿಸಿನ್‌’ ಎಂಬ ತಂಡಗಳನ್ನೂ ಆರಂಭಿಸಿದ್ದೇವೆ. ಟೆಲಿಮೆಡಿಸಿನ್‌ ತಂಡದಲ್ಲಿ ನುರಿತ ವೈದ್ಯರಿದ್ದಾರೆ. ರೋಗಿಗಳಿಗೆ ದೂರವಾಣಿ ಮೂಲಕ ಅಗತ್ಯ ಸಲಹೆ ಮತ್ತು ಮಾಹಿತಿ ಒದಗಿಸುತ್ತಾರೆ’ ಎಂದು‌ ತಂಡದ ಸದಸ್ಯ ತನ್ವೀರ್‌ ಅಹಮ್ಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರ್ಸಿ ಏಂಜೆಲ್‌’ ತಂಡ ಶವಸಂಸ್ಕಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ನಮ್ಮಲ್ಲಿ ಒಟ್ಟು ಒಂಬತ್ತು ಆಂಬುಲೆನ್ಸ್‌ಗಳಿವೆ. ಆ ಪೈಕಿ ಎರಡು ಆಂಬುಲೆನ್ಸ್‌ ಅನ್ನು ಶವ ಸಾಗಿಸಲು ಮೀಸಲಿಟ್ಟಿದ್ದೇವೆ. ‘ಮರ್ಸಿ ಆಕ್ಸಿಜನ್‌’ ಮೂಲಕ ಸಂಕಷ್ಟದಲ್ಲಿರುವವರು ಹಾಗೂ ಬಡವರಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸಿದ್ದೇವೆ. ನಾವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಯಾರೇ ಕಷ್ಟದಲ್ಲಿದ್ದರೂ ಅವರಿಗೆ ನೆರವಾಗಬೇಕು ಎಂಬುದಷ್ಟೇ ನಮ್ಮ ಧ್ಯೇಯ. ಡಾ.ತಾಹ ಮತೀನ್‌ ನೇತೃತ್ವದಲ್ಲಿ ಈ ಕೆಲಸ ಮಾಡುತ್ತಿದ್ದೇವೆ’ ಎಂದರು.

ಸಂಪರ್ಕಕ್ಕೆ: 9886194492 (ತನ್ವೀರ್‌), 9590008889 (ತೌಸಿಫ್‌), 9945926787 (ಇಸ್ಮಾಯಿಲ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT