ಭಾನುವಾರ, ಸೆಪ್ಟೆಂಬರ್ 27, 2020
27 °C
ಕೋವಿಡ್ 19 ನಿರ್ವಹಣೆ ಕುರಿತು 10 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ವಿಡಿಯೊ ಸಂವಾದ

ಕೊನೆ ವರ್ಷ ವೈದ್ಯಕೀಯ, ಪ್ಯಾರಾ ಮೆಡಿಕಲ್‌: ಆರಂಭಿಸಲು ಅನುಮತಿಗೆ ರಾಜ್ಯದ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್ ಸಂಬಂಧಿತ ಚಟುವಟಿಕೆಗೆ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅಂತಿಮ ವರ್ಷದ ಪೂರ್ವದಲ್ಲಿರುವ ಪ್ಯಾರಾ ಮೆಡಿಕಲ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಪಾಠಗಳನ್ನು ಆರಂಭಿಸಲು ಅನುಮತಿ ನೀಡಬೇಕು’ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಬಳಿ ಮನವಿ ಮಾಡಿದೆ.

ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಸಕ್ರಿಯ ಪ್ರಕರಣಗಳು ಹೆಚ್ಚಿರುವ 10 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ಮತ್ತು ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಈ ಬೇಡಿಕೆ ಮುಂದಿಟ್ಟಿದ್ದಾರೆ.

ಅಲ್ಲದೆ, ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ವರ್ಷ 10 ಸಾವಿರ ಪದವಿ ಮತ್ತು 2 ಸಾವಿರ ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಮನವಿ ಮಾಡಲಾಯಿತು. ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೋರ್ಸು ಮುಗಿದ ನಂತರ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಲು ಮಾರ್ಗಸೂಚಿ ಹೊರಡಿಸಬೇಕು. ಲಿಕ್ವಿಡ್ ಆಕ್ಷಿಜನ್ ಘಟಕಗಳನ್ನು ಲಭ್ಯತೆ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಆರೋಗ್ಯ ಕುರಿತ ಸಂಶೋಧನೆಯನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಮನವಿ ಮಾಡಲಾಯಿತು.

ಪ್ರಧಾನಿ ಮಾತನಾಡಿ, ‘ಕೋವಿಡ್ ಹೆಚ್ಚಾಗಿರುವ ರಾಜ್ಯಗಳಲ್ಲಿ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಈ ಸಭೆ ಕರೆಯಲಾಯಿತು. ಪ್ರತಿ ರಾಜ್ಯವೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ತಂಡ ಸ್ಫೂರ್ತಿಯೊಂದಿಗೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

’ಒಟ್ಟಾಗಿ ಈ 10 ರಾಜ್ಯಗಳಲ್ಲಿ ಕೊರೊನಾವನ್ನು ಸಮರ್ಥವಾಗಿ ಎದುರಿಸಿದರೆ, ದೇಶವೇ ಈ ಹೋರಾಟದಲ್ಲಿ ಗೆದ್ದಂತೆ. ಸಾಂಕ್ರಾಮಿಕವನ್ನು ಗುರುತಿಸಿ, ತಡೆಗಟ್ಟುವಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದ ಅವರು, ‘ಸಕ್ರಿಯ ಪ್ರಕರಣಗಳ ಸಂಖ್ಯೆ ಹಾಗೂ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ ಹಾಗೂ ಜನರಲ್ಲಿ ಭೀತಿಯೂ ಕಡಿಮೆ ಮಾಡಿದೆ’ ಎಂದರು.

‘ಮರಣ ಪ್ರಮಾಣ ಶೇ 1ಕ್ಕಿಂತ ಕಡಿಮೆ ಮಾಡಲು ನಾವು ಶ್ರಮಿಸಬೇಕಿದೆ. ಸಂಪರ್ಕ ಪತ್ತೆ, ಪರೀಕ್ಷೆ ಹಾಗೂ ಸರ್ವೇಕ್ಷಣಾ ವ್ಯವಸ್ಥೆ ಕೊರೊನಾ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆರಂಭದಲ್ಲಿಯೇ ರೋಗ ಪತ್ತೆ ಮಾಡಿದಲ್ಲಿ ಸಾಂಕ್ರಾಮಿಕವನ್ನು ತಡೆಗಟ್ಟಲು ಸಾಧ್ಯವಿದೆ. 72 ಗಂಟೆಯ ಒಳಗಾಗಿ ಸೋಂಕಿತರನ್ನು ಹಾಗೂ ಅವರ ಸಂಪರ್ಕಿತರನ್ನು ಪತ್ತೆ ಮಾಡುವ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂದರು.

‘ರಾಜ್ಯದಲ್ಲಿ ಸರ್ವೇಕ್ಷಣೆ, ಪತ್ತೆ ಹಾಗೂ ರೋಗ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲು ಬೂತ್ ಮಟ್ಟದ ತಂಡಗಳನ್ನು ರಚಿಸಲಾಗಿದೆ’ ಎಂದು ಪ್ರಧಾನಿಗೆ ಸುಧಾಕರ್‌ ಮಾಹಿತಿ ನೀಡಿದರು.

‘ಪ್ರತಿದಿನ ಕೋವಿಡ್ ಪರೀಕ್ಷೆಯನ್ನು 20 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು 75 ಸಾವಿರಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ರಾಜ್ಯದಲ್ಲಿ ಐಸಿಎಂಆರ್ ಅನುಮೋದಿತ 100 ಪ್ರಯೋಗಾಲಯಗಳಿದ್ದು, 1300 ಮೊಬೈಲ್ ಪರೀಕ್ಷಾ ತಂಡಗಳನ್ನು ನಿರ್ಬಂಧಿತ ಸ್ಥಳಗಳು ಹಾಗೂ ಬಫರ್ ವಲಯಗಳಲ್ಲಿ ನಿಯೋಜಿಸಲಾಗಿದೆ’ ಎಂದೂ ತಿಳಿಸಿದರು.

‘ರೋಗ ಲಕ್ಷಣಗಳಿಲ್ಲದ ಪ್ರಕರಣಗಳನ್ನು ಗೃಹಗಳಲ್ಲಿ ನಿರ್ಬಂಧಿಸಲಾಗಿದ್ದು, ಅವರನ್ನು ಟೆಲಿ ಮಾನಿಟರಿಂಗ್ ಮೂಲಕ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಹಾಗೂ ಆರೋಗ್ಯ ತಂಡಗಳ ಸದಸ್ಯರು ಭೇಟಿ ನೀಡುತ್ತಿದ್ದಾರೆ. 43 ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ 17 ಸರ್ಕಾರಿ ಕಾಲೇಜುಗಳು ಸೇರಿದಂತೆ ಶೇ 50ರಷ್ಟು ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಚಿಕಿತ್ಸೆಗೆ ಮೀಸಲಿಡಲಾಗಿದೆ’

‘ಸರ್ಕಾರ ಎಲ್ಲ ಸೋಂಕಿತರ ಪರೀಕ್ಷೆ ಹಾಗೂ ಚಿಕಿತ್ಸೆ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಂದ ಶಿಫಾರಸಾಗಿ ಬಂದ ಪ್ರಕರಣಗಳನ್ನೂ ಒಳಗೊಂಡಂತೆ ಭರಿಸುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 1.04 ಲಕ್ಷ ಹಾಸಿಗೆಗಳ ಜೊತೆಗೆ 10,100 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ ಕೋವಿಡ್ ಕೇರ್ ಸೆಂಟರ್ ಅನ್ನು ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.’

‘ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ 5,500 ಆಕ್ಷಿಜನ್ ಬೆಡ್‍ಗಳೊಂದಿಗೆ 1,600 ಬೆಡ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ 5,000 ಬೆಡ್‍ಗಳು ಲಭ್ಯವಾಗಲಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಒಟ್ಟು 20 ಸಾವಿರ ಆಕ್ಷಿಜನೇಟೆಡ್ ಬೆಡ್‍ಗಳು ಉಪಯೋಗಕ್ಕೆ ಲಭ್ಯವಾಗಲಿದೆ.’

‘ರಾಜ್ಯದಲ್ಲಿ ಆಂಬ್ಯುಲೆನ್ಸ್‌ಗಳ ಸಂಖ್ಯೆಯನ್ನು 800ರಿಂದ 2000ಕ್ಕೆ ಹೆಚ್ಚಿಸಲಾಗಿದೆ. ಅಂತರ ಹಾಗೂ ಮಾಸ್ಕ್ ಧರಿಸುವ ನಿಯಮ ಉಲ್ಲಂಘಿಸಿದ 2,05,029 ಪ್ರಕರಣಗಳನ್ನು ದಾಖಲಿಸಿದ್ದು, ₹ 6.65 ಕೋಟಿ ದಂಡ ಸಂಗ್ರಹಿಸಲಾಗಿದೆ. ಗೃಹ ನಿರ್ಬಂಧ ಉಲ್ಲಂಘಿಸಿದ 3,246 ವ್ಯಕ್ತಿಗಳನ್ನು ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್‍ಗೆ ಸ್ಥಳಾಂತರಿಸಲಾಗಿದೆ. 5821 ಎಫ್‍ಐಆರ್‌ ದಾಖಲಿಸಲಾಗಿದೆ’.

‘ಮರಣ ಪ್ರಮಾಣ ಕಡಿತಗೊಳಿಸುವುದು ನಮ್ಮ ಆದ್ಯತೆ. ಈ ಸಂಬಂಧ ಪರೀಕ್ಷಾ ಪ್ರಮಾಣದಲ್ಲಿ ಹೆಚ್ಚಳ, ಸ್ಯಾಂಪಲ್ ಸಂಗ್ರಹ ಮತ್ತು ತ್ವರಿತ ಫಲಿತಾಂಶ ಒದಗಿಸುವುದು ಹಾಗೂ ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರವಾಗುವ ಸಮಯದಲ್ಲಿ ಕಡಿತ ಇವೆಲ್ಲ ಕ್ರಮಗಳಿಂದ ಮರಣ ಪ್ರಮಾಣವನ್ನು ಆಗಸ್ಟ್ ವೇಳೆಗೆ ಶೇ 1.8ಗೆ ಇಳಿಸಲಾಗಿದೆ.’

‘ಒಟ್ಟು 1,82,354 ಪ್ರಕರಣಗಳ ಪೈಕಿ 79,908 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಪ್ರಸ್ತುತ 1.14 ಲಕ್ಷ ಕೋವಿಡ್ ಕೇರ್ ಕೇಂದ್ರಗಳ ಬೆಡ್‍ಗಳು, 20,000 ಸಾಮಾನ್ಯ ಬೆಡ್‍ಗಳು, 8,000 ಆಕ್ಷಿಜನ್ ವ್ಯವಸ್ಥೆಯುಳ್ಳ ಬೆಡ್‍ಗಳು ಹಾಗೂ 3,000 ಐಸಿಯು ಬೆಡ್ ಮತ್ತು 1,500 ವೆಂಟಿಲೇಟರ್ ಇರುವ ಐಸಿಯು ಬೆಡ್‍ಗಳನ್ನು ಹೊಂದಿದ್ದು ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧವಾಗಿದೆ.’

‘ಕೇಂದ್ರದಿಂದ 2,025 ವೆಂಟಿಲೇಟರ್‌ಗಳನ್ನು ಒದಗಿಸಲಾಗಿದೆ. ಸಮಗ್ರ ಡಾಟಾ ನಿರ್ವಹಣೆಗೆ ಬಿಬಿಎಂಪಿ ಆರೋಗ್ಯ ಕೇಂದ್ರಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳು ಸಂಯೋಜಿತವಾಗಿದೆ’ ಎಂದೂ ಪ್ರಧಾನಿಗೆ ಮಾಹಿತಿ ನೀಡಲಾಯಿತು.

ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಇದ್ದರು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಬಿಹಾರ್, ಗುಜರಾತ್, ಪಂಜಾಬ್, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಸಂವಾದದಲ್ಲಿ ಭಾಗವಹಿಸಿದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು