ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್: ಲಕ್ಷಣ ಆಧರಿಸಿ ಚಿಕಿತ್ಸೆ: ಡಾ.ಸಿ. ನಾಗರಾಜ್

Last Updated 3 ಡಿಸೆಂಬರ್ 2021, 16:35 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ವೈರಾಣುವಿನ ಡೆಲ್ಟಾ ಸೇರಿದಂತೆ ವಿವಿಧ ತಳಿಗಳಿಗೆಅನುಸರಿಸುತ್ತಿರುವ ಚಿಕಿತ್ಸಾ ವಿಧಾನವನ್ನೇ ಹೊಸದಾಗಿ ಕಾಣಿಸಿಕೊಂಡಿರುವ ಓಮೈಕ್ರಾನ್ ತಳಿಗೂ ಅನುಸರಿಸಲಾಗುತ್ತದೆ’ ಎಂದುರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

ಓಮೈಕ್ರಾನ್ ತಳಿಯ ವೈರಾಣು ಪತ್ತೆಯಾದವರಿಗೆ ಚಿಕಿತ್ಸೆ ಒದಗಿಸಲು ಸಂಸ್ಥೆಯಕೋವಿಡ್ ಫೀಲ್ಡ್‌ ಆಸ್ಪತ್ರೆಯಲ್ಲಿ 200 ಹಾಸಿಗೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಾಗ ಇದೇಸಂಸ್ಥೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.

‘ದಕ್ಷಿಣ ಆಫ್ರಿಕಾದಲ್ಲಿ ಈ ತಳಿಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. ಅಲ್ಲಿನ ತಜ್ಞರ ಬಳಿಯೂ ಚಿಕಿತ್ಸೆ ಬಗ್ಗೆ ಚರ್ಚಿಸಲಾಗಿದೆ. ಹೊಸ ತಳಿಯ ಸೋಂಕಿತರಿಗೆ ವಿಶೇಷ ಚಿಕಿತ್ಸೆಗಳು ಅಗತ್ಯವಿರುವುದಿಲ್ಲ. ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ತಳಿಯ ವೈರಾಣು ವೇಗವಾಗಿ ಹರಡಲಿದೆ. ಆದರೆ, ತೀವ್ರತೆ ಕಡಿಮೆ’ ಎಂದುಡಾ.ಸಿ. ನಾಗರಾಜ್ ವಿವರಿಸಿದರು.

‘ವೈರಾಣು ರೂಪಾಂತರಗೊಳ್ಳುವುದು ಸಾಮಾನ್ಯ. ಕೋವಿಡ್ ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ವೇಗವಾಗಿ ವ್ಯಾಪಿಸಿಕೊಂಡಿತ್ತು. ಆದರೆ, ಅದರ ತೀವ್ರತೆ ಮೊದಲ ಅಲೆಯಷ್ಟು ಇರಲಿಲ್ಲ. ಹೆಚ್ಚಿನವರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಂಡರು. ಓಮೈಕ್ರಾನ್ ತಳಿಯ ವೈರಾಣು ಪತ್ತೆಯಾದವರಲ್ಲಿಯೂ ಲಕ್ಷಣಗಳು ಅಷ್ಟಾಗಿ ಗೋಚರಿಸುವುದಿಲ್ಲ. ಜ್ವರ, ಮೈಕೈ ನೋವು ಸೇರಿದಂತೆ ಕೆಲವೊಂದು ಲಕ್ಷಣಗಳು ಸೌಮ್ಯವಾಗಿ ಕಾಣಿಸಿಕೊಳ್ಳುತ್ತವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಪತ್ತೆಯಾಗಿರುವ ಓಮೈಕ್ರಾನ್ ಪ್ರಕರಣಗಳಲ್ಲಿ ಒಬ್ಬರಿಗೆ ಪ್ರಯಾಣದ ಇತಿಹಾಸವಿಲ್ಲ. ಹೀಗಾಗಿ, ಸಮುದಾಯದ ಹಂತದಲ್ಲಿಯೆ ಈ ತಳಿಯ ವೈರಾಣು ಅಭಿವೃದ್ಧಿಗೊಂಡಿದೆಯೇ ಎನ್ನುವುದರ ಬಗ್ಗೆ ಅಧ್ಯಯನಗಳು ನಡೆಯಬೇಕಿದೆ’ ಎಂದರು.

‘ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಶೇ 90 ರಷ್ಟು ಮಂದಿ ಮೊದಲ ಡೋಸ್ ಹಾಗೂ ಶೇ 60 ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆಯು ಸೋಂಕಿನ ಹರಡುವಿಕೆ ಹಾಗೂ ತೀವ್ರತೆ ತಡೆಗೆ ಸಹಕಾರಿ. ಎಲ್ಲರೂ ಆದಷ್ಟು ಬೇಗ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಮುಖಗವಸು ಧರಿಸುವಿಕೆ ಸೇರಿದಂತೆ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT