ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಪಾಲನೆಯಾಗದ ನಿಯಮ: ಕಣ್ಣುಮುಚ್ಚಿ ಕುಳಿತ ಸರ್ಕಾರ

ವಾಣಿಜ್ಯ ಚಟುವಟಿಕೆ ಸ್ಥಳಗಳಲ್ಲಿ ಸೋಂಕು ಹರಡುವ ಭೀತಿ
Last Updated 11 ಜೂನ್ 2020, 21:28 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ ಡೌನ್ ಸಡಿಲಿಕೆಯ ಬಳಿಕ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಕೆಲವೊಂದು ನಿಯಮ ಹಾಗೂ ನಿರ್ಬಂಧಗಳೊಂದಿಗೆ ಸರ್ಕಾರ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ, ಸೂಪರ್ ಮಾರುಕಟ್ಟೆ, ಕಚೇರಿಗಳು, ಸಲೂನ್‌ಗಳು ಸೇರಿದಂತೆ ವಿವಿಧೆಡೆ ಸಾಮಾನ್ಯ ನಿಯಮಗಳು ಕೂಡ ಪಾಲನೆಯಾಗುತ್ತಿಲ್ಲ.

ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಸಿದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಈವರೆಗೆ ವರದಿಯಾದ ಪ್ರಕರಣಗಳಲ್ಲಿ ಶೇ 97 ರಷ್ಟು ಮಂದಿಯಲ್ಲಿ ಸೋಂಕಿನ ಲಕ್ಷಣಗಳೇ ಕಾಣಿಸಿಕೊಂಡಿಲ್ಲ. ಇದರಿಂದಾಗಿ ಅಂತವರ ಸಂಪರ್ಕಕ್ಕೆ ಬಂದವರಲ್ಲಿ ಕೆಲವರು ಸೋಂಕಿತರಾಗಿ ಆಸ್ಪತ್ರೆಗಳನ್ನು ಸೇರುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ವಾಣಿಜ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಲಾಕ್ ಡೌನ್‌ ಸಡಿಲಿಸಿದೆ. ವಿವಿಧ ವಲಯಗಳಿಗೆ ಸೇವೆ ಪುನರಾರಂಭಿಸಲು ಷರತ್ತುಬದ್ಧ ಅನುಮತಿಯನ್ನು ನೀಡುವ ಜತೆಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಿ, ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ. ಆದರೆ, ಈಗ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳು ನಾಮ್‌ಕಾವಸ್ತೆ ಎಂಬಂತಾಗಿದೆ.

ಸಲೂನ್ –ಪಾರ್ಲರ್‌ಗಳು, ಪಿ.ಜಿಗಳು (ಪೇಯಿಂಗ್ ಗೆಸ್ಟ್), ಹೋಟೆಲ್‌ಗಳು, ಆಸ್ಪತ್ರೆಗಳು, ಕಚೇರಿಗಳು, ಉದ್ಯಾನಗಳು, ಸೂಪರ್ ಮಾರುಕಟ್ಟೆಗಳು, ಮಾಲ್‌ಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರತ್ಯೇಕವಾದ ನಿಯಮ ರೂಪಿಸಲಾಗಿದೆ. ಸಲೂನ್‌ಗಳಲ್ಲಿ ಪ್ರತಿಯೊಬ್ಬ ಗ್ರಾಹಕನಿಗೂ ಬಳಸಿ ಎಸೆಯಬಹುದಾದ ಟವೆಲ್‌ ಅಥವಾ ಪೇಪರ್ ಹಾಳೆಯನ್ನು ಬಳಕೆ ಮಾಡಬೇಕು. ಅಷ್ಟೇ ಅಲ್ಲ, ಗ್ರಾಹಕನಿಗೆ ಬಳಕೆ ಮಾಡಿದ ಎಲ್ಲ ಸಾಧನಗಳನ್ನು 30 ನಿಮಿಷಗಳ ಕಾಲ ಲೈಸಾಲ್ ಬಳಸಿ, ಸೋಂಕು ನಿವಾರಣೆ ಮಾಡಬೇಕು. ಆದರೆ, ಯಾವುದೇ ಸಲೂನಿನಲ್ಲಿಯೂ ಈ ನಿಯಮಗಳು ಪಾಲನೆಯಾಗುತ್ತಿಲ್ಲ.ಸಿಬ್ಬಂದಿಯು ಮುಖಗವಸು, ತಲೆಗೆ ಟೋಪಿ ಮತ್ತು ಏಪ್ರನ್ ಕೂಡ ಧರಿಸದೆ ಸೇವೆ ನೀಡುತ್ತಿದ್ದಾರೆ. ವೃದ್ಧರು ಸೇರಿದಂತೆ ವಿವಿಧ ವಯೋಮಾನದವರು ಇಲ್ಲಿಗೆ ಬರುವುದರಿಂದ ಮುಂಜಾಗರೂಕತೆ ವಹಿಸದಿದ್ದಲ್ಲಿ ಸೋಂಕು ಹರಡುವ ಸಾಧ್ಯತೆಗಳಿವೆ.

ನಡೆಯದ ತಪಾಸಣೆ: ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಗ್ರಾಹಕರನ್ನು ತಪಾಸಣೆ ಮಾಡಬೇಕು. ಅದೇ ರೀತಿ, ಗ್ರಾಹಕರು ಪರಸ್ಪರ ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಈ ನಿಯಮಗಳು ಸಣ್ಣ ಹಾಗೂ ಮಧ್ಯಮ ವಿಭಾಗದ ಹೋಟೆಲ್‌ಗಳಲ್ಲಿ ಪಾಲನೆಯಾಗುತ್ತಿಲ್ಲ. ಅದೇ ರೀತಿ, ಸಿಬ್ಬಂದಿ ಕೈಗವಸುಗಳನ್ನು ಧರಿಸದೇ ಸೇವೆ ಒದಗಿಸುತ್ತಿದ್ದಾರೆ. ಸೂಪರ್ ಮಾರುಕಟ್ಟೆ, ಮಾಲ್‌ಗಳಲ್ಲಿ ಜನದಟ್ಟಣೆ ಉಂಟಾಗುತ್ತಿದ್ದು, ಪರಸ್ಪರ ಅಂತರ ಸಾಧ್ಯವಾಗುತ್ತಿಲ್ಲ. ಮುಖಗವಸು ಧರಿಸಿಲ್ಲದವರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಪಿ.ಜಿಗಳಲ್ಲಿಹಾಸಿಗೆಗಳ ನಡುವೆ 2 ಮೀ. ಅಂತರ ಇಲ್ಲವಾಗಿದೆ.ಅಲ್ಲಿ ಒಂದೇ ಸ್ನಾನಗೃಹ, ಶೌಚಾಲಯವನ್ನು ಹಲವರು ಬಳಕೆ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಹೊರಗಡೆಯಿಂದ ಬಂದಾಗ ತಪಾಸಣೆಯನ್ನೂ ಮಾಡಲಾಗುತ್ತಿಲ್ಲ.

ಸಾಮಾನ್ಯ ನಿಯಮಗಳೂ ಉಲ್ಲಂಘನೆ
* ಸೂಪರ್ ಮಾರುಕಟ್ಟೆ, ಮಾಲ್‌ಗಳಲ್ಲಿ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯಿಲ್ಲ
* ಸಲೂನ್‌ಗಳು, ಹೋಟೆಲ್‌ಗಳು ಸೇರಿದಂತೆ ವಿವಿಧೆಡೆ ಸ್ಯಾನಿಟೈಸರ್ ಇಡುತ್ತಿಲ್ಲ
* ಕಚೇರಿಗಳು ಸೇರಿದಂತೆ ವಿವಿಧೆಡೆ ಲಿಫ್ಟ್‌ಗಳಲ್ಲಿ 4ಕ್ಕೂ ಅಧಿಕ ಮಂದಿ ಸಾಗುತ್ತಿದ್ದಾರೆ
* ಸಲೂನ್‌ಗಳಲ್ಲಿ ಒಂದು ಮೀಟರ್ ಅಂತರದಲ್ಲಿ ಆಸನಗಳನ್ನು ಅಳವಡಿಸಿಲ್ಲ‌
* ಕಚೇರಿಗಳಲ್ಲಿ ಆರು ಅಡಿ ಅಂತರ ಕಾಯ್ದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ
* ಉದ್ಯಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದು, ಎಲ್ಲೆಂದರೆಲ್ಲಿ ಉಗುಳುತ್ತಿದ್ದಾರೆ

**
ನಿಯಮ ಉಲ್ಲಂಘಿಸಿದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರಿಗೆ ಕ್ರಮ ಕೈಗೊಳ್ಳುವ ಅಧಿಕಾರವಿದೆ.
-ಪಂಕಜ್‌ ಕುಮಾರ್ ಪಾಂಡೆ, ಆರೋಗ್ಯ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT