ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 1.5 ಲಕ್ಷದತ್ತ ಸೋಂಕಿತರ ಸಂಖ್ಯೆ

Last Updated 6 ಸೆಪ್ಟೆಂಬರ್ 2020, 20:41 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದಲ್ಲಿ 2,824 ಕೋವಿಡ್ ಪ್ರಕರಣಗಳು ಭಾನುವಾರ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.5 ಲಕ್ಷದ ಗಡಿ (1,47,581) ಸಮೀಪಿಸಿದೆ.

ಮಾ.8ರಂದು ಪ್ರಥಮ ಪ್ರಕರಣ ವರದಿಯಾಗಿದ್ದರೂ ಸರ್ಕಾರವು ಲಾಕ್‌ ಡೌನ್‌ ಘೋಷಿಸುವ ವೇಳೆಗೆ (ಮಾ.24) ನಗರದಲ್ಲಿ 32 ಪ್ರಕರಣಗಳು ಮಾತ್ರ ದೃಢಪಟ್ಟಿದ್ದವು. ಮೊದಲ ಹಂತದ ಲಾಕ್‌ ಡೌನ್ ಅಂತ್ಯವಾಗುವ ವೇಳೆಗೆ 71 ಪ್ರಕರಣಗಳಷ್ಟೇ ಪತ್ತೆಯಾಗಿದ್ದವು. ನಾಲ್ಕನೇ ಹಂತದ ಲಾಕ್‌ ಡೌನ್ ಮುಕ್ತಾಯವಾಗುವ ವೇಳೆ ನಗರದಲ್ಲಿ 4,555 ಮಂದಿ ಸೋಂಕಿತರಾಗಿದ್ದರು. ಬಳಿಕ ಲಾಕ್‌ ಡೌನ್ ಸಡಿಲಿಸಿ, ನಿರ್ಬಂಧಗಳನ್ನು ತೆಗೆದ ಬಳಿಕ ಸೋಂಕಿತ ಸಂಖ್ಯೆ ಏರುಗತಿ ಪಡೆದುಕೊಂಡಿತು. ಆ.21ರಂದು ನಗರದಲ್ಲಿ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟಿತ್ತು.

ಮುಂದಿನ 47 ಸಾವಿರ ಪ್ರಕರಣಗಳು 16 ದಿನಗಳಲ್ಲಿ ವರದಿಯಾಗಿವೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 2,973 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈ ತಿಂಗಳ ಆರು ದಿನಗಳ ಅವಧಿಯಲ್ಲಿ 20,245 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸದ್ಯ ನಗರದಲ್ಲಿ ಸೋಂಕು ದೃಢ ಪ್ರಮಾಣ ಶೇ 14.48ರಷ್ಟಿದೆ. ಕೊರೊನಾ ಸೋಂಕಿತರಲ್ಲಿ ಮತ್ತೆ 38 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಒಟ್ಟು ಸಂಖ್ಯೆ 2,163ಕ್ಕೆ ಏರಿಕೆಯಾಗಿದೆ.

4,540 ಮಂದಿ ಗುಣಮುಖ: ಕೊರೊನಾ ಸೋಂಕಿತರಲ್ಲಿ 4,540 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಈವರೆಗೆ ಒಂದು ದಿನದ ಅವಧಿಯಲ್ಲಿ ಚೇತರಿಸಿಕೊಂಡವರ ಗರಿಷ್ಠ ಸಂಖ್ಯೆ ಇವಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 1.05 ಲಕ್ಷ ತಲುಪಿದೆ. ಒಟ್ಟು ಸೋಂಕಿತರಲ್ಲಿ ಶೇ 69.13ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ.39 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಎರಡನೇ ಬಾರಿ ಸೋಂಕು

ನಗರದ 27 ವರ್ಷದ ಮಹಿಳೆಯೊಬ್ಬರಿಗೆ ಎರಡನೇ ಬಾರಿ ಕೊರೊನಾ ಸೋಂಕು ತಗುಲಿದೆ.

ಜುಲೈ ತಿಂಗಳ ಮೊದಲ ವಾರದಲ್ಲಿ ಸೋಂಕಿತರಾಗಿದ್ದ ಮಹಿಳೆ, ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾದ ಬಳಿಕ ಅವರು ಮನೆಗೆ ಹೋಗಿದ್ದರು. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಮತ್ತೆ ಜ್ವರ ಹಾಗೂ ಕೆಮ್ಮಿನ ಪ್ರಾರಂಭಿಕ ಲಕ್ಷಣ ಗಳು ಕಾಣಿಸಿಕೊಂಡವು. ಹೀಗಾಗಿ ಅವರು ಪುನಃ ಫೋರ್ಟಿಸ್‌ಗೆ ದಾಖಲಾಗಿ, ತಪಾಸಣೆಗೆ ಒಳಪಟ್ಟರು; ಎರಡನೇ ಬಾರಿ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ಕೋವಿಡ್ ಪೀಡಿತ ಮಹಿಳೆ ಮೊದಲ ಬಾರಿ ಚೇತರಿಸಿಕೊಂಡು ಮನೆಗೆ ತೆರಳುವಾಗ ಕೋವಿಡ್ ಪರೀಕ್ಷೆ ನಡೆಸಿದ್ದೆವು. ಆಗ ಅವರು ಸಂಪೂರ್ಣ ಗುಣಮುಖರಾಗಿರುವುದು ದೃಢಪಟ್ಟಿತ್ತು. ಒಂದು ತಿಂಗಳ ನಂತರ ಮತ್ತೆ ಅವರಿಗೆ ಸೋಂಕು ತಗುಲಿರುವುದು ಅಚ್ಚರಿ ಮೂಡಿಸಿದೆ. ಅವರಿಗೆ ಬೇರೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಇರಲಿಲ್ಲ. ನಗರದಲ್ಲಿ ಒಬ್ಬ ವ್ಯಕ್ತಿಗೆ ಎರಡನೇ ಬಾರಿ ಸೋಂಕು ದಾಳಿ ನಡೆಸಿದ ಮೊದಲ ಪ್ರಕರಣ ಇದಾಗಿದೆ’ ಎಂದು ಆಸ್ಪತ್ರೆಯಸಾಂಕ್ರಾಮಿಕ ರೋಗಗಳ ವಿಭಾಗದ ಡಾ.ಪ್ರತೀಕ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT