ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹರಕ್ಷಕ ದಳದ 2 ಸಾವಿರ ಸಿಬ್ಬಂದಿ ನಿಯೋಜನೆ

ಕೋವಿಡ್‌ ನಿಯಂತ್ರಣ ನಿಯಮ ಪಾಲನೆ ಮೇಲೆ ನಿಗಾ: ಬಿಬಿಎಂಪಿ ಮುಖ್ಯ ಆಯುಕ್ತ ಮಾಹಿತಿ
Last Updated 5 ಏಪ್ರಿಲ್ 2021, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸದವರಿಗೆ ನಗರದಲ್ಲಿ ಇದುವರೆಗೆ ಮಾರ್ಷಲ್‌ಗಳು ಹಾಗೂ ಪೊಲೀಸ್ ಸಿಬ್ಬಂದಿ ದಂಡ ವಿಧಿಸುತ್ತಿದ್ದರು. ಇನ್ನು ಇವರ ಜೊತೆಗೆ 2 ಸಾವಿರ ಗೃಹರಕ್ಷಕ ಸಿಬ್ಬಂದಿಯನ್ನೂ ಈ ಕಾರ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವಗುಪ್ತ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ನಗರದಲ್ಲಿ ಕೊರೊನಾ ಸೋಂಕು ದಿನೇ ದಿನೇ ಉಲ್ಭಣಗೊಳ್ಳುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಹರಡದಂತೆ ತಡೆಯಲು ಎಲ್ಲಾ ನಾಗರಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕೋರಿದರು.

‘ನಗರದಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸಾಮೂಹಿಕವಾಗಿ ಆಯೋಜಿಸಲು ಖಾಸಗಿ ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಕೈಗಾರಿಕೆಗಳ ಜೊತೆ ಈಗಾಗಲೇ ಚರ್ಚೆ ಮಾಡಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಕ್ಕೇ ತೆರಳಿ ಲಸಿಕೆ ನೀಡಲು ಮತ್ತು ಲಸಿಕಾ ಕೇಂದ್ರಗಳನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಕೋವಿಡ್ ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಆರೈಕೆಗೆ ಒಳಗಾಗಲು ವ್ಯವಸ್ಥೆ ಇಲ್ಲದಿದ್ದರೆ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬಹುದು. ಎಚ್ಎಎಲ್ ಹಾಗೂ ಹಜ್ ಭವನಗಳಲ್ಲಿ ಈಗಾಗಲೇ ಕೋವಿಡ್ ಆರೈಕೆ ಕೇಂದ್ರಗಳನ್ನು ಮತ್ತೆ ಪ್ರಾರಂಭಿಸಲಾಗಿದೆ. ಪ್ರತೀ ವಲಯಗಳಲ್ಲಿಯೂ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದರು.

‘ಖಾಸಗಿ ಆಸ್ಪತ್ರೆಗಳ ಶೇ 20 ರಷ್ಟು ಹಾಸಿಗೆ ಕೋವಿಡ್‌ಗೆ’

‘ಖಾಸಗಿ ಆಸ್ಪತ್ರೆಗಳಲ್ಲಿ ಶೇ 20 ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡಲು ಸೂಚಿಸಲಾಗಿದೆ. ಕೋವಿಡ್‌ ರೋಗಿಗಳ ಆರೈಕೆಗೆ ಮೀಸಲಿಡಬೇಕಾದ ಹಾಸಿಗೆಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಳ ಮಾಡಲು ಕ್ರಮ ವಹಿಸಲಾಗುವುದು’ ಎಂದು ಗೌರವ ಗುಪ್ತ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 10ರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಕಾಯ್ದಿರಿಸುವಂತೆ ಬಿಬಿಎಂಪಿ ಈ ಹಿಂದೆ ಸೂಚನೆ ನೀಡಿತ್ತು.

ನಗರದಲ್ಲಿ ಕೋವಿಡ್‌ ಹರಡುವಿಕೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಈ ಪ್ರಮಾಣವು ಇದೇ ರೀತಿ ಮುಂದುವರಿದರೆ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಎದುರಾಗಲಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು.

‘ಅಂತರರಾಜ್ಯ ಗಡಿಗಳಲ್ಲಿ ಕಟ್ಟೆಚ್ಚರ’

‘ಕೋವಿಡ್‌ ಸೋಂಕಿತರು ನಗರವನ್ನು ಪ್ರವೇಶಿಸದಂತೆ ತಡೆಯಲು ಅಂತರರಾಜ್ಯ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

‘ಹೊರರಾಜ್ಯಗಳಿಂದ ನಗರಕ್ಕೆ ಬರುವವರು ಕೋವಿಡ್‌ ಹೊಂದಿಲ್ಲ ಎಂಬ ಪ್ರಮಾಣಪತ್ರ ತರುವುದು ಕಡ್ಡಾಯ. ಅತ್ತಿಬೆಲೆ ಗಡಿ ತಪಾಸಣಾ ಠಾಣೆಯಲ್ಲಿ, ನಗರಕ್ಕೆ ಬರುವ ಎಲ್ಲ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಬಿರುಸು ಪಡೆದಿದೆ. ಹಾಗಾಗಿ ಇಲ್ಲಿಂದ ಅಲ್ಲಿಗೆ ಹೋಗಿ ಬರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಅಲ್ಲಿ ಸೋಂಕಿನ ಪ್ರಮಾಣವೂ ಹೆಚ್ಚು ಇದೆ. ಅಲ್ಲಿಂದ ಇಲ್ಲಿಗೆ ಸೋಂಕು ಹರಡುವುನ್ನು ತಡೆಯಲು ಅಂತರ ರಾಜ್ಯ ಗಡಿಗಳಲ್ಲಿಕಟ್ಟೆಚ್ಚರ ವಹಿಸುವುದು ಅನಿವಾರ್ಯ’ ಎಂದರು.

‘ನಮ್ಮ ರಾಜ್ಯದಲ್ಲಿ ಜಿಲ್ಲೆಗಳ ನಡುವೆ ಪ್ರಯಾಣಿಸುವವರು ಕೋವಿಡ್‌ ಹೊಂದಿರದ ಬಗ್ಗೆ ಪ್ರಮಾಣಪತ್ರ ತೋರಿಸಬೇಕಾದ ಅಗತ್ಯ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT