ಮಂಗಳವಾರ, ಸೆಪ್ಟೆಂಬರ್ 28, 2021
21 °C

ಕೋವಿಡ್: 2 ಸಾವಿರ ದಾಟಿದ ಮೃತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಮತ್ತೆ 40 ಮಂದಿ ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 2 ಸಾವಿರದ ಗಡಿ (2,005) ದಾಟಿದೆ. 

ಸದ್ಯ ನಗರದಲ್ಲಿ ಮರಣ ಪ್ರಮಾಣ ಶೇ 1.52ರಷ್ಟಿದೆ. ನಗರದಲ್ಲಿ ಜುಲೈ ಅಂತ್ಯಕ್ಕೆ 1,029 ಮಂದಿ ಮೃತಪಟ್ಟಿದ್ದರು. ಒಂದು ತಿಂಗಳಲ್ಲಿ 976 ಮಂದಿ ಸಾವಿಗೀಡಾಗಿದ್ದಾರೆ. ಹೊಸದಾಗಿ 2,967 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.32 ಲಕ್ಷ ದಾಟಿದೆ. ಒಂದು ತಿಂಗಳ ಅವಧಿಯಲ್ಲಿಯೇ 76,548 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 2,469 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ.

ಸದ್ಯ ಸೋಂಕು ದೃಢ ಪ್ರಮಾಣ ಶೇ 15.09ರಷ್ಟಿದೆ. ಜುಲೈ ಬಳಿಕ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದ್ದು, ಕೆಲ ದಿನಗಳಿಂದ ಪ್ರತಿನಿತ್ಯ ಸರಾಸರಿ 25 ಸಾವಿರ ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ನಡೆಸಲಾದ ಒಟ್ಟು ಪರೀಕ್ಷೆ 9 ಲಕ್ಷದ ಗಡಿ ಸಮೀಪಿಸಿದೆ. 

38 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಪೀಡಿತರಲ್ಲಿ 1,137 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 91 ಸಾವಿರ ದಾಟಿದೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸದ್ಯ 284 ರೋಗಿಗಳು ಐಸಿಯುವಿನಲ್ಲಿ ಇದ್ದಾರೆ. 

ಸರಾಸರಿ 8 ಮಂದಿ ಸಂಪರ್ಕಿತರು ಗುರುತು

ಕಳೆದ 7 ದಿನಗಳಲ್ಲಿ ವರದಿಯಾದ 10,264 ಪ್ರಕರಣಗಳಲ್ಲಿ 37,226 ಮಂದಿ ನೇರ ಸಂಪರ್ಕಿತರು ಹಾಗೂ 40,056 ಮಂದಿ ಪರೋಕ್ಷ ಸಂಪರ್ಕಿತರನ್ನು ಗುರುತಿಸಲಾಗಿದೆ. ಇದರಿಂದಾಗಿ ಕೋವಿಡ್ ಪೀಡಿತ ವ್ಯಕ್ತಿಯೊಂದಿಗೆ ಸರಾಸರಿ 8.1 ಮಂದಿ ಸಂಪರ್ಕ ಹೊಂದಿದ್ದಾರೆ ಎನ್ನುವುದು ಕರ್ನಾಟಕ ರಾಜ್ಯ ಕೋವಿಡ್‌ ವಾರ್‌ ರೂಮ್ ವರದಿಯಿಂದ ತಿಳಿದುಬಂದಿದೆ.

ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 43 ಪ್ರಯೋಗಾಲಯಗಳಲ್ಲಿ 23 ಪ್ರಯೋಗಾಲಯಗಳು ದಿನವೊಂದಕ್ಕೆ ನಡೆಸಬೇಕಾದ ನಿಗದಿತ ಪರೀಕ್ಷೆಗಳ ಗುರಿ ತಲುಪುವಲ್ಲಿ ವಿಫಲವಾಗುತ್ತಿವೆ. ಉಳಿದ ಪ್ರಯೋಗಾಲಯಗಳು ನಿಗದಿತ ಗುರಿಗಿಂತ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುತ್ತಿರುವ ಪರಿಣಾಮ ಈ ಕೊರತೆ ಸರಿದೂಗಿದೆ.

12,260 ಆರೋಗ್ಯ ಕಾರ್ಯಕರ್ತರಿಗೆ ಸೋಂಕು

ರಾಜ್ಯದಲ್ಲಿ 12,260 ಆರೋಗ್ಯ ಕಾರ್ಯಕರ್ತರು (ಆ.25ರವರೆಗೆ) ಸೋಂಕಿತರಾಗಿದ್ದು, ಅವರಲ್ಲಿ 46 ಮಂದಿ ಮೃತಪಟ್ಟಿದ್ದಾರೆ ಎನ್ನುವುದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಖಚಿತಪಡಿಸಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಸೋಂಕಿತರಾಗಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸೋಂಕಿತರಾದವರಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಸೇರಿದ್ದಾರೆ.

1,07,100 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಶೇ 11ರಷ್ಟು ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ ಕಿಟ್) ತೆಗೆಯುವಾಗ, ರೋಗಿಗಳ ಸಂಪರ್ಕ, ಗಂಟಲ ದ್ರವ ಸಂಗ್ರಹ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಆರೋಗ್ಯ ಕಾರ್ಯಕರ್ತರು ಸೋಂಕಿತರಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ.

‘ಆಸ್ಪತ್ರೆಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿಗೆ ತರಬೇತಿಗಳನ್ನೂ ನೀಡಲಾಗುತ್ತಿದೆ. ಅವರಿಗೆ ಆಗಾಗ ಕೋವಿಡ್ ಪರೀಕ್ಷೆ ನಡೆಸಲು ತ್ವರಿತ ಪ್ರತಿಕಾಯ ಕಿಟ್‌ಗಳನ್ನು ನೀಡಲಾಗಿದೆ. ಕೋವಿಡ್ ಸೇವೆಯಲ್ಲಿರುವವರನ್ನು ನಿಗದಿತ ಅವಧಿಯ ಬಳಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು