ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣಕ್ಕಾಗಿ ನಿಗಾ ಇಡಲು 54 ತಂಡ: ಬಿಬಿಎಂಪಿ ಸಿದ್ಧತೆ

ಲಾಕ್‌ಡೌನ್‌ ಮತ್ತಷ್ಟು ಸಡಿಲಗೊಳಿಸಲು ಸಿದ್ಧತೆ * ಬಿಬಿಎಂಪಿ–ಪೊಲೀಸ್‌ ಇಲಾಖೆ ಜಂಟಿ ಸಭೆ
Last Updated 3 ಜುಲೈ 2021, 13:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಕೋವಿಡ್‌ ಹರಡುವಿಕೆ ನಿಯಂತ್ರಿಸಲು ಹೇರಲಾದ ಲಾಕ್‌ಡೌನ್‌ ಅನ್ನು ಮತ್ತಷ್ಟು ಸಡಿಲಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಲಾಕ್‌ಡೌನ್ ಮತ್ತಷ್ಟು ಸಡಿಲಗೊಳಿಸಿದ ಬಳಿಕವೂ ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಶನಿವಾರ ಸಮಾಲೋಚನೆ ನಡೆಸಿದರು.

54 ತಂಡಗಳ ರಚನೆ: ಸಾರ್ವಜನಿಕ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಮೇಲೆ ನಿಗಾ ಇಡಲು 54 ತಂಡಗಳನ್ನು ಬಿಬಿಎಂಪಿ ರಚಿಸಿದೆ. ಪ್ರತಿ ತಂಡದಲ್ಲಿ ನಾಲ್ವರು ಮಾರ್ಷಲ್‌ಗಳಿರುತ್ತಾರೆ. ಜನದಟ್ಟಣೆಯ ಸ್ಥಳಗಳಲ್ಲಿ ಅವರು ಜನ ಕೋವಿಡ್‌ ಮಾರ್ಗಸೂಚಿ ಪಾಲಿಸುವಂತೆ ಮಾಡಲು ಕ್ರಮಕೈಗೊಳ್ಳಲಿದ್ದಾರೆ.

ಕೋವಿಡ್ ನಿಯಮಗಳ ಉಲ್ಲಂಘನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಸ್ಥಳಗಳಲ್ಲಿ ಆಯಾ ವಲಯದ ಹಿರಿಯ ಅಧಿಕಾರಿಗಳು, ಆರೋಗ್ಯಾಧಿಕಾರಿ, ಆರೋಗ್ಯವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಲಿದೆ. ಜನಜಂಗುಳಿಗೆ ಕಾರಣವಾಗುವ ಸ್ಥಳಗಳ ಪರಿಶೀಲನೆ ನಡೆಸಲಿದೆ. ಅಗತ್ಯಬಿದ್ದರೆ, ಮಳಿಗೆಗಳಿಗೆ ನೋಟೀಸ್ ನೀಡುವುದಲ್ಲದೇ ಬೀಗಮುದ್ರೆಯನ್ನೂ ಹಾಕಲಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ತಿಂಗಳ ಹಿಂದೆ ನಿತ್ಯ 20 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ 600 ರಿಂದ 700 ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ನಗರದಲ್ಲಿ ಎಲ್ಲಾ ವಹಿವಾಟುಗಳಿಗೆ ವಿನಾಯ್ತಿ ಸಿಗಲಿದೆ. ಬಳಿಕ ಕೋವಿಡ್‌ ನಿಯಂತ್ರಿಸಲು ಪಾಲಿಕೆ ಮೇಲೆ ಹೆಚ್ಚು ಜವಾಬ್ದಾರಿ ಬರುತ್ತದೆ. ಎಲ್ಲಾ ನಾಗರಿಕರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ನಾವು ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯ. ಆಗ ಮಾತ್ರ ನಗರದ ಎಲ್ಲ ಜನರೂ ಸುರಕ್ಷಿತವಾಗಿರಬಹುದು’ ಎಂದರು.

‘ನಗರದ ಸಾರ್ವಜನಿಕ ಸ್ಥಳ, ವಹಿವಾಟು ನಡೆಯುವ ಸ್ಥಳ, ಮದುವೆ ಸಮಾರಂಭ, ಮಾರುಕಟ್ಟೆ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಮಾರ್ಷಲ್‌ಗಳು, ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳ ಪಾಲನೆ ಬಗ್ಗೆ ನಾಗರಿಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಕೋವಿಡ್ ನಿಯಂತ್ರಣ ನಿಯಮಗಳು ಪಾಲಿಸದವರಿಗೆ ದಂಡ ವಿಧಿಸಬೇಕು’ ಎಂದು ಸೂಚಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಗೌರವ್‌ ಗುಪ್ತ, ‘ಸರ್ಕಾರ ಲಾಕ್‌ಡೌನ್‌ ಅನ್ನು ಇನ್ನಷ್ಟು ಸಡಿಲಗೊಳಿಸಲಿದೆ. ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಕೋವಿಡ್‌ ನಿಯಂತ್ರಣಕ್ಕಾಗಿ ತಳಮಟ್ಟದಲ್ಲಿ ಪರಸ್ಪರ ಸಮನ್ವಯದಿಂದ ಕೆಲಸ ಮಾಡಲಿದ್ದಾರೆ’ ಎಂದರು.

ಬಿಬಿಎಂಪಿಯ ವಿಶೇಷ ಆಯುಕ್ತ (ಕಸ ವಿಲೇವಾರಿ) ಹರೀಶ್ ಕುಮಾರ್, ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಬಿಬಿಎಂಪಿ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್ ಖಾನ್ ವಿವಿಧ ವಲಯಗಳ ಜಂಟಿ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್‌ಗಳು, ಮಾರ್ಷಲ್‌ಗಳ ಮೇಲ್ವಿಚಾರಕರು, ಮಾರ್ಷಲ್‌ಗಳು ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದರು.

‘ಕೋವಿಡ್‌ ಯೋಧರ ಕರ್ತವ್ಯಕ್ಕೆ ಅಡ್ಡಿ– ಕಠಿಣ ಕ್ರಮ’
‘ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲನೆ ಬಗ್ಗೆ ನಿಗಾ ಇಡುವ ಮಾರ್ಷಲ್‌ಗಳು ಮತ್ತು ಇತರ ಕೋವಿಡ್‌ ಯೋಧರ ಮೇಲೆ ಜನ ಹಲ್ಲೆ ಮಾಡಿದರೆ, ವಾಗ್ವಾದ ನಡೆಸಿದರೆ ಅಥವಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದ್ದೇವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕಮಲಪಂತ್‌ ಎಚ್ಚರಿಸಿದರು.

‘ಕೋವಿಡ್‌ ವಿರುದ್ಧದ ಸಮರದಲ್ಲಿ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಒಟ್ಟಾಗಿ ಕಾರ್ಯನಿರ್ವಹಿಸಿದೆ. ಇದನ್ನು ಮುಂದುವರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಬಿಬಿಎಂಪಿ ಕೈಗೊಳ್ಳುವ ನಿರ್ಧಾರಗಳ ಜಾರಿಗೆ ನಾವು ನೆರವಾಗಲಿದ್ದೇವೆ. ಮಾರ್ಷಲ್‌ಗಳಿಗೆ ಪೊಲೀಸ್ ಸಿಬ್ಬಂದಿಯು ಭದ್ರತೆ ಕಲ್ಪಿಸಲಿದ್ದಾರೆ’ ಎಂದರು.

‘ಮದುವೆ ಮತ್ತಿತರ ಸಮಾರಂಭಗಳು, ಮಾರುಕಟ್ಟೆಯಂತಹ ಪ್ರದೇಶಗಳೂ ಸೇರಿ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ. ನಿಯಮ ಉಲ್ಲಂಘನೆ ಅವಕಾಶ ನೀಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಕಾನೂನು ಜಾರಿಗೊಳಿಸುವಾಗ ನಾಗರಿಕರ ಜೊತೆ ವಾಗ್ವಾದ ನಡೆಸದೆ ತಾಳ್ಮೆಯಿಂದ ವರ್ತಿಸಬೇಕು ಎಂದು ಅವರು ಸಿಬ್ಬಂದಿಗೂ ಕಿವಿಮಾತು ಹೇಳಿದರು.

‘ಪಾದಚಾರಿ ಮಾರ್ಗ– ಒತ್ತುವರಿ ತೆರವು’
‘ಬಿಬಿಎಂಪಿ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅವಕಾಶವಿರಬೇಕು. ಆದರೆ, ನಗರದ ಬಹುತೇಕ ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ತಳ್ಳುಗಾಡಿ ವ್ಯಾಪಾರ ಫುಟ್‌ಪಾತ್‌ಗಳಲ್ಲೇ ನಡೆಯುತ್ತಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಾಶಿ ಹಾಕಲಾಗುತ್ತದೆ. ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿದೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ಕಮಲಪಂತ್‌, ‘ಪೊಲೀಸ್ ಸಿಬ್ಬಂದಿ ಹಲವೆಡೆ ಸ್ವಯಂಪ್ರೇರಿತವಾಗಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕಾರ್ಯವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲು ಪಾಲಿಕೆಗೆ ಪೊಲೀಸ್ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT