ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ವರ’ ಹೆಚ್ಚಿಸುವ ಚಿಕಿತ್ಸಾಲಯಗಳು; ಪರೀಕ್ಷೆ ನಡೆಸಿ ವಾರವಾದರೂ ಬರದ ವರದಿ

ನಿತ್ಯ ಸರಾಸರಿ ಎರಡು ಸಾವಿರ ಮಂದಿಗೆ ತಪಾಸಣೆ
Last Updated 31 ಜುಲೈ 2020, 20:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರನ್ನು ಬೇಗ ಪತ್ತೆ ಮಾಡುವ ಉದ್ದೇಶದಿಂದ ಜ್ವರ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿ, ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ದಿನವೊಂದಕ್ಕೆ10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಆದರೆ, 24 ಗಂಟೆಗಳಲ್ಲಿ ವರದಿ ನೀಡಬೇಕಾದ ಪ್ರಯೋಗಾಲಯಗಳು ವಿಳಂಬ ಮಾಡುತ್ತಿರುವುದು ಸೋಂಕು ಶಂಕಿತರ ಆತಂಕಕ್ಕೆ ಕಾರಣವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವಜ್ವರ ಚಿಕಿತ್ಸಾಲಯಗಳಲ್ಲಿ ದಿನವೊಂದಕ್ಕೆ ಸರಾಸರಿ 2 ಸಾವಿರ ಮಂದಿಯನ್ನು ತಪಾಸಣೆ ಮಾಡಲಾಗುತ್ತಿದೆ. ಜ್ವರ, ಕೆಮ್ಮು ಸೇರಿದಂತೆ ವಿವಿಧ ಸೋಂಕಿನ ಲಕ್ಷಣಗಳು ಇದ್ದಲ್ಲಿ ವ್ಯಕ್ತಿಯ ಗಂಟಲ ದ್ರವ ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ರವಾನಿಸಲಾಗುತ್ತದೆ. ಮಾದರಿಗಳನ್ನು ಪರೀಕ್ಷಿಸುವ ಪ್ರಯೋಗಾಲಯಗಳು ಐಸಿಎಂಆರ್‌ ಪೋರ್ಟಲ್‌ನಲ್ಲಿ ವಿವರವನ್ನು ನಮೂದಿಸಿ, ವರದಿಯನ್ನು ನಿಗದಿತ ಚಿಕಿತ್ಸಾಲಯಗಳಿಗೆ ಹಾಗೂ ವ್ಯಕ್ತಿಗೆ ಕಳುಹಿಸುತ್ತವೆ. ಸರ್ಕಾರದ ಆದೇಶದ ಪ್ರಕಾರ ಆರ್‌ಟಿ‌ಪಿಸಿಆರ್ ಪರೀಕ್ಷೆಯಾದಲ್ಲಿ ಈ ಪ್ರಕ್ರಿಯೆ 24 ಗಂಟೆಯಿಂದ 72 ಗಂಟೆಯೊಳಗೆ ಪೂರ್ಣಗೊಳ್ಳಬೇಕು.
ಆದರೆ, ನಿಗದಿತ ಅವಧಿಯೊಳಗೆ ವರದಿ ಬಾರದ ಪರಿಣಾಮ ಪರೀಕ್ಷೆ ಮಾಡಿಸಿಕೊಂಡವರು ಹಲವರ ಸಂಪರ್ಕಕ್ಕೆ ಒಳಪಡುತ್ತಿದ್ದಾರೆ.

ಸರ್ಕಾರ ರೂಪಿಸಿರುವ ನಿಯಮದ ಪ್ರಕಾರಸಂಶಯಾಸ್ಪದವಾಗಿ ಮೃತಪಟ್ಟವರು, ಸೋಂಕಿತರೊಂದಿಗೆ ನೇರ ಹಾಗೂ
ಪರೋಕ್ಷ ಸಂಪರ್ಕ ಹೊಂದಿರುವವರು ಸೇರಿದಂತೆ ‘ಎ’ ವರ್ಗದಲ್ಲಿ ಬರುವವರ ಮಾದರಿಯನ್ನು 12 ಗಂಟೆಗಳಲ್ಲಿ ಪರೀಕ್ಷೆ ನಡೆಸಬೇಕು.ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿರುವವರು ‘ಬಿ’ ವರ್ಗದಡಿ ಬರಲಿದ್ದು, ಅವರ ಮಾದರಿಗಳನ್ನು 24 ಗಂಟೆಗಳಲ್ಲಿ ಪರೀಕ್ಷೆ ನಡೆಸಬೇಕು. ಲಕ್ಷಣಗಳು ಗೋಚರಿಸದ ‘ಸಿ’ ವರ್ಗದವರ ಮಾದರಿಗಳನ್ನು 24ರಿಂದ 48 ಗಂಟೆಗಳೊಳಗೆ ಪರೀಕ್ಷೆ ಮಾಡಬೇಕು. ಆದರೆ, ಸದ್ಯ ಈ ನಿಯಮಗಳು ಪಾಲನೆಯಾಗುತ್ತಿಲ್ಲ.

ಆ್ಯಂಟಿಜೆನ್ ಕಿಟ್‌ ಬಂದರೂ ವಿಳಂಬ:ನಗರದಲ್ಲಿ ತ್ವರಿತವಾಗಿ ಸೋಂಕು ಪರೀಕ್ಷೆ ನಡೆಸಲು ಸರ್ಕಾರ ಆರಂಭದಲ್ಲಿ ಬಿಬಿಎಂಪಿಗೆ 50 ಸಾವಿರ ಆ್ಯಂಟಿಜೆನ್‌ ಕಿಟ್‌ ನೀಡಿತ್ತು. ಮತ್ತೆ ಈಗ 1 ಲಕ್ಷ ಕಿಟ್‌ಗಳನ್ನು ನೀಡಲಾಗಿದೆ. ಸದ್ಯ ನಗರದಲ್ಲಿ 7 ಸಾವಿರದಿಂದ 8 ಸಾವಿರ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಗೆ ಒಳಗಾದವರಿಗೆ ಕೆಲವೇ ನಿಮಿಷಗಳಲ್ಲಿ ಫಲಿತಾಂಶ ತಿಳಿಯಲಿದೆ. ಇದರಿಂದಾಗಿ ಪ್ರಯೋಗಾಲಯಗಳ ಮೇಲಿನ ಹೊರೆ ಕಡಿಮೆ ಆಗಿದೆ. ಇಷ್ಟಾಗಿಯೂ ಆರ್‌ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ಮಾತ್ರ ನಿಗದಿತ ಸಮಯದೊಳಗೆ ಬರುತ್ತಿಲ್ಲ.

‘ಶಂಕಿತರ ಮಾದರಿಗಳನ್ನು ಸಂಗ್ರಹಿಸಿ, ಕಳುಹಿಸುವುದು ಮಾತ್ರ ನಮ್ಮ ಕೆಲಸ. ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ವರದಿಗಳು ಸ್ವಲ್ಪ ವಿಳಂಬವಾಗುತ್ತಿರಬಹುದು. ವರದಿ ಬರುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ಸೂಚಿಸುತ್ತಿದ್ದೇವೆ’ ಎಂದು ಜ್ವರ ಚಿಕಿತ್ಸಾಲಯದ ವೈದ್ಯರೊಬ್ಬರು ತಿಳಿಸಿದರು.

ಈ ಬಗ್ಗೆಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

ಜೈವಿಕ ಉದ್ಯಾನ; ಭಾನುವಾರ ಪ್ರವೇಶಮುಕ್ತ: ಬನ್ನೇರುಘಟ್ಟ ಜೈವಿಕ ಉದ್ಯಾನವು ಮೊದಲಿನಂತೆ ಭಾನುವಾರ ಸಹ ವೀಕ್ಷಣೆಗೆ ಮುಕ್ತವಾಗಿದೆ. ಜುಲೈನಲ್ಲಿ ಪ್ರತಿ ಭಾನುವಾರ ಲಾಕ್‌ಡೌನ್‌ ಘೋಷಿಸಿದ್ದರಿಂದ, ಉದ್ಯಾನಕ್ಕೆ ಭಾನುವಾರ ರಜೆ ಘೋಷಿಸಲಾಗಿತ್ತು. ಮಂಗಳವಾರದಂದು ವೀಕ್ಷಕರ ವೀಕ್ಷಣೆಗೆ ತೆರೆಯಲಾಗಿತ್ತು.

ಅಂಕಿ–ಅಂಶಗಳು

149 -ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಜ್ವರ ಚಿಕಿತ್ಸಾಲಯಗಳು

44,062 -ಚಿಕಿತ್ಸಾಲಯಗಳಲ್ಲಿ ಈವರೆಗೆ ತಪಾಸಣೆ ಮಾಡಿಸಿಕೊಂಡವರು

7,567-ಪ್ರತಿ 10 ಲಕ್ಷ ಮಂದಿಗೆ ನಗರದಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗಳು

***

ಪರೀಕ್ಷೆಗೆ ಒಳಪಟ್ಟವರು ಏನು ಮಾಡಬೇಕು?

*ಪರೀಕ್ಷೆ ವರದಿ ಬರುವ ವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು

*ಕುಟುಂಬದ ಸದಸ್ಯರೊಂದಿಗೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು

* ಯಾವಾಗಲೂ ಮುಖಗವಸು ಧರಿಸಿರಬೇಕು

*ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ದೂರವಾಣಿ ಮೂಲಕ ಅಥವಾ ವೈಯಕ್ತಿಕವಾಗಿ ತಿಳಿಸಲಾಗುತ್ತದೆ

* ಕೋವಿಡ್ ಸೋಂಕು ದೃಢಪಟ್ಟಲ್ಲಿ ಬೇರೆ ಕಾಯಿಲೆಗಳಿಲ್ಲದ 50 ವರ್ಷದೊಳಗಿನವರು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT