ಗುರುವಾರ , ಮಾರ್ಚ್ 4, 2021
24 °C

ಬೆಂಗಳೂರು: ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 10 ಜನರಿಗೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ಒಂದೇ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 10 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಎಸ್‌ಜೆಆರ್‌ ವಾಟರ್ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ 9 ಬ್ಲಾಕ್‌ಗಳಿದ್ದು, 1,500 ಜನ ವಾಸವಿದ್ದಾರೆ. 6 ಬ್ಲಾಕ್‌ಗಳಲ್ಲಿ ಈ ಪ್ರಕರಣಗಳು ವರದಿಯಾಗಿವೆ. ಉಳಿದ 3 ಬ್ಲಾಕ್‌ಗಳು ಸುಮಾರು 200 ಮೀಟರ್‌ಗಳಷ್ಟು ದೂರದಲ್ಲಿವೆ. ಅಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಆರು ಬ್ಲಾಕ್‌ಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಬಿಬಿಎಂಪಿ 9 ತಂಡಗಳನ್ನು ರಚನೆ ಮಾಡಿದ್ದು, 500 ಮಂದಿಯ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗಳವಾರ ಫಲಿತಾಂಶದ ನಿರೀಕ್ಷೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್ ಆವರಣ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದೆ. ನಾಲ್ವರು ವೈದ್ಯರೊಂದಿಗೆ ವೈದ್ಯಕೀಯ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.

‘ಕಳೆದ ಸೋಮವಾರದಿಂದ ಒಂದೊಂದೇ ಪ್ರಕರಣ ದಾಖಲಾಗುತ್ತಿತ್ತು. ಭಾನುವಾರ ಒಂದೇ ದಿನ ನಾಲ್ಕು ಪ್ರಕರಣ ದಾಖಲಾಗಿವೆ. ಯಾರೊಬ್ಬರಿಗೂ ಪ್ರಯಾಣದ ಇತಿಹಾಸ ಇಲ್ಲ. ಸಂಪರ್ಕಿತರ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಮಹದೇವಪುರ ವಲಯ ಆರೋಗ್ಯಾಧಿಕಾರಿ ಡಾ.ಸುರೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಒಂದು ತಿಂಗಳಲ್ಲಿ ಒಂದೇ ಕಡೆ ಕೋವಿಡ್ ಪ್ರಕರಣ ಹೆಚ್ಚಾದ ನಗರದ 3ನೇ ಕ್ಲಸ್ಟರ್ ಇದಾಗಿದೆ. ಸೋಂಕಿತರಲ್ಲಿ ಕೇರಳ ಅಥವಾ ಮಹಾರಾಷ್ಟ್ರ ರಾಜ್ಯಗಳಿಗೆ ಪ್ರವಾಸ ಮಾಡಿರುವ ಇತಿಹಾಸ ಇಲ್ಲದಿರುವುದು ಅಧಿಕಾರಿಗಳಲ್ಲಿ ಕೊಂಚ ಸಮಾಧಾನ ತಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು