ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 2ನೇ ಅಲೆ: ಸಾವಿನ ದರ ಶೇ 5ಕ್ಕೆ ಹೆಚ್ಚಳ

ಸಾವಿನ ದರ ಕಡಿತಗೊಳಿಸಲು ಕೈ ಹಿಡಿಯದ ‘ಚಿಕಿತ್ಸೆ ನಿರ್ಧಾರ ಕೇಂದ್ರಗಳು * ಒಟ್ಟು ಸಾವಿನಲ್ಲಿ ಮೇ ತಿಂಗಳ ಪ್ರಮಾಣ ಶೇ 50ರಷ್ಟು ಸಾವು
Last Updated 1 ಜೂನ್ 2021, 21:58 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡವರಲ್ಲಿ ಸೊಂಕು ಪತ್ತೆ ಪ್ರಮಾಣವನ್ನು ಶತಾಯ–ಗತಾಯ ಶೇ 5ಕ್ಕೆ ಇಳಿಸಬೇಕು ಎಂದು ಬಿಬಿಎಂಪಿ ಹರಸಾಹಸಪಡುತ್ತಿದೆ. ಸೋಂಕು ಪತ್ತೆ ದರದವನ್ನು ಕಳೆದ ಕೆಲವು ವಾರಗಳಲ್ಲಿ ಶೇ 9.35ಕ್ಕೆ ಇಳಿಸುವಲ್ಲಿ ತಕ್ಕಮಟ್ಟಿನ ಯಶಸ್ಸನ್ನೂ ಗಳಿಸಿದೆ. ಆದರೆ, ಈ ಯಶಸ್ಸಿನಿಂದ ಖುಷಿ ಪಡುವ ಸ್ಥಿತಿಯಲ್ಲಿ ಅಧಿಕಾರಿಗಳಿಲ್ಲ. ಏಕೆಂದರೆ, ಕೊರೋನಾ ಎರಡನೇ ಅಲೆಯಲ್ಲಿ ಈ ಸೋಂಕಿನಿಂದ ಸಾಯುವವರ ದರ ಶೇ 5ಕ್ಕೆ ಏರಿಕೆ ಕಂಡಿದೆ.

ಬಿಬಿಎಂಪಿ ಅಂಕಿ–ಅಂಶಗಳ ಪ್ರಕಾರ 2021ರ ಏಪ್ರಿಲ್‌ ಆರಂಭದಲ್ಲಿ ಶೇ 0.37ರಷ್ಟಿದ್ದ ಕೋವಿಡ್‌ ಪೀಡಿತರ ಸಾವಿನ ದರಏಪ್ರಿಲ್ ಅಂತ್ಯಕ್ಕೆ ಶೇ 0.56ರಷ್ಟಿತ್ತು. ಮಂಗಳವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಸಾವಿನ ದರ ಶೇ 5ಕ್ಕೆ ತಲುಪಿದೆ. ನಗರದಲ್ಲಿ ಇದುವರೆಗೆ ಒಟ್ಟು 13,623 ಮಂದಿ ಕೋವಿಡ್‌ನಿಂದ ಅಸುನೀಗಿದ್ದಾರೆ. ಅವರಲ್ಲಿ ಮೇ ತಿಂಗಳಿನಲ್ಲಿ ಮೃತಪಟ್ಟವರ ಸಂಖ್ಯೆ 6,978. ಅಂದರೆ ನಗರದಲ್ಲಿ ಇದುವರೆಗೆ ಕೋವಿಡ್‌ನಿಂದ ಸತ್ತವರಲ್ಲಿ ಶೇ 51ರಷ್ಟು ಮಂದಿ ಮೇ ತಿಂಗಳೊಂದರಲ್ಲೇ ಕೊನೆಯುಸಿರೆಳೆದಿದ್ದಾರೆ.

ಕೈ ಹಿಡಿಯದ ಸರದಿ ವ್ಯವಸ್ಥೆ: ‘ಹಾಸಿಗೆ ಹಂಚಿಕೆಗೆ ಸರದಿ ವ್ಯವಸ್ಥೆ ಜಾರಿಗೊಳಿಸುವ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದಿದ್ದೇವೆ’ ಎಂದು ಹಾಸಿಗೆ ಹಂಚಿಕೆಯ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿಕೊಂಡಿದ್ದಾರೆ. ಆದರೆ, ಈ ಸುಧಾರಣಾ ಕ್ರಮಗಳ ಬಳಿಕವೂ ಸಾವಿನ ಪ್ರಮಾಣ ತಗ್ಗಿಲ್ಲ. ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲು ಶುರುವಾಗಿ ಮೂರು ವಾರಗಳು ಉರುಳಿವೆ. ಆದರೂ ಸಾವಿನ ಸಂಖ್ಯೆ ಇಳಿಯುತ್ತಿಲ್ಲ.

ಈಗಲೂ ಐಸಿಯು ಹಾಸಿಗೆ ಒದಗಿಸುವಂತೆ ಕೋರಿ ನೂರಕ್ಕೂ ಅಧಿಕ ಕರೆಗಳು ಬರುತ್ತಿವೆ. ಚಿಕಿತ್ಸೆ ನಿರ್ಧಾರ ಕೇಂದ್ರಗಳಿಗೆ ಬರುವವರಿಗೆ ವೆಂಟಿಲೇಟರ್‌ ವ್ಯವಸ್ಥೆಯ ಹಾಸಿಗೆ ಅಗತ್ಯ ಇದ್ದರೂ ಅದನ್ನು ಒದಗಿಸಲು ಸಾಧ್ಯವಾಗದ ಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಮಂಗಳವಾರದ ಅಂಕಿ ಅಂಶಗಳ ಪ್ರಕಾರ ಇಡೀ ನಗರದಲ್ಲಿ ಅಷ್ಟೂ ಆಸ್ಪತ್ರೆಗಳ ಐಸಿಯು ಘಟಕಗಳಲ್ಲಿ ವೆಂಟಿಲೇಟರ್‌ ಸೌಲಭ್ಯ ಇರುವ 20 ಹಾಸಿಗೆಗಳು ಮಾತ್ರ ಲಭ್ಯ ಇದ್ದವು.

‘ಈಗಲೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಅನೇಕರಲ್ಲಿ ದಿಢೀರ್ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತಹವರಿಗೆ ತಕ್ಷಣ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ವೆಂಟಿಲೇಟರ್‌ ಸೌಲಭ್ಯ ಹಾಸಿಗೆಗಳ ಅಗತ್ಯವಿದೆ. ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳ ಕೊರತೆ ಈಗಲೂ ಮುಂದುವರಿದಿದೆ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಒಮ್ಮೆ ಐಸಿಯುಗೆ ದಾಖಲಾದವರು ಪೂರ್ತಿ ಗುಣಮುಖರಾಗಲು ಕನಿಷ್ಠ ಪಕ್ಷ 10 ದಿನಗಳಾದರೂ ಬೇಕು. ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿಸದೇ ಹೋದರೆ, ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡರೂ ಸಾವಿನ ಪ್ರಮಾಣ ತಗ್ಗುವುದಿಲ್ಲ’ ಎಂದು ತಿಳಿಸಿದರು.

ಕೋವಿಡ್‌: ಸಾವಿರ ದರ, ಸೋಂಕು ಪತ್ತೆ ದರಗಳ ವಿವರ

ದಿನಾಂಕ; ಸೋಂಕು ಪತ್ತೆ; ಸೋಂಕು ಪತ್ತೆ ದರ (ಶೇ) ; ಸಾವಿನ ದರ (ಶೇ)

ಮಾ.30–ಏ 05; 20,844; 5.04; 0.37

ಏ.06–ಏ.12; 38,844; 7.51; 0.56

ಏ. 13– ಏ.19; 76,166; 12.13; 0.53

ಏ. 20– ಏ.26; 1,11,716; 18.22; 0.59

ಏ.27– ಮೇ 03; 1,52,523; 35.13; 0.55

ಮೇ 04– ಮೇ 10; 1,43,245; 38.53; 1.29

ಮೇ 11– ಮೇ 17; 89,553; 30.65; 1.49

ಮೇ 18– ಮೇ 24; 58,424; 17.57; 3.16

ಮೇ 25– ಮೇ 31; 35,171; 9.35; 5.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT