ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆಗೆ ಮತ್ತೆ ಬೇಡಿಕೆ

ಕೋವಿನ್ ಪೋರ್ಟಲ್ ಮೂಲಕ ಮುನ್ನೆಚ್ಚರಿಕೆ ಡೋಸ್ ಕಾಯ್ದಿರಿಸುತ್ತಿರುವ ಜನರು
Last Updated 23 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರವು ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿ ಮಾಡುತ್ತಿರುವ ಬೆನ್ನಲ್ಲಿಯೇ ನಗರದಲ್ಲಿ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗೆ ಬೇಡಿಕೆ ಹೆಚ್ಚಲಾರಂಭಿಸಿದೆ. ಕೋವಿನ್ ಪೋರ್ಟಲ್‌ ಮೂಲಕ ಲಸಿಕೆ ಕಾಯ್ದಿರಿಸುವವರ ಸಂಖ್ಯೆ ಹೆಚ್ಚಳವಾಗಿದೆ.

ಚೀನಾ ಸೇರಿ ಕೆಲವೆಡೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇಲ್ಲಿಯೂ ರೂಪಾಂತರಿ ವೈರಾಣು ಕಾಣಿಸಿಕೊಳ್ಳುವ ಬಗ್ಗೆ ಕಳವಳ
ವ್ಯಕ್ತಪಡಿಸಿರುವ ವೈದ್ಯಕೀಯ ತಜ್ಞರು, ಮುನ್ನೆಚ್ಚರಿಕೆ ಡೋಸ್‌ಗೆ ಶಿಫಾರಸು ಮಾಡಿದ್ದಾರೆ.ಸರ್ಕಾರವೂ ಈ ಬಗ್ಗೆಮಾರ್ಗಸೂಚಿ ಹೊರಡಿಸಿದೆ. ನಗರದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯ ಕಾರಣ ಬಹುತೇಕರು ಮತ್ತೊಂದು ಡೋಸ್ ಲಸಿಕೆ ಪಡೆದಿರಲಿಲ್ಲ. ಈಗ ಮುನ್ನೆಚ್ಚರಿಕಾ ಕ್ರಮವಾಗಿ ಅವಧಿ ಮುಗಿದವರು ಲಸಿಕೆ ಪಡೆದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.

ನಗರದಲ್ಲಿ 2021ರ ಜ.16ರಿಂದ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. 2022ರ ಜ.10ರಿಂದ ಮೂರನೇ ಡೋಸ್ ವಿತರಿಸಲಾಗುತ್ತಿದೆ. ಎರಡು ಡೋಸ್ ಲಸಿಕೆ ಪಡೆದು ಆರು ತಿಂಗಳಾದವರಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುತ್ತಿದೆ. 60 ವರ್ಷಗಳು ಮೇಲ್ಪಟ್ಟವರು, 15ರಿಂದ 18 ವರ್ಷದೊಳಗಿನವರು, ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ಯೋಧರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ. 18ರಿಂದ 59 ವರ್ಷದವರಿಗೆ ಖಾಸಗಿ ಕೇಂದ್ರಗಳಲ್ಲಿ ಮಾತ್ರ ಮುನ್ನೆಚ್ಚರಿಕೆ ಡೋಸ್‌ಗಳನ್ನು ವಿತರಿಸಲಾಗುತ್ತಿದೆ.

ದರ ನಿಗದಿ: ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳನ್ನು ಲಸಿಕೆ ತಯಾರಿಕಾ ಕಂಪನಿಗಳು ₹225ಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುತ್ತಿವೆ. ಸೇವಾ ಶುಲ್ಕ ಸಹಿತ ಒಂದು ಡೋಸ್‌ ಲಸಿಕೆಗೆ ಆಸ್ಪತ್ರೆಗಳು ₹386 ಪಡೆಯುತ್ತಿವೆ. ಮುನ್ನೆಚ್ಚರಿಕೆ ಡೋಸ್‌ಗೆ ಜನರು ನಿರಾಸಕ್ತಿ ತಾಳಿದ್ದರಿಂದ ಬಹುತೇಕ ಖಾಸಗಿ ಕೇಂದ್ರಗಳಲ್ಲಿ ಲಸಿಕೆಯ ದಾಸ್ತಾನು ಹಾಗೆಯೇ ಉಳಿದಿತ್ತು. ಇದರಿಂದಾಗಿ ಲಸಿಕೆ ವ್ಯರ್ಥವಾಗುವ ಆತಂಕ ಇತ್ತು. ಈಗ ಬೇಡಿಕೆ ಬಂದಿರುವುದರಿಂದ ಲಸಿಕೆ ವ್ಯರ್ಥವಾಗುವುದು ತಪ್ಪಿದೆ.

ಪ್ರಕ್ರಿಯಾ ಆಸ್ಪತ್ರೆ, ಅಪೋಲೊ ಕ್ಲಿನಿಕ್, ನಾರಾಯಣ ಹೃದಯಾಲಯ, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಸುಗುಣಾ, ಮಣಿಪಾಲ್, ಫೋರ್ಟಿಸ್ ಸೇರಿ ಪ್ರಮುಖಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಡೋಸ್‌ ಕಾಯ್ದಿರಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕೋವಿನ್ ಪೋರ್ಟಲ್‌ನಲ್ಲಿ ಇದೇ 27ರವರೆಗೂ ಬಹುತೇಕ ಸ್ಲಾಟ್‌ಗಳು ಕಾಯ್ದಿರಿಸಲ್ಪಟ್ಟಿವೆ. ಕೆಲ ಆಸ್ಪತ್ರೆಗಳು ಸ್ಲಾಟ್‌ಗಳ ಸಂಖ್ಯೆಯನ್ನು 100ರಿಂದ 500ಕ್ಕೆ ಹೆಚ್ಚಿಸಿವೆ.ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಲಸಿಕೆಗೆ ಬೇಡಿಕೆ ಹೆಚ್ಚಳವಾಗಿದ್ದು, ಗುರುತಿಸಲಾದ ವರ್ಗದವರಿಗೆ ನೀಡಲಾಗುತ್ತಿದೆ.

****

ಕೋವಿಡ್ ಎದುರಿಸಲು ಲಸಿಕೆ ಸಹಕಾರಿ. ಈಗ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಲಸಿಕೆಯ ದಾಸ್ತಾನು ಇದೆ

-ಡಾ. ಗೋವಿಂದಯ್ಯ ಯತೀಶ್, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ (ಫನಾ) ಅಧ್ಯಕ್ಷ

****

ಅವಧಿ ಮುಗಿದರೂ ಬಹುತೇಕರು ಮುನ್ನೆಚ್ಚರಿಕೆ ಡೋಸ್ ಪಡೆದಿರಲಿಲ್ಲ. ಈಗ ಮುನ್ನೆಚ್ಚರಿಕೆ ಡೋಸ್ ಬಗ್ಗೆ ವಿಚಾರಿಸಲಾರಂಭಿಸಿದ್ದಾರೆ

-ಡಾ.ಟಿ.ಎಸ್. ರಂಗನಾಥ್, ವಿಕ್ಟೋರಿಯಾ ಆಸ್ಪತ್ರೆಯ ಲಸಿಕೆ ವಿಭಾಗದ ನೋಡಲ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT