ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿಂದರಾಜನಗರ ಕ್ಷೇತ್ರದಲ್ಲಿ ಸುಸಜ್ಜಿತ ಕೋವಿಡ್ ಆಸ್ಪತ್ರೆ: ಟೆಲಿ ಐಸಿಯು ಸೌಲಭ್ಯ

ಗೋವಿಂದರಾಜನಗರ ಕ್ಷೇತ್ರದಲ್ಲಿ ಸುಸಜ್ಜಿತ ಕೋವಿಡ್ ಆಸ್ಪತ್ರ
Last Updated 8 ಜೂನ್ 2021, 17:50 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಸಜ್ಜಿತ ಕೋವಿಡ್ ಆಸ್ಪತ್ರೆಯೊಂದು ನಿರ್ಮಾಣವಾಗುತ್ತಿದ್ದು, ಸದ್ಯದಲ್ಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಟೆಲಿ ಐಸಿಯು ಸೌಲಭ್ಯವನ್ನು ಈ ಸರ್ಕಾರಿ ಆಸ್ಪತ್ರೆ ಒಳಗೊಳ್ಳುತ್ತಿದೆ.

ಬಡವರಿಗೆ ಉಚಿತವಾಗಿ ಡಯಾಲಿಸ್‌ ಸೌಲಭ್ಯ ದೊರಕಿಸಬೇಕು ಎಂಬ ಕಾರಣಕ್ಕೆ ಕ್ಷೇತ್ರದ ಮಾರುತಿ ಮಂದಿ ವಾರ್ಡ್‌ನಲ್ಲಿ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಸೌಲಭ್ಯದ ಆಸ್ಪತ್ರೆ ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆ ಸಚಿವ ವಿ.ಸೋಮಣ್ಣ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಒಟ್ಟು 7,260 ಚದರ ಅಡಿ ವಿಸ್ತೀರ್ಣದ ಮೂರು ಅಂತಸ್ತಿನ ಕಟ್ಟಡ ಇದಾಗಿದೆ. 58 ಹಾಸಿಗೆಗಳ ಡಯಾಲಿಸಿಸ್‌ ಕೇಂದ್ರ ನಿರ್ಮಾಣವಾಗುತ್ತಿದೆ.

ಕೋವಿಡ್ ತುರ್ತು ಸಂದರ್ಭದಲ್ಲಿ ಈ ಕಟ್ಟಡದ ಕೆಲವು ಮಹಡಿಗಳನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದೆ. ಕೆಳ ಮಹಡಿಯಲ್ಲಿ 9 ಹಾಸಿಗೆಗಳ ಸಾಮರ್ಥ್ಯದ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳು, ಮೊದಲ ಮಹಡಿಯಲ್ಲಿ 15 ಐಸಿಯು ಹಾಸಿಗೆ, ಎರಡನೇ ಮಹಡಿಯಲ್ಲಿ 40 ಎಚ್‌ಡಿಯು ಸೌಲಭ್ಯದ ಹಾಸಿಗೆಗಳನ್ನು ಅಳವಡಿಸಲಾಗುತ್ತಿದೆ.

ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅತ್ಯಾಧುನಿಕ ವೈದ್ಯಕೀಯ ಸಲಕರಣೆ, ಹವಾನಿಯಂತ್ರಿತ ವ್ಯವಸ್ಥೆ, ದಿನದ 24 ಗಂಟೆಯೂ ಜನರೇಟರ್ ಸೌಲಭ್ಯ, ವಾಹನ ನಿಲುಗಡೆಗೆ ಉತ್ತಮ ಪಾರ್ಕಿಂಗ್ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿಗಳ ವಿಶ್ರಾಂತಿಗೆ ಸುಸಜ್ಜಿತ ಕೊಠಡಿಗಳು ನಿರ್ಮಾಣವಾಗುತ್ತಿವೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಟೆಲಿ ಐಸಿಯು ಎಂದರೇನು?

ಟೆಲಿ ಐಸಿಯು ಎಂದರೆ ಸಂಪೂರ್ಣವಾಗಿ ವಿಡಿಯೊ ಸಂವಾದದ ಮೂಲಕ ರೋಗಿಯ ಸ್ಥಿತಿಗತಿಯನ್ನು ಹೊರಗಿನಿಂದಲೇ ತಿಳಿದುಕೊಳ್ಳುವ ತಂತ್ರಜ್ಞಾನ ಆಧರಿತ ವಿಧಾನ.

‘ದೇಶದಲ್ಲೇ ಮೊದಲ ಬಾರಿಗೆ ಟೆಲಿ ಐಸಿಯು (ಸಂಪೂರ್ಣ ದೂರದರ್ಶಿತ ತೀವ್ರ ನಿಗಾ ಘಟಕ) ವ್ಯವಸ್ಥೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ತೀವ್ರ ನಿಗಾ ಘಟಕದ ಪ್ರತಿ ಹಾಸಿಗೆಗೂ ಆಡಿಯೊ ಮತ್ತು ವಿಡಿಯೊ ಸಂಪರ್ಕ ಕಲ್ಪಿಸಲಾಗುತ್ತಿದೆ. ವೈದ್ಯರಾಗಲಿ, ವೈದ್ಯಕೀಯ ಸಿಬ್ಬಂದಿಯಾಗಲಿ ಐಸಿಯು ಒಳಗೆ ಹೋಗದೆ ರೋಗಿಯ ಸ್ಥಿತಿಗತಿ ಮೇಲೆ ನಿಗಾ ವಹಿಸಬಹುದಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

‘ರೋಗಿ ಕೂಡ ತಾನು ಪಡೆಯುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ರೋಗಿಯ ಸಂಬಂಧಿಕರು ಕೂಡ ಅವರ ಸ್ಥಿತಿಗತಿಯನ್ನು ನೇರವಾಗಿ ಅರಿಯಬಹುದು. ರೋಗಿಯು ಕ್ಷಿಪ್ರವಾಗಿ ಗುಣಮುಖರಾಗಲು ಇದು ಸಹಕಾರಿ ಆಗಲಿದೆ. ಬೇರೆಲ್ಲಾ ಆಸ್ಪತ್ರೆಗಳಿಗೆ ಈ ಸರ್ಕಾರಿ ಆಸ್ಪತ್ರೆ ಮಾದರಿಯಾಗಲಿದೆ’ ಎಂದು ಅವರು ಹೇಳಿದರು.

ರೋಗಿಯ ಸ್ಥಿತಿಗತಿ ಅರಿಯಲು ವೈದ್ಯರು ಮತ್ತು ನರ್ಸ್‌ಗಳು ಪ್ರತಿಬಾರಿ ಪಿಪಿಇ ಕಿಟ್ ಧರಿಸಿಕೊಂಡು ಹೋಗುವುದು ಹಾಗೂ ಅಪಾಯಕ್ಕೆ ತಮ್ಮನ್ನು ಒಡ್ಡಿಕೊಳ್ಳುವುದು ಇದರಿಂದ ತಪ್ಪಲಿದೆ ಎಂದು ಸೋಮಣ್ಣ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT