ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಾಸಿಯಾದವರಿಗೆ ಮತ್ತೆ ಸೋಂಕು ತಗಲುವುದು ವಿರಳ

ಕೊರೊನಾ: ಆ್ಯಂಟಿಜೆನ್, ಆ್ಯಂಟಿಬಾಡಿ ಪರೀಕ್ಷೆ ಪ್ರಾರಂಭ
Last Updated 12 ಜುಲೈ 2020, 4:37 IST
ಅಕ್ಷರ ಗಾತ್ರ

ಬೆಂಗಳೂರು: ‘ಒಮ್ಮೆ ಸೋಂಕು ತಗುಲಿ ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲುವುದು ತೀರಾ ವಿರಳ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

‘ಕೊರೊನಾ ಸೋಂಕು ಗುಣವಾದ ಮೊದಲ ಆರು ತಿಂಗಳಲ್ಲಿ ಮತ್ತೆ ಸೋಂಕು ತಗುಲುವ ಸಾಧ್ಯತೆ ತೀರಾ ಕಡಿಮೆ. ಶರೀರದಲ್ಲಿ ಅಥವಾ ರಕ್ತದಲ್ಲಿ ರೋಗನಿರೋಧಕ ಶಕ್ತಿ (ಐಜಿಜಿ) ಇದ್ದರೆ ಮತ್ತೆ ಸೋಂಕು ತಗುಲದು’ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು ಆ್ಯಂಟಿಜೆನ್‌ ಪರೀಕ್ಷೆಯನ್ನು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದನ್ನು ದೃಢಪಡಿಸಲು ಆ್ಯಂಟಿಬಾಡಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಆ್ಯಂಟಿಜೆನ್‌ ಪರೀಕ್ಷೆ ಅಷ್ಟೊಂದು ನಿಖರವಲ್ಲ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಡಾ.ಮಂಜುನಾಥ್‌, ‘ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢಪಟ್ಟರೆ ಶೇ 100ರಷ್ಟು ಅದು ಖಚಿತ. ರೋಗಲಕ್ಷಣವಿದ್ದೂ ಸೋಂಕು ಇಲ್ಲ ಎಂಬ ವರದಿ ಬಂದಿದ್ದರೆ ಬೇರೆ ಪರೀಕ್ಷೆ ನಡೆಸಬೇಕಾಗುತ್ತದೆ’ ಎಂದು ವಿವರಿಸಿದರು.

‘ಸೋಂಕಿನ ಲಕ್ಷಣ ಇಲ್ಲದವರನ್ನಷ್ಟೇ ಅಲ್ಲದೆ, ಸೋಂಕು ಲಕ್ಷಣ ಹೊಂದಿದವರಿಗೆ, ಆರೋಗ್ಯ ಸೇವಾ ಕಾರ್ಯಕರ್ತರಿಗೆ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್‌ ಔಷಧಿ ಸೇವಿಸುವವರಿಗೆ, 60 ವರ್ಷ ಮೇಲ್ಪಟ್ಟವರಿಗೆ, ಕ್ಯಾನ್ಸರ್, ಹೃದ್ರೋಗ, ಶ್ವಾಸಕೋಶದ ತೊಂದರೆ... ಹೀಗೆ ಬೇರೆ ಯಾವುದೇ ಕಾಯಿಲೆ ಹೊಂದಿದವರಿಗೂ ಈ ಆ್ಯಂಟಿಜೆನ್ ಪರೀಕ್ಷೆ ನಡೆಸಬಹುದು’ ಎಂದು ಸಲಹೆ ನೀಡಿದರು.

‘ಆ್ಯಂಟಿಜೆನ್‌ ಪರೀಕ್ಷೆಗೆ ₹450 ವೆಚ್ಚವಾಗುತ್ತದೆ. ವೇಗವಾಗಿ ಫಲಿತಾಂಶ ಬರುವುದರಿಂದ ಹೆಚ್ಚು ಪರೀಕ್ಷೆಯನ್ನು ನಡೆಸಲು ಇದು ಸಹಕಾರಿ. ಇದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಬಹುದು. ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದರೂ ಚಿಂತೆ ಇಲ್ಲ. ಆದರೆ, ಸಾವಿನ ಸಂಖ್ಯೆ ಕಡಿಮೆಗೊಳಿಸುವುದು ಆದ್ಯತೆಯಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT