ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದರ್ಶನದ ಕ್ಯಾಮೆರಾಮನ್‌ಗೂ ಕೊರೊನಾ ಧೃಡ

ಚೆನ್ನೈಗೆ ಹೋಗಿಬಂದ ಬಳಿಕ ತಂದೆ, ಮಗನಿಗೆ ಕಾಣಿಸಿಕೊಂಡ ಸೋಂಕು
Last Updated 27 ಮೇ 2020, 19:01 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದೂರದರ್ಶನದ ಕ್ಯಾಮೆರಾಮ್ಯಾನ್‌ಗೆ (55 ವರ್ಷ) ಹಾಗೂ ಅವರ ಮಗನಿಗೆ (28 ವರ್ಷ) ಕೋವಿಡ್‌ 19 ಸೋಂಕು ಇರುವುದು ದೃಢಪಟ್ಟಿದೆ.

ಕ್ಯಾಮೆರಾಮ್ಯಾನ್‌ ಅವರು ತಾಯಿಯ ಆರೋಗ್ಯ ವಿಚಾರಿಸುವ ಸಲುವಾಗಿ ಚೆನ್ನೈಗೆ ಇತ್ತೀಚೆಗೆ ಭೇಟಿ ನೀಡಿದ್ದರು. ನಾಲ್ಕೈದು ದಿನಗಳು ಅಲ್ಲೇ ಉಳಿದುಕೊಂಡು ನಂತರ ಬೆಂಗಳೂರಿನ ಕೆ.ಆರ್‌.ಪುರದಲ್ಲಿರುವ ಮನೆಗೆ ಮರಳಿದ್ದರು.

ಬೆಂಗಳೂರು ನಿವಾಸಿಯಾಗಿರುವ ಕ್ಯಾಮೆರಾಮ್ಯಾನ್‌ ಚಂಡೀಗಡ ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ಗಿಂತಲೂ ಕೆಲವು ದಿನ ಮುಂಚೆ ಬೆಂಗಳೂರಿಗೆ ವಾಪಸ್ ಆಗಿದ್ದರು. ದೂರದರ್ಶನದ ಆಡಳಿತವು ಸಿಬ್ಬಂದಿ ಉಳಿದುಕೊಂಡಿರುವ ಊರಿನಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿತ್ತು. ಹಾಗಾಗಿ ಅವರು ಬೆಂಗಳೂರು ದೂರದರ್ಶನದಲ್ಲಿ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕ್ವಾರಂಟೈನ್‌ ಆಗಿಲ್ಲ ಏಕೆ: ಹೊರರಾಜ್ಯಗಳಿಂದ ಬರುವವರು ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಸ (ಕ್ವಾರಂಟೈನ್‌) ಅನುಭವಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದರೂ ಅವರು ಚೆನ್ನೈನಿಂದ ಮರಳಿದ ಬಳಿಕ ಪ್ರತ್ಯೇಕ ವಾಸಕ್ಕೆ ಒಳಗಾಗದೇ ಕರ್ತವ್ಯಕ್ಕೆ ಹಾಜರಾಗಿರುವುದು ಸಂದೇಹಕ್ಕೆ ಕಾರಣವಾಗಿದೆ. ಅವರು ದೂರದರ್ಶನ ಕೇಂದ್ರದ ಕಚೇರಿಗೂ ಭೇಟಿ ನೀಡಿದ್ದರು. ಅದೃಷ್ಟವಶಾತ್‌ ಅವರು ಕಚೇರಿಗೆ ಭೇಟಿ ನೀಡಿದ್ದ ಅವಧಿಯಲ್ಲಿ ಹೆಚ್ಚಿನ ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

‘ಲಾಕ್‌ಡೌನ್‌ ಜಾರಿಗೂ ಮುನ್ನವೇ ದೂರದರ್ಶನ ಕೇಂದ್ರದಲ್ಲಿ ಕೊರೊನಾ ಸೋಂಕು ಹಬ್ಬದಂತೆ ತಡೆಯಲು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಎಲ್ಲರೂ ಸುರಕ್ಷಿತ ಅಂತರ ಕಾಪಾಡುತ್ತಾರೆ. ಇತರ ಸಿಬ್ಬಂದಿಗೆ ಸೋಂಕು ಹಬ್ಬುವ ಸಾಧ್ಯತೆ ತೀರಾ ಕಡಿಮೆ’ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಅವರ ಫೋನ್‌ ಇನ್‌ ಕಾರ್ಯಕ್ರಮ ಬುಧವಾರ ನಿಗದಿಯಾಗಿತ್ತು. ದೂರದರ್ಶನದ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಕಾರಣ ಈ ಕಾರ್ಯಕ್ರಮವನ್ನೂ ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT