ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ರಜೆ ಹಾಕಿ 18ರಂದು ಪ್ರತಿಭಟನೆ

‘ಕೋವಿಡ್‌ ಯೋಧ’ರ ಕುಟುಂಬಗಳಿಗೆ ತಲುಪದ ವಿಮೆ–ಬಿಬಿಎಂಪಿ ನೌಕರರ ಆಕ್ರೋಶ
Last Updated 11 ಫೆಬ್ರುವರಿ 2021, 18:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ 18 ಬಿಬಿಎಂಪಿ ನೌಕರರು ಕೋವಿಡ್‌ನಿಂದ ಮೃತಪಟ್ಟಿದ್ದರೂ, ಅವರ ಕುಟುಂಬಗಳಿಗೆ ವಿಮೆಯ ಮೊತ್ತ ತಲುಪಿಸದಿರುವುದಕ್ಕೆ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಇದೇ 18ರಂದು ಪಾಲಿಕೆಯ ನೌಕರರು ಸಾಮೂಹಿಕ ರಜೆ ಹಾಕಿ ಪಾದಯಾತ್ರೆಯಲ್ಲಿ ತೆರಳಿ ಮುಖ್ಯಮಂತ್ರಿ ಬಿಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಿದ್ದಾರೆ.

‘ನಗರದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದಾಗ ಬಿಬಿಎಂಪಿ ನೌಕರರು ಜೀವವನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ್ದಾರೆ. ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ನೆರವಿಗೆ ತಕ್ಷಣವೇ ಧಾವಿಸಬೇಕಾದುದು ಸರ್ಕಾರದ ಕರ್ತವ್ಯ. ಸಂತ್ರಸ್ತ ಕುಟುಂಬಗಳಿಗೆ ₹ 30 ಲಕ್ಷ ವಿಮೆಯ ಹಣವನ್ನು ಇನ್ನೂ ತಲುಪಿಸದೇ ಇರುವುದು ಅನ್ಯಾಯ’ ಎಂದು ಸಂಘದ ಅಧ್ಯಕ್ಷ ಎ.ಅಮೃತರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯಮಂತ್ರಿಯವರೇ ಬೆಂಗಳೂರು ಮಹಾನಗರದ ಉಸ್ತುವಾರಿಯನ್ನೂ ಹೊಂದಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಒಮ್ಮೆಯೂ ಬಿಬಿಎಂಪಿ ನೌಕರರ ಕುಂದುಕೊರತೆಗಳನ್ನು ಕೇಳಿಲ್ಲ. ನಗರದಲ್ಲಿ ನಿತ್ಯವೂ ನಾಲ್ಕೈದು ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವಾಗಲೂ ಧೃತಿಗೆಡದೆ ಕರ್ತವ್ಯ ನಿರ್ವಹಿಸಿದ ನೌಕರರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

‘ಬಿಬಿಎಂಪಿ ನೌಕರರ ವೃಂದ ಮತ್ತು ನೇಮಕಾತಿಯ ಹೊಸ ನಿಯಮಗಳು ನೌಕರರಿಗೆ ಪ್ರತಿಕೂಲವಾಗಿವೆ. ಮಂಜೂರಾದ ಸಾವಿರಾರು ಹುದ್ದೆಗಳು ಖಾಲಿ ಇವೆ. ಕೆಲಸದ ಹೊರೆ ಹೆಚ್ಚಳವಾಗಿದೆ. ನೌಕರರು ಬಹಳ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ಇದೆ’ ಎಂದು ಅವರು ಪರಿಸ್ಥಿತಿ ವಿವರಿಸಿದರು.

‘ಕೋವಿಡ್ ಯೋಧರ ಕುಟುಂಬಗಳ ಬಗ್ಗೆ ಅನಾದರ ತೋರಿಸಿರುವ ಸರ್ಕಾರದ ಧೋರಣೆ ವಿರುದ್ಧ ಇದೇ 18ರಂದು ಪಾದಯಾತ್ರೆ ನಡೆಸಲಿದ್ದೇವೆ. ಇದೇ 15ರಂದು ಸಭೆ ಸೇರಿ ಈ ಪ್ರತಿಭಟನೆಯ ರೂಪರೇಷೆ ಸಿದ್ಧಪಡಿಸಲಿದ್ದೇವೆ’ ಎಂದರು.

ಕೋವಿಡ್‌ನಿಂದ ಮೃತಪಟ್ಟವರಿಗೆ ವಿಮೆಯ ಮೊತ್ತವನ್ನು ತಲುಪದಿರುವ ಬಗ್ಗೆ ‘ಪ್ರಜಾವಾಣಿ’ ಗುರುವಾರದ ಸಂಚಿಕೆಯಲ್ಲಿ ‘ಸೇನಾನಿ’ಗಳ ಕುಟುಂಬ ಅನಾಥ’ ಎಂಬ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT