ಗುರುವಾರ , ಜೂಲೈ 9, 2020
21 °C
ಒಂದೇ ದಿನ 503 ಮಂದಿ ಕೋವಿಡ್‌ ಪ್ರಕರಣ * ಶತಕದ ಗಡಿ ಸಮೀಪಿಸಿದ ಮೃತರ ಸಂಖ್ಯೆ

ಕೋವಿಡ್: ಬೆಂಗಳೂರಿನಲ್ಲಿ 171 ರೋಗಿಗಳ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಕೋವಿಡ್‌ನಿಂದ ಮತ್ತೆ ನಾಲ್ಕು ಮಂದಿ ಮೃತಪಟ್ಟಿದ್ದು, ಸೋಂಕಿಗೆ ಸಾವಿಗೀಡಾದವರ ಸಂಖ್ಯೆ ಶತಕದ ಗಡಿ (95) ಸಮೀಪಿಸಿದೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದ್ದು, ಸದ್ಯ 171 ಮಂದಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ನಗರದಲ್ಲಿ ಸತತ ನಾಲ್ಕನೇ ದಿನವೂ ಸೋಂಕಿತರ ಸಂಖ್ಯೆ 500ರ ಗಡಿ (503) ದಾಟಿದೆ. ಕೋವಿಡ್‌ ಪೀಡಿತರ ಸಂಖ್ಯೆ 4,555ಕ್ಕೆ ತಲುಪಿದೆ. ಇದರಲ್ಲಿ 543 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 3,916 ರೋಗಿಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಂಗಳವಾರ ವರದಿಯಾದ ಪ್ರಕರಣಗಳಲ್ಲಿ ರೋಗಿಗಳಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗಿಲ್ಲ. ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಪರಿಣಾಮ ಅಧಿಕಾರಿಗಳು
ಕೂಡ ಸಂಪರ್ಕ ಪತ್ತೆ ಕಾರ್ಯ ಕೈಬಿಟ್ಟಿದ್ದಾರೆ.

ಸೋಂಕಿತರಾದವರಲ್ಲಿ ಬಹುತೇಕರು ಮಧ್ಯಮ ವಯಸ್ಸಿನವರು. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ), ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎದುರಿಸುತ್ತಿದ್ದವರು ಹೆಚ್ಚಾಗಿ ಸೋಂಕಿತರಾಗಿದ್ದಾರೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಕೂಡ ಕೋವಿಡ್‌ ಪೀಡಿತರಾಗುತ್ತಿದ್ದಾರೆ.

ಅಧಿಕಾರಿಗೆ ಸೋಂಕು: ಆಯುಷ್ ಇಲಾಖೆಯ 35 ವರ್ಷದ ಅಧಿಕಾರಿಯೊಬ್ಬರು ಕೊರೊನಾ ಸೋಂಕಿತರಾಗಿದ್ದಾರೆ. ಅವರು ಎರಡು ದಿನಗಳಿಂದ ಕಚೇರಿಗೆ ಬಂದಿರಲಿಲ್ಲ. ಸಣ್ಣ ಪ್ರಮಾಣದಲ್ಲಿ ಶೀತ ಹಾಗೂ ಜ್ವರದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು. 

‘ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಆನಂದರಾವ್ ವೃತ್ತದಲ್ಲಿರುವ ಕಚೇರಿಯನ್ನು 48 ಗಂಟೆಗಳವರೆಗೆ ಬಂದ್ ಮಾಡಲಾಗಿದೆ. ಸೋಂಕು ನಿವಾರಕದಿಂದ ಕಚೇರಿಯನ್ನು ಸ್ವಚ್ಛ ಮಾಡಲಾಗಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೊಕ್ಕಸಂದ್ರದ ನಿವಾಸಿ, ಬಿಡದಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕುಂಟೆಯ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಬಿಎಂಟಿಸಿಯಲ್ಲಿ ಬಸ್ ಚಾಲಕರು ಸೇರಿದಂತೆ ಈವರೆಗೆ 30 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅದರಲ್ಲಿ 12 ಮಂದಿ ಗುಣಮುಖರಾಗಿದ್ದಾರೆ.

ಸಭೆಗೆ ಹೋಗಿದ್ದ ವೈದ್ಯೆಗೆ ಸೋಂಕು
ಮೂರು ದಿನಗಳ ಹಿಂದೆಯಷ್ಟೇ ಕಂದಾಯ ಸಚಿವ ಆರ್. ಅಶೋಕ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವೈದ್ಯರ ಜತೆಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ವೈದ್ಯರೊಬ್ಬರು ಈಗ ಸೋಂಕಿತರಾಗಿದ್ದಾರೆ. ಸಭೆಯಲ್ಲಿ ಶಾಸಕರಾದ ಎಸ್‌.ಆರ್. ವಿಶ್ವನಾಥ್, ಜಮೀರ್ ಅಹ್ಮದ್ ಖಾನ್, ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ಜಯಂತಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದವರು ಅಲ್ಲಿಯೇ ಮಧ್ಯಾಹ್ನ ಊಟ ಮಾಡಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 11 ಶುಶ್ರೂಷಕಿಯರಿಗೆ ಕೋವಿಡ್‌ ಕಾಯಿಲೆ ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.