ಸೋಮವಾರ, ಜೂನ್ 14, 2021
22 °C

ಕೊರೊನಾ ಗೆದ್ದವರು: ಸೋಂಕಿತರೂ ಕುಟುಂಬಕ್ಕೆ ಧೈರ್ಯ ನೀಡಬೇಕು -ಸಂಜೀವ್ ನಾಯ್ಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಸೋಂಕಿಗೆ ಒಳಗಾದವರು ಹೆದರಬಾರದು. ನಿಮ್ಮಷ್ಟೇ ಆತಂಕ ಹಾಗೂ ಭೀತಿ ನಿಮ್ಮ ಕುಟುಂಬದ ಸದಸ್ಯರನ್ನೂ ಆವರಿಸಿರುತ್ತದೆ. ನೀವು ಚಿಕಿತ್ಸೆಗೆ ತೆರಳಿದ ಮೇಲೆ ಕುಟುಂಬಸ್ಥರು ದಿಕ್ಕು ತೋಚದ ಸ್ಥಿತಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಕುಟುಂಬಕ್ಕೆ ನೀವು ಹೇಳುವ ಧೈರ್ಯದ ಮಾತುಗಳೇ ಅವರನ್ನು ಬಲಗೊಳಿಸುತ್ತದೆ’.

ಇದು, ಕೊರೊನಾ ವಿರುದ್ಧದ ಹೋರಾಟ ಜಯಿಸಿ ಬಂದ ನಗರದ ಖಾಸಗಿ ಕಂಪನಿಯೊಂದರ ಉದ್ಯೋಗಿ ಸಂಜೀವ್ ನಾಯ್ಕ್‌ ಅವರ ಮಾತುಗಳು. 

‘ಕೊರೊನಾ ಮೊದಲ ಅಲೆ ತಿಳಿಗೊಂಡಿತು ಎನ್ನುವಷ್ಟರಲ್ಲೇ ಎರಡನೇ ಅಲೆ ತೀವ್ರಗೊಂಡಿದೆ. ಏಪ್ರಿಲ್‌ನಲ್ಲಿ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ಸೋಂಕಿನ ಬಗ್ಗೆ ಹೆಚ್ಚು ಭಯ ಇರಲಿಲ್ಲ. ಆದರೆ, ಕಚೇರಿಯಲ್ಲೇ ಒಮ್ಮೆ ಕೋವಿಡ್ ತಪಾಸಣೆಗೆ ಒಳಗಾದೆ. ವರದಿಯಲ್ಲಿ ಸೋಂಕು ದೃಢಪಟ್ಟಿತು’.

‘ಕೆಲಸಕ್ಕಾಗಿ ಹೊರಗೆ ಬಂದು ಹೋಗುತ್ತಿದ್ದರಿಂದ ಕುಟುಂಬದವರಿಂದ ಮನೆಯಲ್ಲಿ ಮೊದಲಿನಿಂದಲೂ ಅಂತರ ಕಾಯ್ದುಕೊಂಡಿದ್ದೆ. ಸೋಂಕು ದೃಢಪಟ್ಟ ನಂತರ ಮನೆಯವರ ಆರೋಗ್ಯ ದೃಷ್ಟಿಯಿಂದ ಕೂಡಲೇ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ವೈದ್ಯರ ಸಲಹೆಗಳನ್ನು ತಪ್ಪದೆ ಪಾಲಿಸಿದೆ. ಇದರ ಪರಿಣಾಮ ಒಂದು ವಾರದಲ್ಲೇ ನಾನು ಗುಣಮುಖವಾದೆ.’

‘ಆಸ್ಪತ್ರೆಯಲ್ಲಿದ್ದಾಗ ಅಕ್ಕಪಕ್ಕದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳೂ ಇದ್ದರು. ಅವರೆಲ್ಲರೂ ತಮ್ಮ ಕುಟುಂಬಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ತಾತ್ಕಾಲಿಕವಾಗಿ ಸಂಬಂಧಗಳಿಗೆ ಎದುರಾಗಿದ್ದ ಅಂತರವನ್ನು ಸಹಿಸಿಕೊಳ್ಳಲು ಅವರಿಂದ ಆಗುತ್ತಿರಲಿಲ್ಲ. ಆಗಲೇ ಸಂಬಂಧಗಳ ಮಹತ್ವವನ್ನು ಅರಿತುಕೊಂಡೆ’.

‘ಆಸ್ಪತ್ರೆ ಸೇರಿದಾಗ ನಮಗೇ ಅಷ್ಟು ಚಿಂತೆ ಕಾಡುವಾಗ, ಮನೆಯವರೆಲ್ಲರೂ ನಮ್ಮ ಯೋಗಕ್ಷೇಮದ ಬಗ್ಗೆಯೇ ಪ್ರತಿ ಕ್ಷಣ ಮುಳುಗಿರುತ್ತಾರೆ ಎಂಬುದನ್ನು ತಿಳಿದು, ಮನೆಗೆ ಕರೆ ಮಾಡಿದೆ. ಎಲ್ಲರ ಮಾತಿನಲ್ಲಿ ಆತಂಕ ವ್ಯಕ್ತವಾಯಿತು. ‘ನಾನು ಆರೋಗ್ಯದಿಂದ ಇದ್ದೇನೆ. ಶೀಘ್ರವೇ ಮನೆಗೆ ವಾಪಸ್ ಬರುತ್ತೇನೆ’ ಎಂದು ಹೇಳಿದೆ. ಆಗ ಅವರೆಲ್ಲರೂ ಧೈರ್ಯದ ಮಾತುಗಳನ್ನಾಡಿದರು’.

‘ಸೋಂಕು ಹೇಗೆ ತಗುಲುವುದೋ ತಿಳಿಯುವುದಿಲ್ಲ. ಆದರೆ, ಸೋಂಕಿಗೆ ಒಳಗಾದವರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಮೇಲೆ ಅದನ್ನು ಜಯಿಸಬಹುದು. ಬಹುತೇಕರು ಮನೆಯವರಿಂದ ದೂರವಿದ್ದೇವೆ, ಪ್ರಾಣಕ್ಕೆ ಅಪಾಯ ಎಂಬ ಆತಂಕದಲ್ಲೇ ಸಮಯ ಕಳೆಯುತ್ತಾರೆ. ಸಕಾರಾತ್ಮಕ ಭಾವನೆಯೊಂದಿಗೆ ಆಸ್ಪತ್ರೆಗೆ ಬರುವ ಮೊದಲೇ ‘ಕೊರೊನಾ ಗೆದ್ದು ಬರುತ್ತೇನೆ’ ಎಂಬ ದೃಢ ನಿರ್ಧಾರ ಮಾಡಿ. ಆ ಮಾತನ್ನು ಮನೆಯವರಿಗೂ ತಿಳಿಸಿ. ಆಗ ಮಾತ್ರ ಎಲ್ಲರೂ ನಿರಾತಂಕವಾಗಿರಲು ಸಾಧ್ಯ’.

‘ನಾನು ಚಿಕಿತ್ಸೆ ಪಡೆದಾಗ ಈಗಿನಂತೆ ಪರದಾಡುವ ಸ್ಥಿತಿ ಇರಲಿಲ್ಲ. ಸೋಂಕು ಲಕ್ಷಣಗಳು ಕಂಡು ಬಂದರೆ, ಮನೆಯಲ್ಲೇ ಕ್ವಾರಂಟೈನ್ ಆಗಿ. ವೈದ್ಯರು ಸೂಚಿಸುವ ಔಷಧ ತೆಗೆದುಕೊಂಡು, ಮನೆಯಿಂದಲೇ ಕೊರೊನಾ ಮಣಿಸಿ’.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು