ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ದೃಢ ಪ್ರಮಾಣ ಏರಿಕೆ: ಮುಂಬೈ ಬಳಿಕ ಬೆಂಗಳೂರಿನಲ್ಲಿ ಅಧಿಕ ಸಕ್ರಿಯ ಪ್ರಕರಣ

ಮಹಾನಗರಗಳಲ್ಲಿ *ಚೇತರಿಕೆ ಪ್ರಮಾಣ ಶೇ 98.92
Last Updated 6 ಜೂನ್ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾರದಿಂದ ಕೋವಿಡ್ ಹೊಸ ಪ್ರಕರಣಗಳ ಜತೆಗೆ ಸೋಂಕು ದೃಢ ಪ್ರಮಾಣವೂ ಏರುಮುಖ ಮಾಡಿದೆ. ಇದರಿಂದಾಗಿ ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮಹಾನಗರಗಳಲ್ಲಿ ಮುಂಬೈ ನಂತರದ ಸ್ಥಾನವನ್ನು ಬೆಂಗಳೂರು ಪಡೆದಿದೆ.

ಕೋವಿಡ್‌ ಮೂರನೇ ಅಲೆಯಲ್ಲಿ ಸೋಂಕು ದೃಢ ಪ್ರಮಾಣ ದಿಢೀರ್ ಏರಿಕೆಯಾಗಿತ್ತು. ಜನವರಿ ಮೊದಲ ವಾರದಲ್ಲಿ ಶೇ 0.49ರಷ್ಟಿದ್ದ ದೃಢ ಪ್ರಮಾಣ, ತಿಂಗಳಾಂತ್ಯಕ್ಕೆ ಶೇ 22.39ಕ್ಕೆ ಏರಿಕೆಯಾಗಿತ್ತು. ಮರಣ ಪ್ರಮಾಣ ದರವು ಶೇ 1ರ ಗಡಿಯೊಳಗೆಯಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ಬಹುತೇಕ ದಿನಗಳು ಸೋಂಕು ದೃಢ ಪ್ರಮಾಣವೂ ಶೇ 1ಕ್ಕಿಂತ ಕಡಿಮೆಯಿತ್ತು. ಈಗ ಆ ಪ್ರಮಾಣ ಏರುಗತಿ ಪಡೆದು, ಶೇ 1.62ಕ್ಕೆ ತಲುಪಿದೆ.

ಸಾವಿರದ ಆಸುಪಾಸಿನಲ್ಲಿದ್ದ ಸಕ್ರಿಯ ಪ್ರಕರಣಗಳು ಈಗ ಎರಡು ಸಾವಿರದ ಗಡಿ ದಾಟಿದೆ. ಮುಂಬೈನಲ್ಲಿ 4 ಸಾವಿರಕ್ಕೂ ಅಧಿಕ ಸೋಂಕಿತರಿದ್ದಾರೆ. ನವದೆಹಲಿಯಲ್ಲಿ ಈ ಸಂಖ್ಯೆ 1,500 ಆಸುಪಾಸಿನಲ್ಲಿದೆ. ಚೆನ್ನೈ ಮತ್ತುಕೊಲ್ಕತ್ತದಲ್ಲಿ 500ಕ್ಕಿಂತ ಕಡಿಮೆ ಸೋಂಕಿತರಿದ್ದಾರೆ.

ಪರೀಕ್ಷೆ ಹೆಚ್ಚಳ:ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದ್ದಾರೆ. ಮೇ ತಿಂಗಳಲ್ಲಿ 10 ಸಾವಿರದ ಆಸುಪಾಸಿನಲ್ಲಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆ, ವಾರದಿಂದ 14 ಸಾವಿರದ ಆಸುಪಾಸಿನಲ್ಲಿದೆ.

ನಗರದಲ್ಲಿ ಈವರೆಗೆ ವರದಿಯಾದ 17.88 ಲಕ್ಷ ಕೋವಿಡ್ ಪ್ರಕರಣಗಳಲ್ಲಿ 17.69 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ 98.92ರಷ್ಟಿದೆ.

ಐದು ದಿನಗಳಲ್ಲಿ 1,178 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ ಒಬ್ಬರು ಮಾತ್ರ ಕೋವಿಡ್‌ನಿಂದ ಮೃತಪಟ್ಟಿರುವುದು ವರದಿಯಾಗಿದೆ.

‘ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಯಲ್ಲಿ (ಜೀನೋಮ್‌ ಸೀಕ್ವೆನ್ಸಿಂಗ್‌) ಹೊಸ ರೂಪಾಂತರಿ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಕಡೆ ನಿಗಾ ಇಡಲಾಗಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.

ಮಾಸ್ಕ್ ಕಡ್ಡಾಯ: ದಂಡ ಇಲ್ಲ
ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್‌ ಪರೀಕ್ಷೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಘನತ್ಯಾಜ್ಯ) ಡಾ.ಹರೀಶ್‌ಕುಮಾರ್ ತಿಳಿಸಿದರು.

ದಿನಕ್ಕೆ 220 ಪ್ರಕರಣಗಳು ದಾಖಲಾಗುತ್ತಿದ್ದು, ಜನ ಆತಂಕಕ್ಕೆ ಒಳಗಾಗಬೇಕಿಲ್ಲ. ದಿನಕ್ಕೆ 16 ಸಾವಿರ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಅದನ್ನು 20 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಮಾಸ್ಕ್ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕಿದ್ದು, ಅದನ್ನು ಮಾರ್ಷಲ್‌ಗಳು ನಿಭಾಯಿಸಲಿದ್ದಾರೆ. ದಂಡ ಹಾಕದೆ ಜನರಿಗೆ ತಿಳುವಳಿಕೆ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಹೆಚ್ಚಿನ ನಿಗಾಕ್ಕೆ ಶಿಫಾರಸು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದಿಂದ ಒಂದು ವಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಸೋಂಕಿತರ ಮೇಲೆ ನಿಗಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.

ಡಾ.ಎಂ.ಕೆ. ಸುದರ್ಶನ್ ನೇತೃತ್ವದ ಸಮಿತಿ ಸೋಮವಾರ ಸಭೆ ನಡೆಸಿ, ಸದ್ಯದ ಪರಿಸ್ಥಿತಿ ಅವಲೋಕಿಸಿತು. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸೋಂಕು ದೃಢ ಪ್ರಮಾಣ, ಪರೀಕ್ಷೆ ಸೇರಿ ವಿವಿಧ ವಿಷಯಗಳ ಬಗ್ಗೆ ಸಮಿತಿಯ ಸದಸ್ಯರು ಮಾಹಿತಿ ಪಡೆದುಕೊಂಡರು. ಮುಂಬೈ, ದೆಹಲಿ ಸೇರಿ ದೇಶದ ವಿವಿಧೆಡೆ ಕೋವಿಡ್‌ ಹೆಚ್ಚಳವಾಗುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದರು.

‘ಮೊದಲ ಮೂರು ಅಲೆಯಲ್ಲಿ ಬೆಂಗಳೂರಿನಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿ, ಬಳಿಕ ಜಿಲ್ಲೆಗಳಿಗೆ ಸೋಂಕು ಹರಡಿತ್ತು. ಹೀಗಾಗಿ, ಈ ಬಾರಿ ಸೋಂಕು ಸಮುದಾಯದ ಹಂತದಲ್ಲಿ ಹರಡದಂತೆ ಈಗಲೇ ಕ್ರಮಗಳನ್ನು ಕೈಗೊಳ್ಳಬೇಕು. ಆಸ್ಪತ್ರೆ ದಾಖಲಾತಿ ಕಡಿಮೆ ಇರುವುದರಿಂದ ಆತಂಕ ಪಡಬೇಕಾದ ಪರಿಸ್ಥಿತಿಯಿಲ್ಲ’ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದರು. ‘ಕೋವಿಡ್‌ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಲಸಿಕೆ ವಿತರಣೆಗೆ ಆದ್ಯತೆ ನೀಡಬೇಕು’ ಎಂದು ತಜ್ಞರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT