ಬುಧವಾರ, ಅಕ್ಟೋಬರ್ 28, 2020
29 °C
ದೂರವಾಣಿ ಸಂಖ್ಯೆ ನೀಡಿ ಸಮಸ್ಯೆ ಎದುರಿಸುತ್ತಿದ್ದಾರೆಯೇ ಯುವತಿಯರು?

ಮಾದರಿ ಕೊಡದಿದ್ದರೂ ಬಂತು ಪಾಸಿಟಿವ್ ವರದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ಗೆ ಪರೀಕ್ಷೆಗೆ ನೀವು ಮಾದರಿ ಕೊಡದೇ ಇದ್ದರೂ, ನಿಮಗೆ ಕೋವಿಡ್‌ ಪಾಸಿಟಿವ್‌ ಬಂದಿದೆ ಎಂದು ಬಿಬಿಎಂಪಿಯಿಂದ ಕರೆ ಬಂದರೆ ಹೇಗಿರುತ್ತದೆ! 

ನಗರದಲ್ಲಿ ಮೂವರು ಯುವತಿಯರು ಇಂತಹ ಸಂದಿಗ್ಧ ಎದುರಿಸುತ್ತಿದ್ದಾರೆ. 

‘ಕೋವಿಡ್‌ ಪರೀಕ್ಷೆಗೆ ನಾನು ಗಂಟಲು ದ್ರವ ನೀಡಿರಲಿಲ್ಲ. ಆರ್‌ಟಿ–ಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಂಡಿರಲಿಲ್ಲ. ಆದರೆ, ನಿಮಗೆ ಕೊರೊನಾ ಪಾಸಿಟಿವ್ ಆಗಿದೆ ಬಿಬಿಎಂಪಿಯಿಂದ ಎಂದು ಹಲವರು ಕರೆ ಮಾಡುತ್ತಿದ್ದಾರೆ. ಮಾನಸಿಕವಾಗಿ ಹಿಂಸೆ ಆಗುತ್ತಿದೆ’ ಎಂದು ವಾಣಿ ನಂಜೇಗೌಡ ‘ಪ್ರಜಾವಾಣಿ’ ತಿಳಿಸಿದರು. 

‘ಸೆ.24ರಂದು ನಾನು ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ಹೋಗುತ್ತಿದ್ದಾಗ, ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕೆಲವರು ಕರೆದರು. ಬಿಬಿಎಂಪಿಯ ಗುರುತಿನ ಚೀಟಿಯನ್ನು ಅವರು ಧರಿಸಿದ್ದರು. ನಾನು ಮತ್ತು  ನನ್ನ ಇಬ್ಬರು ಸಂಬಂಧಿಕರು ಅವಸರದಲ್ಲಿ ಹೋಗುತ್ತಿದ್ದೆವು. ಆದರೂ, ನಮ್ಮ ದೂರವಾಣಿ ಸಂಖ್ಯೆ ಕೇಳಿ ಪಡೆದರು. ಒಟಿಪಿ ಹೇಳಿ ಎಂದರು. ನಾವು ಹೇಳಲು ಒಪ್ಪದಿದ್ದಾಗ ನನ್ನ ಮೊಬೈಲ್‌ ಅನ್ನು ಅಕ್ಷರಶಃ ಕಸಿದುಕೊಂಡು ಒಟಿಪಿ ಬರೆದುಕೊಂಡರು’ ಎಂದು ಅವರು ದೂರಿದರು. 

‘ನಾವು ಮೆಟ್ರೊ ರೈಲಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ, ‘ನಿಮ್ಮ ಮಾದರಿ ಸಂಗ್ರಹಿಸಲಾಗಿದೆ’ ಎಂದು ನಮ್ಮ ಮೊಬೈಲ್‌ಗೆ ಸಂದೇಶ ಬಂದಿತು. ಮಾದರಿಯನ್ನು ಕೊಡದೇ ಸಂದೇಶ ಬರಲು ಹೇಗೆ ಸಾಧ್ಯ, ಆಕಸ್ಮಿಕವಾಗಿ ಎಸ್‌ಎಂಎಸ್‌ ಬಂದಿರಬಹುದು ಎಂದು ಸುಮ್ಮನಾದೆವು. ಅಚ್ಚರಿಯೆಂದರೆ, ಸೆ. 29ರಂದು ಬಿಬಿಎಂಪಿಯಿಂದ ಎಂದು ಹೇಳಿಕೊಂಡು ಕರೆ ಮಾಡಿದವರು, ‘ನಿಮಗೆ ಕೋವಿಡ್‌ ದೃಢಪಟ್ಟಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಸಿದ್ಧವಾಗಿ ಎಂದರು. ಸತತ ಮೂರು ದಿನಗಳು, ದಿನಕ್ಕೆ ಹತ್ತಾರು ಜನ ಈ ರೀತಿ ಕರೆ ಮಾಡುತ್ತಿದ್ದರು’ ಎಂದು ಅವರು ಅಳಲು ತೋಡಿಕೊಂಡರು. 

‘ಕಿದ್ವಾಯಿ ಮೆಮೊರಿಯಲ್‌ ಇನ್‌ಸ್ಟಿಟ್ಯೂಟ್ ಆಫ್‌ ಆಂಕಾಲಜಿ’ ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಮೂವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ವರದಿ ಬಂದಿದೆ. ರೋಗಿಗಳ ಸಂಖ್ಯೆಗಳನ್ನೂ (ಬಿಯು–220720, ಬಿಯು–220721, ಬಿಯು–220722) ನೀಡಲಾಗಿದೆ. 

‘ವಾಣಿ ಮತ್ತು ಅವರ ಸಂಬಂಧಿಕರಿಗೆ ಬಿಬಿಎಂಪಿಯಿಂದ ನಿತ್ಯ ಹತ್ತಾರು ಕರೆಗಳು ಬರುತ್ತಿದ್ದವು. ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ವಾಣಿ ಮತ್ತು ಸಂಬಂಧಿಕರಿಂದ ಈ ಬಗ್ಗೆ ದೂರು ಕೊಡಿಸಿದೆ. ಆ ನಂತರ ಕರೆಗಳು ಬರುವುದು ಕಡಿಮೆಯಾಗಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಹೇಳಿದರು. 

‘ಮಾದರಿ ನೀಡದೆ ವರದಿ ಬರಲು ಸಾಧ್ಯವಿಲ್ಲ, ಯುವತಿಯರು ಸುಳ್ಳು ಹೇಳುತ್ತಿರಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಬನಶಂಕರಿ ಮೆಟ್ರೊ ನಿಲ್ದಾಣದ ಎದುರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ  ಸೆ.24ರಂದು ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ, ಈ ಯುವತಿಯರು ಮಾದರಿ ನೀಡಿದ್ದಾರೋ, ಇಲ್ಲವೋ ಎಂಬುದು ತಿಳಿಯುತ್ತದೆ’ ಎಂದು ಅವರು ಹೇಳಿದರು.

‘ದೂರನ್ನು ಸ್ವೀಕರಿಸಲಾಗಿದೆ. ಈ ಬಗ್ಗೆ ಮಾಹಿತಿ ಒದಗಿಸುವಂತೆ ಬಿಬಿಎಂಪಿಗೆ ನೋಟಿಸ್‌ ಕಳುಹಿಸಲಾಗಿದೆ’ ಎಂದು ಕುಮಾರಸ್ವಾಮಿ ಲೇಔಟ್ ಠಾಣೆಯ ಇನ್‌ಸ್ಪೆಕ್ಟರ್ ಹೇಳಿದರು. 

‘ಪರಿಶೀಲನೆ ಮಾಡಿಸಲಾಗುತ್ತಿದೆ’ 

‘ದೂರವಾಣಿ ಸಂಖ್ಯೆ ಕೊಟ್ಟಿದ್ದಾರೆ, ಒಟಿಪಿಯನ್ನೂ ಹೇಳಿದ್ದಾರೆ. ಒಟಿಪಿ ಕೊಡದೆ ಏನೂ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಜನರ ಮಾದರಿಗಳು ಇರುವುದರಿಂದ ಬೇಗ ಪತ್ತೆ ಹಚ್ಚುವುದು ಕಷ್ಟ. ಈ ಯುವತಿಯರು ಮಾದರಿ ನೀಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ನಂತರವೇ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು