ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ವಿಳಂಬವೇ ಕೋವಿಡ್ ಹೆಚ್ಚಲು ಕಾರಣ

ನಗರದಲ್ಲಿ ದಿನಕ್ಕೆ 5 ಸಾವಿರ ಜನರ ‌ಗಂಟಲು ದ್ರವ ಮಾತ್ರ ಪರೀಕ್ಷೆ
Last Updated 10 ಜುಲೈ 2020, 21:32 IST
ಅಕ್ಷರ ಗಾತ್ರ

ಬೆಂಗಳೂರು:ಕೊರೊನಾ ಸೋಂಕು ಶಂಕಿತರ ಪರೀಕ್ಷಾ ವರದಿ ತಡವಾಗುತ್ತಿರುವುದು ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.

ನಗರದಲ್ಲಿ ದಿನಕ್ಕೆ ಪರೀಕ್ಷೆಗಾಗಿ 7,500 ಜನರಿಂದ ಗಂಟಲು ದ್ರವ ಪಡೆಯಲಾಗುತ್ತಿದೆ. ಇದರಲ್ಲಿ 5 ಸಾವಿರ ಜನರ ಗಂಟಲು ದ್ರವ ಮಾತ್ರ ಪರೀಕ್ಷೆಯಾಗುತ್ತಿವೆ. ಬಾಕಿ ಉಳಿಯುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಆರಂಭದಲ್ಲಿ ಒಂದು ದಿನ ಅಥವಾ ಹೆಚ್ಚೆಂದರೆ ಎರಡು ದಿನದಲ್ಲಿ ಪರೀಕ್ಷಾ ವರದಿ ಸೋಂಕು ಶಂಕಿತರ ಕೈಸೇರುತ್ತಿತ್ತು. ಈಗ ವರದಿ ಬರಲು ಕನಿಷ್ಠ 4ರಿಂದ 5 ದಿನಗಳೇ ಬೇಕಾಗಿದೆ. ಸೋಂಕಿನ ಲಕ್ಷಣ ಇದ್ದು ಪರೀಕ್ಷೆಗೆ ಒಳಪಟ್ಟವರು ವರದಿ ಬರುವ ತನಕ ಬೀದಿ, ಮಾರುಕಟ್ಟೆಗಳಲ್ಲಿ ಸುತ್ತಾಡುತ್ತಿದ್ದಾರೆ. ಸೋಂಕು ದೃಢಪಡದ ಕಾರಣಕ್ಕೆ ಮನೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ಕುಟುಂಬದವರಿಗೆ ಹಾಗೂ ರೋಗ ಲಕ್ಷಣ ಇದ್ದವರು ಓಡಾಡಿದ ಜಾಗದಲ್ಲಿ ಸೋಂಕು ಹರಡಲು ಕಾರಣವಾಗಿದೆ. ಬೆಂಗಳೂರಿನಲ್ಲಿ ಸೋಂಕಿನ ಸಂಖ್ಯೆ ಏಕಾಏಕಿ ಏರಲು ವರದಿ ವಿಳಂಬವೇ ಕಾರಣ ಎನ್ನಲಾಗಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವ ಕಾರಣ ಅವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಒದಗಿಸಲು ಬಿಬಿಎಂಪಿ ಪರದಾಡುತ್ತಿದೆ. ಹಾಸಿಗೆ ಸೌಲಭ್ಯ ಇಲ್ಲದ ಕಾರಣಕ್ಕಾಗಿಯೇ ಸೋಂಕಿತರಿಗೆ ತಡವಾಗಿ ಮಾಹಿತಿ ನೀಡಲಾಗುತ್ತಿದೆ ಎಂಬ ಆರೋಪಗಳೂ ಇವೆ.‌ಆದರೆ, ಇದನ್ನು ನಿರಾಕರಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಪರೀಕ್ಷಾ ಸಾಮರ್ಥ್ಯ ಕಡಿಮೆ ಇರುವುದೇ ವಿಳಂಬಕ್ಕೆ ಕಾರಣ ಎನ್ನುತ್ತಾರೆ.

‘ಸೋಂಕಿನ ಲಕ್ಷಣ ಕಾಣಿಸಿಕೊಂಡವರು ಆಸ್ಪತ್ರೆಗಳು, ಪ್ರಯೋಗಾಲಯಗಳಲ್ಲಿ ಗಂಟಲ ದ್ರವ ಪರೀಕ್ಷೆಗೆ ಕೊಟ್ಟರೆ 3–4ದಿನವಾದರೂ ಕೊಡುವುದಿಲ್ಲ. ವರದಿ ಕೇಳಿದರೆ, ಬಿಬಿಎಂಪಿಗೆ ಕಳಿಸಲಾಗಿದೆ ಎಂಬ ಉತ್ತರ ದೊರೆಯುತ್ತದೆ. ತಮ್ಮ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬರಲಿ ಎಂಬ ಅಪೇಕ್ಷೆ ಬಹುತೇಕರಲ್ಲಿ ಇರುತ್ತದೆ. ವರದಿಯೇ ಕೈಸೇರದಿದ್ದಾಗ ಸಹಜವಾಗಿ ಆತಂಕ ಎದುರಾಗುತ್ತದೆ. ಯಾರಿಂದಲೂ ಇದಕ್ಕೆ ಸಮರ್ಪಕ ಉತ್ತರ ಸಿಗುತ್ತಿಲ್ಲ’ ಎಂದು ಪರೀಕ್ಷೆಗಾಗಿ ಕಾಯುತ್ತಿರುವ ಬಿಟಿಎಂ ಲೇಔಟ್‌ನ ಒಬ್ಬರು ಹೇಳಿದರು.

ವರದಿ ವಿಳಂಬವಾಗುತ್ತಿರುವುದರಿಂದಾಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲೂ ಹೆಚ್ಚಿನ ಜನ ಸೇರುವಂತಾಗಿದೆ. ತಮ್ಮ ವರದಿ ಬಂದಿದೆಯೇ ಎಂದು ತಿಳಿದುಕೊಳ್ಳಲು ಜನ ಹೋಗುತ್ತಿದ್ದಾರೆ. ಹೀಗೆ ಹೆಚ್ಚಿನ ಜನ ಸೇರುವುದು ರೋಗ ಹರಡಲು ಕಾರಣವಾಗುತ್ತಿದೆ ಎಂದೂ ಹೇಳಲಾಗುತ್ತಿದೆ.

‘ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಐಸಿಎಂಆರ್ ‌(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್‌) ಪೋರ್ಟಲ್‌ನಲ್ಲಿ ಅನುಮೋದನೆಗೊಂಡ ನಂತರವೇ ಸೋಂಕಿತರಿಗೆ ಮಾಹಿತಿ ನೀಡಬೇಕು ಎಂದು ಹೊಸದಾಗಿ ನಿಯಮ ರೂಪಿಸಲಾಗಿದೆ. ಎಲ್ಲಿಯೇ ಪರೀಕ್ಷೆ ಮಾಡಿದರೂ ಅದರ ವರದಿಯನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.ಇಡೀ ದೇಶದ ಮಾಹಿತಿಗಳನ್ನು ಅಲ್ಲಿ ಅನುಮೋದಿಸಬೇಕಾಗಿರುವುದರಿಂದ ವರದಿ ನೀಡಲು ವಿಳಂಬವಾಗುತ್ತಿದೆ' ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ವಿವರಿಸಿದರು.

ಇಂದಿನಿಂದ ಆ್ಯಂಟಿಜೆನ್ ಪರೀಕ್ಷೆ

ಪರೀಕ್ಷೆ ನಡೆಸಿದ 15ರಿಂದ 20 ನಿಮಿಷಗಳಲ್ಲಿ ವರದಿ ಪಡೆಯಲು ಸಾಧ್ಯವಿರುವ ಆ್ಯಂಟಿಜೆನ್ ಪರೀಕ್ಷೆ ಶನಿವಾರದಿಂದ ಆರಂಭವಾಗಲಿದೆ.

‘ಇದಕ್ಕಾಗಿ 1 ಲಕ್ಷ ಪರೀಕ್ಷಾ ಕಿಟ್‌ಗಳು ಗುರುವಾರವೇ ಬಂದಿವೆ. ಮುಂದಿನ ದಿನಗಳಲ್ಲಿ ಪರೀಕ್ಷಾ ವರದಿ ಬರುವುದು ವಿಳಂಬ ಆಗುವುದಿಲ್ಲ’ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜತೆ ಜತೆಗೆ ಸ್ಯಾಂಪಲ್ ಪೂಲಿಂಗ್‌ ಮಾದರಿಯನ್ನೂ ಅನುಸರಿಸಲು ಸಿದ್ಧತೆ ನಡೆದಿದೆ. ಗಂಟಲು ದ್ರವ ಪಡೆದಾಗಲೇ ರೋಗ ಲಕ್ಷಣ ಇದ್ದವರ ಮಾದರಿಯನ್ನು ಒಂದು ಗುಂಪು, ಇಲ್ಲದವರನ್ನು ಇನ್ನೊಂದು ಗುಂಪು ಮಾಡಲಾಗುತ್ತದೆ ಎಂದರು.

‘ರೋಗ ಲಕ್ಷಣ ಇಲ್ಲದ 5 ಜನರ ಗಂಟಲ ದ್ರವವನ್ನು ಒಂದೇ ಟೆಸ್ಟ್‌ಟ್ಯೂಬ್‌ನಲ್ಲಿ ಹಾಕಿ ಪರೀಕ್ಷೆ ಮಾಡಲಾಗುತ್ತದೆ. ಐವರಿಗೂ ನೆಗೆಟಿವ್ ವರದಿ ಬಂದರೆ ಒಂದೇ ಬಾರಿ ಐದು ಜನರ ಪರೀಕ್ಷೆ ನಡೆಸಿದಂತೆ ಆಗಲಿದೆ. ಪಾಸಿಟಿವ್ ಬಂದರೆ ಅದಾಗಲೇ ಸಂಗ್ರಹಿಸಿರುವ ಗಂಟಲು ದ್ರವವನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಮಾರ್ಗದ ಮೂಲಕ ಮುಂದಿನ ಒಂದು ವಾರದಲ್ಲಿ ದಿನಕ್ಕೆ25 ಸಾವಿರದಿಂದ 30 ಸಾವಿರ ಜನರ ಕೊರೊನಾ ಪರೀಕ್ಷೆ ನಡೆಸುವ ಗುರಿ ಇದೆ’ ಎಂದು ವಿವರಿಸಿದರು.

ಹಾಸಿಗೆ–ಆತಂಕ ಬೇಡ: ‘ಖಾಸಗಿ ಆಸ್ಪತ್ರೆಗಳೊಂದಿಗೆ ಶುಕ್ರವಾರ ಮತ್ತೊಮ್ಮೆ ಸಭೆ ನಡೆಸಲಾಗಿದ್ದು, ಶೇ 50ರಷ್ಟು ಹಾಸಿಗೆಗಳನ್ನು ಬಿಟ್ಟುಕೊಡಲು ಅವುಗಳು ಒಪ್ಪಿಕೊಂಡಿವೆ. ಇವುಗಳ ಬಗ್ಗೆ ಕೇಂದ್ರೀಕೃತ ಮಾಹಿತಿ ಕೊಡುವ ವ್ಯವಸ್ಥೆ ಒಂದೆರಡು ದಿನಗಳಲ್ಲಿ ಆರಂಭವಾಗಲಿದೆ. ಸದ್ಯ ನಗರದ ವಿವಿಧ ಆಸ್ಪತ್ರೆಗಳಲ್ಲಿ 2,391 ಹಾಸಿಗೆಗಳು ಲಭ್ಯ ಇವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸುದ್ದಿಗಾರರಿಗೆ ತಿಳಿಸಿದರು.

ಮನೆಯಲ್ಲೇ ಸುರಕ್ಷಿತವಾಗಿರಿ: ‘ಯಾವುದೇ ರೋಗ ಲಕ್ಷಣ ಇಲ್ಲದವರಿಗೆ ಕೋವಿಡ್‌ ಸೋಂಕು ತಗಲಿದರೆ ಅವರು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದು ಸೋಂಕಿನಿಂದ ಮುಕ್ತರಾಗಬಹುದು. ಭಯಪಡುವ ಅಗತ್ಯವೇ ಇಲ್ಲ. ಹೀಗೆ ಮಾಡಿದ್ದೇ ಆದರೆ ಆಸ್ಪತ್ರೆಗಳಲ್ಲಿನ ಒತ್ತಡ ನಿವಾರಣೆಯಾಗುತ್ತದೆ’ ಎಂದು ಶ್ವಾಸಕೋಶ ತಜ್ಞ ಡಾ.ಸತೀಶ್ ಹೇಳಿದರು.

ಕೋವಿಡ್‌: ಮೃತರ ಸಂಖ್ಯೆ 206ಕ್ಕೆ ಏರಿಕೆ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಜತೆಗೆ ಸೋಂಕಿನಿಂದ ಮೃತಪಡುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದ್ದು, ಮತ್ತೆ 29 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ 206ಕ್ಕೆ ಏರಿಕೆಯಾಗಿದೆ.

ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಿದ ಬೆನ್ನಲ್ಲಿಯೇ ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಹೊಸದಾಗಿ 1,447 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 15,329ಕ್ಕೆ ತಲುಪಿದೆ. 10 ದಿನಗಳಲ್ಲೇ 10,774 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 111 ಮೃತಪಟ್ಟಿದ್ದಾರೆ.

ಸದ್ಯ 11,687 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಹಾಸಿಗೆ ಭರ್ತಿಯಾಗಿದೆ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳು ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿದ್ದರೆ, ಖಾಸಗಿ ಆಸ್ಪತ್ರೆಗಳು ಹಾಸಿಗೆಯಿಲ್ಲ ಎಂದು ರೋಗಿಗಳನ್ನು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸುತ್ತಿವೆ. ಹೀಗಾಗಿ ಆಸ್ಪತ್ರೆಗಳಲ್ಲಿ ಚೇತರಿಸಿಕೊಂಡವರನ್ನು ಬೇಗ ಮನೆಗೆ ಕಳುಹಿಸಲಾಗುತ್ತಿದೆ. ಶುಕ್ರವಾರ ಒಂದೇ ದಿನ 601 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ 3,435 ಮಂದಿ ಗುಣಮುಖರಾಗಿದ್ದಾರೆ.

ನಗರದಲ್ಲಿ ಮೃತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲಿಯೇ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆ ಕೂಡ ಏರಿಕೆಯಾಗಿದೆ. ಸದ್ಯ 301 ರೋಗಿಗಳಿಗೆ ಐಸಿಯುವಿನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

***

ಪ್ರಯೋಗಾಲಯದಿಂದ ವರದಿ ಬಂದ ಕೂಡಲೇ ಸೋಂಕಿತರಿಗೆ ಮಾಹಿತಿ ನೀಡುತ್ತೇವೆ. ನಂತರ 6 ಗಂಟೆಯ ಒಳಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ

-ಬಿ.ಎಚ್. ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT