ಶನಿವಾರ, ಅಕ್ಟೋಬರ್ 24, 2020
18 °C
ಜನವರಿ ವೇಳೆಗೆ ಶೇ 50ರಷ್ಟು ಮಂದಿಗೆ ಸೋಂಕು * ದೆಹಲಿಯಂತೆ ರಾಜ್ಯದಲ್ಲೂ ಸೋಂಕಿತರ ಪ್ರಮಾಣ ಹೆಚ್ಚಳ

ಕರ್ನಾಟಕದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಜನವರಿಗೆ ಗರಿಷ್ಠ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನ ಮುನ್ಸೂಚನೆ ನೀಡುವ ಸಲುವಾಗಿ ಗಣಿತವಿಜ್ಞಾನದ ಅತ್ಯಾಧುನಿಕ ವಿಧಾನಗಳನ್ನು ಬಳಸಿ ವಿಜ್ಞಾನಿಗಳು ವಿಶ್ಲೇಷಣೆಗಳನ್ನು ನಡೆಸುತ್ತಿದ್ದಾರೆ. 2021ರ ಜನವರಿಯಲ್ಲಿ ಶೇ 50ರಷ್ಟು ಜನರು ಈ ಸೋಂಕಿಗೆ ಒಳಗಾಗಬಹುದು ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.

ಭಾರತ ಮತ್ತು ಯೂರೋಪ್‌ನಲ್ಲಿ ನಿರ್ದಿಷ್ಟ ಸಂಖ್ಯೆಯ ಜನರ ರಕ್ತದ್ರವದ ಮಾದರಿ ಬಳಸಿ ನಡೆಸಿರುವ ಸಮೀಕ್ಷೆಗಳ (ಸೆರೊ ಸರ್ವೆ) ಆಧಾರದಲ್ಲಿ, ಅದರಲ್ಲೂ ಕೋವಿಡ್‌ನ ಪ್ರತಿಯೊಂದು ಪ್ರಕರಣ ಪತ್ತೆಯಾದಾಗ ಅವರಿಂದ ಎಷ್ಟು ಅಜ್ಞಾತ ಮಂದಿಗೆ ಸೋಂಕು ಹರಡಿರಬಹುದು ಎಂಬ ಲೆಕ್ಕಾಚಾರಕ್ಕೆ ಅನುಗುಣವಾಗಿ ಈ ಅತ್ಯಾಧುನಿಕ ವಿಶ್ಲೇಷಣೆಯನ್ನು ನಡೆಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಕಂಪ್ಯೂಟೇಷನಲ್‌ ಆ್ಯಂಡ್‌ ಡೇಟಾ ಸೈನ್ಸ್‌ ವಿಭಾಗದ ಮುಖ್ಯಸ್ಥರಾಗಿರುವ ಸಹಪ್ರಾಧ್ಯಾಪಕ ಡಾ.ಶಶಿಕುಮಾರ್‌ ಗಣೇಶನ್‌, ‘ಈಗಿನ ಬೆಳವಣಿಗೆ ದರದ ಪ್ರಕಾರ ನಿರ್ದಿಷ್ಟ ಜನಸಂಖ್ಯೆಯಲ್ಲಿ ಪ್ರತಿ ಕೋವಿಡ್‌ ಪ್ರಕರಣ ಪತ್ತೆಯಾದಾಗಲೂ ಅದರ 10 ಪಟ್ಟು ಮಂದಿಗೆ ಸೋಂಕು ಹಬ್ಬಿರುತ್ತದೆ’ ಎಂದು ವಿವರಿಸಿದರು. ಅವರು ಪಾರ್ಷಿಯಲ್‌ ಡಿಫರೆನ್ಷಿಯಲ್‌ ಈಕ್ವೇಷನ್‌ (ಪಿಡಿಎಫ್‌) ಆಧರಿತ ಮಾದರಿಯನ್ನು ಅಭಿವೃದ್ಧಿಪಡಿಸಲು ನೆರವಾಗಿದ್ದ ಗಣಿತವಿಜ್ಞಾನಿ.

‘ಸೋಂಕು ಹಬ್ಬುವಿಕೆ ಅತ್ಯಂತ ಕೆಟ್ಟ ಸ್ಥಿತಿ ತಲುಪುವಾಗ ನಿರ್ದಿಷ್ಟ ಜನಸಂಖ್ಯೆಯಲ್ಲಿ ಕೋವಿಡ್‌ ದೃಢಪಟ್ಟ ಪ್ರತಿ ವ್ಯಕ್ತಿಯ ಮೂಲಕ 20 ಮಂದಿಗೆ ಸೋಂಕು ಹಬ್ಬುತ್ತದೆ. ಅದರ ನಿಯಂತ್ರಣಕ್ಕೆ ಲಸಿಕೆಯೂ ಇರುವುದಿಲ್ಲ. 2021ರ ಜನವರಿಯಲ್ಲಿ ಅಥವಾ ಏಪ್ರಿಲ್‌ನಲ್ಲಿ ಲಸಿಕೆ ಲಭ್ಯವಾಗಬಹುದು ಎಂಬ ಆಶಯವನ್ನು ಇಟ್ಟುಕೊಂಡು ಬೇರೆ ಮಾದರಿಗಳನ್ನು ರೂಪಿಸಲಾಗಿದೆ’ ಎಂದರು. 

‘ಕೋವಿಡ್‌ ಹಬ್ಬುವಿಕೆ ಕೆಟ್ಟ ಸ್ಥಿತಿಯನ್ನು ತಲುಪುವುದು ಒಂದು ರೀತಿಯಲ್ಲಿ ಒಳ್ಳೆಯದೇ. ಹೆಚ್ಚು ಮಂದಿ ಸೋಂಕಿತರಾಗುವುದೆಂದರೆ ಈ ಸಾಂಕ್ರಾಮಿಕ ರೋಗವು ಬೇಗ ಕೊನೆಯಾಗಲಿದೆ’ ಎಂದರ್ಥ ಎಂದು ಡಾ. ಗಣೇಶನ್‌ ಸ್ಪಷ್ಟಪಡಿಸಿದರು. 

ಯೂರೋಪಿನಲ್ಲಿ ನಡೆಸಿರುವ ಅನೇಕ ಸೆರೊ ಸರ್ವೆಗಳ ಪ್ರಕಾರ ಕೋವಿಡ್‌ ಪತ್ತೆಯಾಗುವ ಪ್ರತಿ ವ್ಯಕ್ತಿಯಿಂದ ಹೆಚ್ಚೂ ಕಡಿಮೆ 25 ಅಜ್ಞಾತ ವ್ಯಕ್ತಿಗಳಿಗೆ ಸೋಂಕು ಹರಡುತ್ತಿದೆ. ಭಾರತದಲ್ಲಿ ಮೊದಲ ಸುತ್ತಿನಲ್ಲಿ ನಡೆದಿದ್ದ ಸೋಂಕು ಹರಡುವಿಕೆಯ ಸೆರೋ ಸರ್ವೆಯ ಪ್ರಕಾರ ಪ್ರತಿ ಸೋಂಕಿತ ವ್ಯಕ್ತಿಯಿಂದ 100 ಮಂದಿಗೆ ಸೋಂಕು ಹರಡುತ್ತದೆ ಎಂಬ ಅಂಶ ಪತ್ತೆಯಾಗಿತ್ತು. 

ಕರ್ನಾಟಕದಲ್ಲಿ ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡುತ್ತಿದೆ ಎಂಬ ಅನುಪಾತ ಇನ್ನೂ ನಿಗೂಢ. ಏಕೆಂದರೆ ಇಲ್ಲಿ ಈಗಷ್ಟೇ ಮೊದಲ ಹಂತದ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಸೋಂಕು ವಿಜ್ಞಾನಿ ಡಾ.ಗಿರಿಧರ ಬಾಬು ಪ್ರಕಾರ ರಾಷ್ಟ್ರೀಯ ಸೆರೊ ಸರ್ವೆಯ ಫಲಿತಾಂಶಗಳ ಹೇಳುವುದಾದರೆ ಇಲ್ಲೂ ಕೋವಿಡ್‌ ಹರಡುವಿಕೆ ಶೀಘ್ರದಲ್ಲೇ ಉತ್ತುಂಗವನ್ನು ತಲುಪಲಿದೆ.

ಈ ಮಾದರಿಯ ಪ್ರಕಾರ ಒಬ್ಬ ವ್ಯಕ್ತಿಯಿಂದ 20 ಮಂದಿಗೆ ಸೋಂಕು ಹರಡುವುದೇ ಅತ್ಯಂತ ಕೆಟ್ಟ ಸ್ಥಿತಿ ಎಂದು ಪರಿಗಣಿಸಿದರೆ ರಾಜ್ಯದಲ್ಲಿ ಆ. 28ರಿಂದ 30ರ ನಡುವೆ ಸೋಂಕು ಪ್ರಸರಣವು ಉತ್ತುಂಗ ಹಂತವನ್ನು ತಲುಪಿಯಾಗಿದೆ. ಅಂದರೆ, ರಾಜ್ಯದಲ್ಲಿ ಪ್ರತಿ ಸೋಂಕಿತ ವ್ಯಕ್ತಿಯಿಂದ ಸೋಂಕು ಹಬ್ಬುವಿಕೆ ಅನುಪಾತವು 20 ಅಲ್ಲ, ಅದಕ್ಕಿಂತಲೂ ಹೆಚ್ಚು ಎಂಬುದು ಇದರರ್ಥವೇ? 

‘ಅದು ಹಾಗಾಗಬೇಕೆಂದೇನಿಲ್ಲ’ ಎನ್ನುತ್ತಾರೆ ಡಾ.ಬಾಬು. ‘ಮೊದಲ ರಾಷ್ಟ್ರೀಯ ಸೆರೊ ಸರ್ವೆಯ ಫಲಿತಾಂಶವು ಪರೀಕ್ಷೆಯ ಪ್ರಮಾಣ ಹೆಚ್ಚಳ ಮತ್ತು ಇತರ ನಿಯಂತ್ರಣ ಕ್ರಮಗಳಿಗೆ ಮುನ್ನವೇ ಪ್ರಕಟವಾಗಿತ್ತು. ಹಾಗಾಗಿ ಈಗ ನಡೆಯುತ್ತಿರುವ ಎರಡನೇ ಹಂತದ ಸರ್ವೆಯು ಇನ್ನಷ್ಟು ನಿಖರ ಫಲಿತಾಂಶ ನೀಡಲಿದೆ’ ಎಂದು ಅವರು ತಿಳಿಸಿದರು.

ಮತ್ತೆ ಏರಿಕೆ: ‘ರಾಜ್ಯದಲ್ಲಿಯೂ ಸೋಂಕು ಹಬ್ಬುವಿಕೆ ಒಂದೇ ಪ್ರಮಾಣದಲ್ಲಿ ದೀರ್ಘಕಾಲ ಮುಂದುವರಿಯಲಿದೆ. ದೆಹಲಿಯಲ್ಲಿ ಆದಂತೆ ಇಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಖಂಡಿತಾ ಮತ್ತೆ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಜನ ಸೋಂಕಿಗೆ ಒಳಗಾಗುವ ಪ್ರಮಾಣವೂ ಹೆಚ್ಚಲಿದೆ’ ಎಂದು ವಿವರಿಸಿದರು.  

ರಾಜ್ಯದಲ್ಲಿ ಜ.10 ಬಳಿಕ ಉತ್ತುಂಗಕ್ಕೆ?
ಈಗಿನ ಬೆಳವಣಿಗೆ ದರ’ವನ್ನು ಆಧರಿಸಿದ ಮಾದರಿಯ ಪ್ರಕಾರ, ಕರ್ನಾಟಕದಲ್ಲಿ 2021ರ ಜನವರಿ 10ರಿಂದ 23ರ ನಡುವೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಉತ್ತುಂಗ ತಲುಪಲಿದೆ. ಅಷ್ಟು ಹೊತ್ತಿಗೆ ರಾಜ್ಯದಲ್ಲಿ 1.54 ಲಕ್ಷ ಸಕ್ರಿಯ ಪ್ರಕರಣಗಳು ಇರಲಿವೆ ಹಾಗೂ ರೋಗ ಗುಣಮುಖರಾದವರ ಸಂಖ್ಯೆ  16.9 ಲಕ್ಷ ತಲುಪಲಿದೆ. ಈ ಸೋಂಕಿನಿಂದ ಸತ್ತವರ ಸಂಖ್ಯೆ 18 ಸಾವಿರ ತಲುಪಲಿದೆ ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. 

ಸೋಮವಾರದ ಕೋವಿಡ್‌ನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 95,335 ಸಕ್ರಿಯ ಪ್ರಕರಣಗಳಿವೆ. 4.2 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ 8,145 ಮಂದಿ ಕೋವಿಡ್‌ನಿಂದ ಕೊನೆಯುಸಿರೆಳೆದಿದ್ದಾರೆ.

‘ಕೋವಿಡ್‌ ಹಬ್ಬುವಿಕೆ ಕೆಟ್ಟ ಸ್ಥಿತಿಯನ್ನು ತಲುಪುವುದು ಒಂದು ರೀತಿಯಲ್ಲಿ ಒಳ್ಳೆಯದೇ. ಹೆಚ್ಚು ಮಂದಿ ಸೋಂಕಿತರಾಗುವುದೆಂದರೆ ಈ ಸಾಂಕ್ರಾಮಿಕ ರೋಗವು ಬೇಗ ಕೊನೆಯಾಗಲಿದೆ ಎಂದರ್ಥ’ ಎಂದು ಡಾ. ಗಣೇಶನ್‌ ಸ್ಪಷ್ಟಪಡಿಸಿದರು. 

ಸೋಂಕು ಹೆಚ್ಚಳ ಪ್ರಮಾಣ: ಪ್ರತಿವಾರ 1 ಸಾವಿರದಷ್ಟು ಏರಿಕೆ
ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳನ್ನು ಬಿಂಬಿಸುವ ರೇಖೆಯು ಏರುಗತಿಯಲ್ಲಿದೆ ಎಂಬುದನ್ನು ಒಂದು ವಾರದ ಮುನ್ಸೂಚನೆ ನೀಡುವ ಇನ್ನೊಂದು ಮಾದರಿಯು ಪ್ರತಿಪಾದಿಸುತ್ತಿದೆ. ನಗರದಲ್ಲಿ ಸೆ. 28ರ ವೇಳೆಗೆ 2.23 ಲಕ್ಷ ಕೋವಿಡ್‌ ಪ್ರಕರಣಗಳು ಪತ್ತೆಯಾಗಲಿವೆ. ಸೆ. 21ರಂದು ಪ್ರಕರಣಗಳ ಪ್ರಮಾಣ 25,645ಕ್ಕೆ ಹೆಚ್ಚಿದೆ. ಪ್ರತಿವಾರವೂ ಸೋಂಕಿನ ಹೆಚ್ಚಳ ಪ್ರಮಾಣವು 1 ಸಾವಿರದಷ್ಟು ಏರಿಕೆಯಾಗುತ್ತಲೇ ಇದೆ ಎಂಬುದನ್ನು ಏಳು ದಿನಗಳ ಅಂಕಿಅಂಶಗಳು ತೋರಿಸುತ್ತಿವೆ. 

ಈ ಯಶಸ್ವಿ ಮಾದರಿಯನ್ನು ಸಿದ್ಧಪಡಿಸಲು ನೆರವಾಗಿರುವ ಅಶೋಕ ವಿಶ್ವವಿದ್ಯಾಲಯದ ಡಾ.ಗೌತಮ್‌ ಮೆನನ್‌, ‘ಈಗಿನ ಸಂಖ್ಯೆಗಳನ್ನು ಆಧರಿಸಿ ಮುಂದಿನ ವಾರದಲ್ಲಿ ಏನಾಗಲಿದೆ ಎಂದು ಮುನ್ಸೂಚನೆ ನೀಡುವುದು ಯಾವತ್ತೂ ಒಳ್ಳೆಯದು’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು