ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಪಡೆಯದಿದ್ದರೂ ಪ್ರಮಾಣಪತ್ರ!

ಗೊಂದಲದಲ್ಲಿ ಮೊದಲ ಡೋಸ್ ಪಡೆದವರು l ತಾಂತ್ರಿಕ ಕಾರಣಗಳಿಂದ ಸಮಸ್ಯೆ
Last Updated 6 ಆಗಸ್ಟ್ 2022, 19:47 IST
ಅಕ್ಷರ ಗಾತ್ರ

ಬೆಂಗಳೂರು: ತಪ್ಪಾಗಿ ಮೊಬೈಲ್ ಸಂಖ್ಯೆ ನಮೂದಿಸಿರುವುದೂ ಸೇರಿ ವಿವಿಧ ತಾಂತ್ರಿಕ ಕಾರಣಗಳಿಂದ ಕೋವಿಡ್ ಲಸಿಕೆ ಪಡೆಯದಿದ್ದರೂ ಪ್ರಮಾಣಪತ್ರಗಳು ಸೃಷ್ಟಿಯಾಗುತ್ತಿವೆ.

ನಗರದಲ್ಲಿ 2021ರ ಜ.16 ರಿಂದ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. 2022ರ ಜ.10ರಿಂದ ಮೂರನೇ ಡೋಸ್ ವಿತರಣೆ ಮಾಡಲಾಗುತ್ತಿದೆ. ಎರಡು ಡೋಸ್ ಲಸಿಕೆ ಪಡೆದು ಆರು ತಿಂಗಳಾದವರಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುತ್ತಿದೆ. ಲಸಿಕೆಯ ಡೋಸ್‌ಗಳನ್ನು ಪಡೆದ ಬಳಿಕ ಮೊಬೈಲ್ ಸಂಖ್ಯೆಗೆ ‘ಕೋವಿನ್ ಪೋರ್ಟಲ್‌’ನಲ್ಲಿ ಪ್ರಮಾಣಪತ್ರಗಳು ಸೃಷ್ಟಿಯಾಗುತ್ತವೆ. ಆದರೆ, ಮೊದಲ ಡೋಸ್ ಪಡೆದು, ಎರಡನೇ ಡೋಸ್ ಪಡೆಯದಿದ್ದವರ ಹೆಸರಿನಲ್ಲಿಯೂ ಇತ್ತೀಚೆಗೆ ಲಸಿಕೆ ಪಡೆದಿರುವುದಾಗಿ ಪ್ರಮಾಣಪತ್ರಗಳು ಪೋರ್ಟಲ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ.

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 375 ಸರ್ಕಾರಿ ಕೇಂದ್ರಗಳು ಹಾಗೂ 79 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ. ಅದೇ ರೀತಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 111 ಸರ್ಕಾರಿ ಹಾಗೂ 8 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.

ಗೊಂದಲ ಸೃಷ್ಟಿ: ನಮೂದಿತ ಮೊಬೈಲ್ ಸಂಖ್ಯೆಯ ಮೂಲಕ ‘ಕೋವಿನ್ ಪೋರ್ಟಲ್‌’ನಲ್ಲಿ ಲಸಿಕೆಯ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಲಸಿಕೆ ಪಡೆದ ಕೇಂದ್ರ, ಲಸಿಕೆ ನೀಡಿದವರ ಹೆಸರು ಸೇರಿ ವಿವಿಧ ಮಾಹಿತಿಗಳನ್ನು ಪ್ರಮಾಣಪತ್ರದಲ್ಲಿ ನಮೂದಿಸಲಾಗಿರುತ್ತದೆ. ನಿಗದಿತ ಅವಧಿಯ ಬಳಿಕ ಮೊಬೈಲ್ ಸಂಖ್ಯೆಗೆ ಲಸಿಕೆ ಪಡೆಯುವಂತೆ ದೂರವಾಣಿ ಸಂದೇಶ, ಕರೆಗಳು ಬರಲಿವೆ. ಇಷ್ಟಾಗಿಯೂ ಲಸಿಕೆ ಪಡೆಯದಿದ್ದ ಕೆಲವರ ಹೆಸರಿನಲ್ಲಿ ಪ್ರಮಾಣಪತ್ರಗಳು ಪೋರ್ಟಲ್‌ನಲ್ಲಿ ಸಿಗುತ್ತಿವೆ. ಲಸಿಕೆ ಪಡೆಯದಿದ್ದರೂ ಪ್ರಮಾಣಪತ್ರಗಳು ಸೃಷ್ಟಿಯಾಗುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

ಕೋವಿಡ್ ಎರಡು ಹಾಗೂ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಾಗ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ನಿಗದಿತ ಗುರಿ ನೀಡಿತ್ತು. ಇದರಿಂದಾಗಿಯೇ ಕೆಲ ಕೇಂದ್ರಗಳ ಸಿಬ್ಬಂದಿ ಅವಧಿಯಾದರೂ ಲಸಿಕೆ ಪಡೆಯಲು ಬರದಿದ್ದವರ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ಆರೋಪವಿದೆ.

‘ಮೊದಲ ಡೋಸ್ ಪಡೆದು ಅವಧಿ ಪೂರೈಸಿದರೂ ಎರಡನೇ ಡೋಸ್ ಪಡೆದಿರಲಿಲ್ಲ. ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಬಳಿಕ ಕೋವಿನ್ ಪೋರ್ಟಲ್ ಪರಿಶೀಲಿಸಿದಾಗ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರ ಸೃಷ್ಟಿಯಾಗಿತ್ತು. ಇದರಿಂದಾಗಿ ಮೊದಲ ಡೋಸ್ ಮಾತ್ರ ಪಡೆದರೂ ಎರಡು ಡೋಸ್ ಪಡೆದಿರುವ ಬಗ್ಗೆ ಪ್ರಮಾಣಪತ್ರ ಲಭ್ಯವಾಯಿತು. ಇದೇ ರೀತಿ, ಎರಡನೇ ಡೋಸ್ ಪಡೆಯದ ಕೆಲವರಿಗೆ ಪ್ರಮಾಣಪತ್ರ ದೊರೆತಿದೆ’ ಎಂದು ಗಿರಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದ ಬ್ಯಾಂಕ್ ಕಾಲೊನಿ ನಿವಾಸಿಯೊಬ್ಬರು ತಿಳಿಸಿದರು.

‘ಎರಡನೇ ಡೋಸ್ ಪಡೆದಿರುವ ಬಗ್ಗೆ ಪ್ರಮಾಣಪತ್ರ ಇರುವುದರಿಂದ ಈಗ ಲಸಿಕೆ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ’ ಎಂದರು.

‘ಪ್ರಮಾಣಪತ್ರ ಹೊಂದಿದ್ದರೂ ಲಸಿಕೆ’

‘ಲಸಿಕೆ ಪಡೆಯದಿದ್ದರೂ ಪ್ರಮಾಣಪತ್ರಗಳು ದೊರೆತಿರುವ ಬಗ್ಗೆ ಹಲವರು ವಿಚಾರಿಸಿದ್ದಾರೆ. ಮೊಬೈಲ್ ಸಂಖ್ಯೆ ಆಧಾರದಲ್ಲಿಯೇ ಪ್ರಮಾಣಪತ್ರ ಸೃಷ್ಟಿಸಲಾಗುತ್ತದೆ.ತಪ್ಪಾಗಿ ಮೊಬೈಲ್ ಸಂಖ್ಯೆ ನಮೂದಿಸಿರುವುದೂ ಸೇರಿ ವಿವಿಧ ತಾಂತ್ರಿಕ ಕಾರಣಗಳಿಂದಕೆಲವರಿಗೆ ಲಸಿಕೆ ಪಡೆಯದಿದ್ದರೂ ಪ್ರಮಾಣಪತ್ರ ದೊರೆತಿದೆ. ಕೆಲವರು ಉದ್ದೇಶ ಪೂರ್ವಕವಾಗಿ ತಪ್ಪಾದ ಮೊಬೈಲ್ ಸಂಖ್ಯೆ ನೀಡುತ್ತಾರೆ. ಇದರಿಂದಲೂ ಸಮಸ್ಯೆಯಾಗುತ್ತಿದೆ. ಲಸಿಕೆ ಪಡೆಯದೇ ಪ್ರಮಾಣಪತ್ರ ಹೊಂದಿದ್ದಲ್ಲಿ ಸಮಾಲೋಚನೆ ನಡೆಸಿ, ಲಸಿಕೆ ನೀಡಲಾಗುತ್ತದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಲಸಿಕೆ ವಿಭಾಗದ ನೋಡಲ್ ಅಧಿಕಾರಿ ಡಾ.ಟಿ.ಎಸ್. ರಂಗನಾಥ್ ತಿಳಿಸಿದರು.

****

ಸಮಸ್ಯೆ ಗಮನಕ್ಕೆ ಬಂದಿದೆ. ಆ ರೀತಿ ಪ್ರಮಾಣಪತ್ರ ಹೊಂದಿದವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಿ, ಸಮಸ್ಯೆ ನಿವಾರಿಸಿಕೊಳ್ಳಬಹುದು.

-ಡಾ.ಕೆ.ವಿ. ತ್ರಿಲೋಕ್ ಚಂದ್ರ, ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT