ಬುಧವಾರ, ಜೂನ್ 16, 2021
23 °C

ಕೊರೊನಾ ಗೆದ್ದವರ ಕಥೆ | ನನ್ನನ್ನು ನೋಡಿಕೊಳ್ಳುವ ‘ಕನ್ನಡಿ’ ಒದಗಿಸಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್ ಪೀಡಿತನಾಗಿದ್ದ 74ರ ಹರೆಯದ ನನಗೆ ‘ಸುಧಾರಿಸಿಕೊಂಡು ಬನ್ನಿ’ ಎಂದು ಹೇಳಿದವರಲ್ಲಿ ಕೆಲವರು ಇದ್ದಕ್ಕಿದ್ದಂತೆ ಇಲ್ಲವಾದರು. ಆಸ್ಪತ್ರೆಯಲ್ಲಿ ನನ್ನ ಕೊಠಡಿಯ ಪಕ್ಕದಲ್ಲೇ ಇದ್ದವರೊಬ್ಬರು ನಾನು ಮನೆಗೆ ತೆರಳುವ ಮುನ್ನವೇ ದೂರವಾಗಿದ್ದರು. ಇದನ್ನೆಲ್ಲ ನೋಡಿದರೆ ನಾನೂ ಬದುಕಿಬಿಟ್ಟಿದ್ದೇನೆ ಎನ್ನುವ ಭಾವ ಉಂಟಾಗಿದೆ.’

‘ಕಳೆದ ಏಪ್ರಿಲ್ 4ರಂದು ಜ್ವರ, ತಲೆಭಾರ ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡವು. ಕೂಡಲೇ ಸುಗುಣ ಆಸ್ಪತ್ರೆಗೆ ದಾಖಲಾಗಿ, ಪರೀಕ್ಷೆ ಮಾಡಿಸಿಕೊಂಡೆ. ಕೊರೊನಾ ಸೋಂಕಿತನಾಗಿರುವುದು ದೃಢಪಟ್ಟಿತು. ಐದು ದಿನಗಳು ಅಲ್ಲಿನ ವೈದ್ಯರು ಮತ್ತು ಶುಶ್ರೂಷಕಿಯರು ನೀಡಿದ ಸೇವೆಯಿಂದ ನಾನು ರೋಗಮುಕ್ತನಾಗಿ ಮನೆಗೆ ಬಂದೆ. ಬಳಿಕ 15 ದಿನಗಳು ಮನೆಯಲ್ಲಿಯೇ ನಿಗಾ ವ್ಯವಸ್ಥೆಗೆ ಒಳಗಾದೆ. ಆಗ ನೆರವಾದದ್ದು ನನ್ನ ಶೇಷಾದ್ರಿಪುರ ಮತ್ತು ಸುರಾನಾ ಕಾಲೇಜುಗಳ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿ ಬಳಗ.’

‘ವಾಟ್ಸ್‌ ಆ್ಯಪ್ ಸಂದೇಶಗಳು, ಹಾಸ್ಯ ಚಟಾಕಿಗಳು, ಚರ್ಚೆಗಳು, ಸಂಗೀತದ ತುಣುಕುಗಳು, ಬರವಣಿಗೆ, ಪುಸ್ತಕಗಳು ಹಾಗೂ ದಿನ ಪತ್ರಿಕೆಗಳು ಸಮಯವನ್ನು ಕಳೆಯಲು ಸಹಕಾರಿಯಾದವು. ಸ್ಮಾರ್ಟ್‌ಪೋನ್‌ನ ನೆರವಿನಿಂದ ದೇಶ ವಿದೇಶದ ವಿಭಿನ್ನ ಸಂಗೀತ ರಾಗವನ್ನು ಆಲಿಸಲು ಸಾಧ್ಯವಾಯಿತು. ಈ ಕೋವಿಡ್ ಕಾರಣದಿಂದಲೇ ಎಷ್ಟೊಂದು ಪಡೆದುಕೊಂಡೆ. ನನ್ನನ್ನು ‘ನನ್ನನ್ನಾಗಿ’ ನೋಡಿಕೊಳ್ಳುವ ‘ಕನ್ನಡಿ’ಯನ್ನು ಈ ಕಾಯಿಲೆ ಒದಗಿಸಿತು.’

‘ಜಾತಿ, ಮತ, ಲಿಂಗ, ಬಣ್ಣ ಮತ್ತು ವಯಸ್ಸುಗಳ ಭೇದ ಭಾವ ಇಲ್ಲದೆಯೇ ಎಲ್ಲರನ್ನೂ ಸ್ಪರ್ಶಿಸುವ ಕೋವಿಡ್, ನಾವೆ
ಲ್ಲರೂ ಒಂದೇ ಬುಡದ ‘ಕಟ್ಟು’ ಎನ್ನುವುದನ್ನು ನಮ್ಮ ಅಂತರಂಗದಲ್ಲಿ ಬೇರೂರಿಸಲಿ. ಔಷಧಗಳ ಜತೆಗೆ ನಮ್ಮ ಮೊಬೈಲ್‍ಗಳಲ್ಲಿ ಅಡಗಿರುವ ಕಲಾಜಗತ್ತಿನ ಸಾಂಗತ್ಯವು ಸೋಂಕನ್ನು ತೊಲಗಿಸಲು ಶಕ್ತಿ ನೀಡುವ ಆರೋಗ್ಯವರ್ಧಕ ಎನ್ನುವುದು ನಮ್ಮ ಅರಿವಿನಲ್ಲಿರಲಿ.

–ಪ್ರೊ.ಕೆ.ಈ. ರಾಧಾಕೃಷ್ಣ, ಶಿಕ್ಷಣ ತಜ್ಞ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು