ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸೋಂಕಿತರಾಗುತ್ತಿರುವ ಕೋವಿಡ್ ಯೋಧರು

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ, ಮುಖ್ಯ ಆರೋಗ್ಯಾಧಿಕಾರಿ ಸಹಿತ ಅನೇಕ ಅಧಿಕಾರಿಗಳಿಗೂ ಸೋಂಕು
Last Updated 16 ಜನವರಿ 2022, 19:22 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ನಗರದಲ್ಲಿ ನಿತ್ಯವೂ 20 ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ನಗರದಲ್ಲಿ ದೃಢಪಡುತ್ತಿವೆ. ಇನ್ನೊಂದೆಡೆ ಸೋಂಕು ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ವಿಭಾಗದ ಸಿಬ್ಬಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ಗೆ ಒಳಗಾಗುತ್ತಿರುವುದು ಬಿಬಿಎಂಪಿಗೆ ತಲೆ ನೋವಾಗಿ ಪರಿಣಮಿಸಿದೆ.

ಬಿಬಿಎಂಪಿ ಆರೋಗ್ಯ ವಿಭಾಗದಲ್ಲಿ ವೈದ್ಯರು, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸೇರಿ 3500ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ತಳ ಹಂತದಲ್ಲಿ ಕೋವಿಡ್‌ ಪರೀಕ್ಷೆಗಾಗಿ ಗಂಟಲ ದ್ರವದ ಮಾದರಿ ಸಂಗ್ರಹಿಸುವ ಸಿಬ್ಬಂದಿ, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಡೇಟಾ ಎಂಟ್ರಿ ಸಿಬ್ಬಂದಿ ಸೇರಿದಂತೆ ನಿತ್ಯವೂ ನೂರಾರು ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ.

ಸ್ವತಃ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್, ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಡಾ.ಮನೋರಂಜನ್‌ ಹೆಗ್ಡೆ ಹಾಗೂ ಇದೇ ವಲಯದ ನಾಲ್ವರು ಆರೋಗ್ಯ ವೈದ್ಯಾಧಿಕಾರಿಗಳೂ ಸೇರಿದಂತೆ ಈ ನಿಯಂತ್ರಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳೂ ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದಾರೆ.

‘ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ವ್ಯಾಪ್ತಿಯಲ್ಲಿ 10 ಕ್ಕೂ ಅಧಿಕ ಸಿಬ್ಬಂದಿ ಕೋವಿಡ್‌ ಸೋಂಕಿಗೆ ಒಳಗಾದರು. ಅವರು ಮನೆಯಲ್ಲೇ ಪ್ರತ್ಯೇಕವಾಸದಲ್ಲಿರುವುದರಿಂದ ಉಳಿದ ಸಿಬ್ಬಂದಿ ಮೇಲೆ ಕೆಲಸದ ಹೊರೆ ಹೆಚ್ಚುತ್ತಿದೆ. ಇನ್ನೊಂದೆಡೆ ಸೋಂಕಿಗೆ ಒಳಗಾಗುವ ಸಾರ್ವಜನಿಕರ ಸಂಖ್ಯೆಯೂದಿನೇ ದಿನೇ ಹೆಚ್ಚುತ್ತಿದೆ. ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ವಿಪರೀತ ಕೆಲಸದ ಒತ್ತಡ ಸೃಷ್ಟಿಯಾಗುತ್ತಿದೆ. ವಾರದ ರಜೆಯನ್ನೂ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವೈದ್ಯರೊಬ್ಬರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

‘ಕೆಲವು ಸಿಬ್ಬಂದಿ ಎರಡು ವರ್ಷದಲ್ಲಿ ನಾಲ್ಕೈದು ಬಾರಿ ಸೋಂಕಿತರಾಗಿದ್ದು ಉಂಟು. ಪದೇ ಪದೇ ಕೋವಿಡ್‌ ದೃಢಪಟ್ಟಾಗ ಸಿಬ್ಬಂದಿ ಸ್ಥೈರ್ಯ ಕಳೆದುಕೊಳ್ಳುವುದು ಸಹಜ. ಸೋಂಕಿತರ ಸಂಪರ್ಕಕ್ಕೆ ಬಂದ ಕಾರಣಕ್ಕೆ ಪರೀಕ್ಷೆ ಮಾಡಿಸಿಕೊಂಡ ಸಿಬ್ಬಂದಿಯಲ್ಲಿ ಬಹುತೇಕರಿಗೆ ಸೋಂಕು ದೃಢಪಡುತ್ತಿದೆ. ಅವರಲ್ಲಿ ಹೆಚ್ಚಿನವರಿಗೆ ಸೋಂಕಿನ ಲಕ್ಷಣಗಳಿಲ್ಲ. ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬಹುತೇಕ ಸಿಬ್ಬಂದಿಗೆ ಎದುರಾಗಿಲ್ಲ. ಹಾಗಾಗಿ ಪರಿಸ್ಥಿತಿಯನ್ನುಹೇಗೋ ನಿಭಾಯಿಸುತ್ತಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಮತ್ತೊಬ್ಬ ಅಧಿಕಾರಿ ವಿವರಿಸಿದರು.

‘ಕೋವಿಡ್‌ ನಿಯಂತ್ರಣದಲ್ಲಿ ನಮ್ಮ ವಿಭಾಗದ ಪಾತ್ರವೇ ಮಹತ್ತರವಾದುದು. ಹಾಗಾಗಿ ಸೋಂಕಿತ ಸಿಬ್ಬಂದಿ ಒಂದು ವಾರ ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಒಳಗಾಗುವಂತೆ ನಿರ್ದೇಶನ ನೀಡಿದ್ದೇವೆ. ನಂತರ ಪರೀಕ್ಷೆ ಮಾಡಿಸಿಕೋಡು ಸೋಂಕಿಲ್ಲ ಎಂಬುದು ದೃಢಪಟ್ಟರೆ ಕರ್ತವ್ಯಕ್ಕೆ ಮರಳುವಂತೆ ಸೂಚಿಸಿದ್ದೇವೆ’ ಎಂದು ಡಾ.ಕೆ.ವಿ.ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ನಿಂದ ಗುಣಮುಖರಾದವರು ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ತಳಮಟ್ಟದ ಅಧಿಕಾರಿಗಳಿಗೆ ನೀಡಿದ್ದೇವೆ. ಹಾಗಾಗಿ ಸದ್ಯಕ್ಕೆ ಸೋಂಕು ನಿಯಂತ್ರಣಕ್ಕೆ ಸಿಬ್ಬಂದಿ ಕೊರತೆ ಎದುರಾಗುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ’ ಎಂದು ಅವರು ತಿಳಿಸಿದರು.

ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌, ‘ಆರೋಗ್ಯ ಸಿಬ್ಬಂದಿ ಸೋಂಕಿತರ ಸಂಪರ್ಕಕ್ಕೆ ಬರುವ ಪ್ರಮೇಯ ಹೆಚ್ಚು. ಹಾಗಾಗಿ ಸಹಜವಾಗಿಯೇ ನಮ್ಮವರು ಸೋಂಕಿಗೆ ಒಳಗಾಗುವ ಅಪಾಯ ಜಾಸ್ತಿ. ಹಾಗಾಗಿ ಮೊದಲಿನಿಂದಲೂ ಶೇ 10ರಷ್ಟು ಹೆಚ್ಚುವರಿ ಸಿಬ್ಬಂದಿ ಕರ್ತವ್ಯಕ್ಕೆ ಸನ್ನದ್ಧರಾಗಿರುವಂತೆ ವ್ಯವಸ್ಥೆ ಮಾಡಿಕೊಂಡಿದ್ದೆವು. ಈಗಂತೂ ನಿತ್ಯವೂ 1 ಲಕ್ಷಕ್ಕೂ ಅಧಿಕ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ನಿಭಾಯಿಸಲು ಹೆಚ್ಚುವರಿ ಸಿಬ್ಬಂದಿಯ ನೇಮಕಕ್ಕೆ ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

‘ಎಲ್ಲ ಸಿಬ್ಬಂದಿಯೂ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಈಗಾಗಲೇ ಪಡೆದಿದ್ದಾರೆ. ಹೆಚ್ಚಿನ ಸಿಬ್ಬಂದಿ ಮುನ್ನೆಚ್ಚರಿಕೆ (ಬೂಸ್ಟರ್‌) ಡೋಸ್‌ ಪಡೆದಿದ್ದಾರೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗುವ ಪ್ರಮೇಯ ಕಡಿಮೆ’ ಎಂದರು.

‘ಎನ್‌–95 ಮಾಸ್ಕ್‌ ವಿತರಿಸದ ಸರ್ಕಾರ’

‘ಮೊದಲ ಎರಡು ಕೋವಿಡ್‌ ಅಲೆಗಳಲ್ಲಿ ಆರೋಗ್ಯ ಸಿಬ್ಬಂದಿಗೆ ಸಿಬ್ಬಂದಿಗೆಬಿಬಿಎಂಪಿಯಿಂದಲೇ ಎನ್‌–95 ಮಾಸ್ಕ್ ವಿತರಿಸಲಾಗಿತ್ತು. ಈ ಬಾರಿ ಬಹುತೇಕ ಪಿಎಚ್‌ಸಿಗಳಿಗೆ ಸರ್ಕಾರದಿಂದ ಎನ್‌–95 ಮಾಸ್ಕ್‌ ಪೂರೈಕೆ ಆಗಿಲ್ಲ. ಈ ಮಾಸ್ಕನ್ನು ಒಂದಕ್ಕಿಂತ ಹೆಚ್ಚು ದಿನ ಧರಿಸಲಾಗದು. ಡೇಟಾ ಎಂಟ್ರಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರೆಲ್ಲ ಎನ್‌–95 ಮಾಸ್ಕ್‌ಗಾಗಿ ನಿತ್ಯ ₹ 25ರಿಂದ ₹ 50 ವ್ಯಯಿಸುವುದು ಕಷ್ಟಸಾಧ್ಯ. ಹಾಗಾಗಿ ಬಿಬಿಎಂಪಿಯವರು ಕನಿಷ್ಠ ಪಕ್ಷ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನಾದರೂ ಬಳಸಿಕೊಂಡು, ತಳ ಹಂತದಲ್ಲಿ ಕರ್ತವ್ಯ ನಿರ್ವಹಿಸುವ ಕೋವಿಡ್‌ ಯೋಧರಿಗೆ ಎನ್‌–95 ಮಾಸ್ಕ್‌ ಪೂರೈಸಬೇಕು’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಕೋರಿದರು.

‘ಕೋವಿಡ್‌ ನಿಯಂತ್ರಣ– ಮನೆಯಿಂದಲೇ ನಿಗಾ’

‘ಆರೋಗ್ಯ ವೈದ್ಯಾಧಿಕಾರಿಗಳೂ ಸೇರಿದಂತೆ ಆರೋಗ್ಯ ವಿಭಾಗದ ಅನೇಕ ಅಧಿಕಾರಿಗಳಿಗೂ ಕೋವಿಡ್ ದೃಢಪಟ್ಟಿದೆ. ಸೋಂಕಿತ ಅಧಿಕಾರಿಗಳು ಕರ್ತವ್ಯ ನಿರ್ವಹಣೆ ಮುಂದುವರಿಸಿದ್ದು, ಕೋವಿಡ್‌ ನಿಯಂತ್ರಣ ಕಾರ್ಯಗಳ ಮೇಲೆ ಮನೆಯಿಂದಲೇ ನಿಗಾ ಇಡುತ್ತಿದ್ದಾರೆ’ ಎಂದು ಡಾ.ಬಾಲಸುಂದರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT