ಸೋಮವಾರ, ಜೂನ್ 14, 2021
23 °C
ಕೊರೊನಾ ಸೋಂಕಿನ ಜತೆಗೆ ವಿವಿಧ ಕಾಯಿಲೆ ಕೂಡ ಕಾರಣ

ಬೆಂಗಳೂರು | ಕೋವಿಡ್: ಮನೆಯಲ್ಲೇ ಹೆಚ್ಚುತ್ತಿದೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮನೆಯಲ್ಲಿಯೇ ಮೃತಪಡುತ್ತಿರುವ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಲಾರಂಭಿಸಿದೆ. ಕಳೆದ ಒಂದು ತಿಂಗಳಲ್ಲಿ 172 ಮಂದಿ ತಮ್ಮ ಮನೆಯಲ್ಲೇ ಸಾವು ಕಂಡಿದ್ದಾರೆ. 

ರಾಜ್ಯದಲ್ಲಿ ಮೊದಲ ಕೋವಿಡ್ ಸಾವಿನ ಪ್ರಕರಣ ಮಾ.10ರಂದು ವರದಿಯಾಗಿತ್ತು. ಬಳಿಕ ನಾಲ್ಕು ತಿಂಗಳ ಅವಧಿಯಲ್ಲಿ (ಜೂ.30) ಮೃತರ ಸಂಖ್ಯೆ 246ಕ್ಕೆ ತಲುಪಿತ್ತು. ಮುಂದಿನ ಒಂದು ತಿಂಗಳಲ್ಲಿ 2,166 ಮಂದಿ ಸೋಂಕಿತರಾಗಿ ಮೃತಪಟ್ಟಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 2,412ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ತಡವಾಗಿ ಸೋಂಕು ಪತ್ತೆ, ಹೃದಯಾಘಾತ ಸೇರಿದಂತೆ ವಿವಿಧ ಕಾರಣಗಳಿಂದ ಮನೆಯಲ್ಲಿ ಹಾಗೂ ಆಸ್ಪತ್ರೆಗೆ ಸಾಗುವ ಮಾರ್ಗ ಮಧ್ಯದಲ್ಲಿ ಮೃತಪಡುವವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. 

ಕೋವಿಡ್‌ಗೆ ಮೃತಪಟ್ಟವರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಸೋಂಕಿನ ಜತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಕೂಡ ಬಳಲಿದವರಾಗಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ  ಮನೆಯಲ್ಲಿ ಮೃತಪಟ್ಟವರಲ್ಲಿ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ‌ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಸರಾಸರಿ ಆರು ಮಂದಿ ಸ್ವಗೃಹದಲ್ಲಿಯೇ ಮರಣಹೊಂದುತ್ತಿದ್ದಾರೆ. 

ವಿಶೇಷ ನಿಗಾ ಅಗತ್ಯ: ‘ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ 60 ವರ್ಷ ಮೇಲ್ಟಟ್ಟವರಿಗೆ ಸೋಂಕು ಹೆಚ್ಚನ ಅಪಾಯ ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ವರ್ಗದವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕುಟುಂಬದ ಸದಸ್ಯರು ಕೂಡ ವಿಶೇಷ ನಿಗಾ ಇರಿಸಿ, ಮನೆಯಲ್ಲಿಯೇ ಅವರಿಗೆ ಪ್ರತ್ಯೇಕವಾಗಿ ಇರಲು ಅವಕಾಶ ಮಾಡಿಕೊಡಬೇಕು. ಜ್ವರ, ಕೆಮ್ಮು ಸೇರಿದಂತೆ ವಿವಿಧ ಸೋಂಕು ಲಕ್ಷಣಗಳು ಕಾಣಿಸಿಕೊಂಡರೂ ಅದನ್ನು ಕಡೆಗಣಿಸುತ್ತಿರುವುದೇ ಸಾವಿನ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ’ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ನಾರಾಯಣ ಹೆಲ್ತ್ ಸಿಟಿಯ ಹೃದ್ರೋಗ ವಿಭಾಗದ ಹಿರಿಯ ಸಲಹೆಗಾರ ಡಾ.ಕೆ.ವಿ. ಶ್ರೀಕಾಂತ್, ‘ಕೋವಿಡ್ ಕಾರಣ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಿ, ತಪಾಸಣೆ ಮಾಡಿಸಿಕೊಳ್ಳಬೇಕು. ಸೋಂಕಿತರಾಗಿರಾಗಿರುವುದು ಆರಂಭಿಕ ಹಂತದಲ್ಲಿಯೇ ಪತ್ತೆಯಾದಲ್ಲಿ ಅವರ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಬಹುದು. ಕೋವಿಡ್‌ಗೆ ಅನಗತ್ಯವಾಗಿ ಭಯಪಡುವ ಬದಲು ಮುಂಜಾಗ್ರತೆ ವಹಿಸಬೇಕು’ ಎಂದು ತಿಳಿಸಿದರು. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು