ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಪ್ರಥಮ ಪ್ಲಾಸ್ಮಾ ಬ್ಯಾಂಕ್‌ಗೆ ಚಾಲನೆ

ದಾನಿಗಳಿಗೆ ₹ 5 ಸಾವಿರ ಗೌರವಧನ: ಡಿಸಿಎಂ ಅಶ್ವತ್ಥ ನಾರಾಯಣ ಹೇಳಿಕೆ
Last Updated 21 ಜುಲೈ 2020, 19:34 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ಸಹಯೋಗದಲ್ಲಿ ನಗರದ ಎಚ್‌ಸಿಜಿ ಆಸ್ಪತ್ರೆಯಲ್ಲಿ ರಾಜ್ಯದ ಪ್ರಥಮ ಪ್ಲಾಸ್ಮಾ ಬ್ಯಾಂಕ್‌ಗೆ ಮಂಗಳವಾರ ಚಾಲನೆ ದೊರೆತಿದೆ.

ಕೋವಿಡ್ ಇಂಡಿಯಾ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿರುವ ಕೋವಿಡ್ ಪ್ಲಾಸ್ಮಾ ಪ್ರಯತ್ನಕ್ಕೆ ಹಸಿರು ನಿಶಾನೆ ತೋರಿದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಪ್ಲಾಸ್ಮಾ ಬ್ಯಾಂಕ್ ಉದ್ಘಾಟಿಸಿದರು. ಐಸಿಎಟಿಟಿ ಫೌಂಡೇಷನ್ ನೇತೃತ್ವದಲ್ಲಿ ಅಭಿಯಾನ ನಡೆಯಲಿದೆ.

‘ಕೋವಿಡ್ ಮರಣ ಪ್ರಮಾಣವನ್ನು ತಡೆಯಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಪ್ಲಾಸ್ಮಾ ಥೆರಪಿ ಕೂಡ ಒಂದಾಗಿದೆ. ಗಂಭೀರ ಪ್ರಕರಣಗಳಲ್ಲಿ ವ್ಯಕ್ತಿಯನ್ನು ಪ್ಲಾಸ್ಮಾ ಥೆರಪಿಯಿಂದ ವಿಶ್ವದ ವಿವಿಧೆಡೆ ರಕ್ಷಿಸಲಾಗಿದೆ. ಕೋವಿಡ್ ಜಯಿಸಿ ಮನೆಗೆ ತೆರಳಿದವರು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬೇಕು. ಅವರಿಗೆ ಸರ್ಕಾರದಿಂದ ಕೂಡ ₹ 5 ಸಾವಿರ ಗೌರವಧನ ನೀಡಲಾಗುತ್ತಿದೆ. ಸಂಗ್ರಹಿಸಲ್ಪಟ್ಟ ಪ್ಲಾಸ್ಮಾವನ್ನು ವಿವಿಧ ಆಸ್ಪತ್ರೆಗಳು ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಎಚ್‌ಸಿಜಿ ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ಹಾಗೂ ಪ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್ ಪ್ರಯೋಗದ ಮುಖ್ಯಸ್ಥ ಡಾ. ವಿಶಾಲ್ ರಾವ್ ಮಾತನಾಡಿ, ‘ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. 500ಕ್ಕೂ ಅಧಿಕ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿಗೆ ಯಾವುದೇ ವ್ಯಕ್ತಿ ಸಾಯಬಾರದು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯುತ್ತಿವೆ. ವಿಕ್ಟೋರಿಯಾ ಆಸ್ಪ‍ತ್ರೆಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಪ್ರಾಯೋಗಿಕವಾಗಿ ನಡೆಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬಂದಲ್ಲಿ ಇನ್ನಷ್ಟು ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಮಾಡಲು ಸಾಧ್ಯ’ ಎಂದರು.

‘ರಕ್ತದಲ್ಲಿ ಸಮಾನವಾಗಿ ಕೋಶ ಮತ್ತು ರಸಗಳು (ಪ್ಲಾಸ್ಮಾ) ಇರುತ್ತವೆ. ರೋಗದಿಂದ ಗುಣಮುಖರಾದವರ ದುಗ್ಧ ರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಪ್ರತಿರೋಧ ಕಣಗಳು ಕೊರೊನಾ ಸೋಂಕಿನ ಮೇಲೆ ದಾಳಿ ನಡೆಸುವ ಗುಣಗಳನ್ನು ಬೆಳೆಸಿಕೊಂಡಿರುತ್ತದೆ. ಒಂದು ಗಂಟೆಯಲ್ಲಿ ಪ್ಲಾಸ್ಮಾ ಪಡೆಯುವ ಪ್ರಕ್ರಿಯೆ ಮುಗಿಯುತ್ತದೆ’ ಎಂದು ತಿಳಿಸಿದರು.

ಸಹಾಯವಾಣಿ ಸಂಖ್ಯೆ: (080) 61914960

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT