ಸೋಮವಾರ, ಡಿಸೆಂಬರ್ 6, 2021
27 °C
ನಗರದಲ್ಲಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದವರು 2,693 | 27 ಜನ ಸಾವು

ಕೋವಿಡ್‌: ಬೆಂಗಳೂರಿನಲ್ಲಿ ಒಂದೇ ದಿನ ಆಸ್ಪತ್ರೆಯಿಂದ ಬಿಡುಗಡೆಯಾದವರು 2,693

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯ ಸಿಬ್ಬಂದಿ –ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಸೋಮವಾರ ಸೋಂಕು ದೃಢಪಟ್ಟವರಿಗಿಂತ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ ಸಾವಿರಕ್ಕೂ ಅಧಿಕವಾಗಿದೆ. ಆ.3ರಂದು ನಗರದಲ್ಲಿ 1,497 ಜನ ಸೋಂಕಿತರಾಗಿದ್ದರೆ, 2,693 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸೋಂಕಿತರ ಸಂಖ್ಯೆ 60,998ಕ್ಕೆ ಏರಿದ್ದರೆ, ಸೋಮವಾರ ಒಂದೇ 27 ಜನ ಸಾವಿಗೀಡಾಗುವ ಮೂಲಕ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 1,104ಕ್ಕೆ ಮುಟ್ಟಿದೆ. ಆದರೆ, ಗುಣಮುಖರಾದವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, 23,603ಕ್ಕೆ ತಲುಪಿದೆ. 

ಪಶ್ಚಿಮ ವಲಯದಲ್ಲಿ ಅಧಿಕ:

ಉಳಿದ ವಲಯಗಳಿಗೆ ಹೋಲಿಸಿದರೆ, ಪಶ್ಚಿಮ ವಲಯದಲ್ಲಿ ಆ.3ರಂದು ಅಧಿಕ ಪ್ರಕರಣಗಳು (389) ವರದಿಯಾಗಿವೆ. ಪೂರ್ವ ಎರಡನೇ ಸ್ಥಾನದಲ್ಲಿದ್ದರೆ (236), ದಕ್ಷಿಣ ವಲಯ (203) ನಂತರದಲ್ಲಿದೆ. ರಾಜರಾಜೇಶ್ವರಿ ನಗರ (137), ಮಹದೇವಪುರ (132), ಬೊಮ್ಮನಹಳ್ಳಿಯಲ್ಲಿ (120) ಕೋವಿಡ್‌ ಪ್ರಕರಣಗಳ ಸಂಖ್ಯೆ ಶತಕ ದಾಟಿದೆ. ಯಲಹಂಕದಲ್ಲಿ ಸೋಮವಾರ 70 ಜನರಿಗೆ ಸೋಂಕು ದೃಢಪಟ್ಟಿದ್ದರೆ, ದಾಸರಹಳ್ಳಿಯಲ್ಲಿ 91 ಜನ ಸೋಂಕಿತರಾಗಿದ್ದಾರೆ. 

ವಿಕ್ಟೋರಿಯಾದಲ್ಲಿ ಅಧಿಕ ಸಾವು: 

ನಗರದಲ್ಲಿ ಜುಲೈ 31ರವರೆಗೆ 1,022 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ  123 ಜನರು ಸಾವಿಗೀಡಾಗಿದ್ದಾರೆ. ನಂತರದ ಸ್ಥಾನದಲ್ಲಿ ಖಾಸಗಿ ಆಸ್ಪತ್ರೆಗಳಾದ ಸೇಂಟ್‌ ಜಾನ್ಸ್‌ (99) ಹಾಗೂ ಎಂ.ಎಸ್. ರಾಮಯ್ಯ (81) ಇವೆ. 

ವಿಕ್ಟೋರಿಯಾ ನಗರದಲ್ಲಿ ಕೋವಿಡ್‌ ಚಿಕಿತ್ಸೆಗಾಗಿಯೇ ಮೀಸಲಿಟ್ಟ ಮೊದಲ, ದೊಡ್ಡ ಸಾರ್ವಜನಿಕ ಆಸ್ಪತ್ರೆ. ಹೀಗಾಗಿ, ಇಲ್ಲಿ ಸಾವಿನ ಸಂಖ್ಯೆಯೂ ಅಧಿಕವಾಗಿದೆ ಎಂದು ವೈದ್ಯರು ಹೇಳುತ್ತಾರೆ. 

‘ನಮ್ಮ ಆಸ್ಪತ್ರೆಯಲ್ಲಿ ಸಾವಿಗೀಡಾದವರ ಪೈಕಿ ಶೇ 50ಕ್ಕಿಂತ ಹೆಚ್ಚು ಜನ ತೀವ್ರನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೇ ಆಗಿದ್ದಾರೆ. ಅದರಲ್ಲಿಯೂ, ಹೆಚ್ಚಿನವರು ವೃದ್ಧರು ಮತ್ತು ಇತರೆ ಕಾಯಿಲೆಗಳಿಂದಲೂ ಬಳಲುತ್ತಿದ್ದರು’ ಎಂದು ಸೇಂಟ್‌ ಜಾನ್‌ ಆಸ್ಪತ್ರೆ ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಜಾರ್ಜ್‌ ಡಿಸೋಜ ಹೇಳುತ್ತಾರೆ. 

‘ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳಿವೆ, ಎಷ್ಟು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನು ಆಧರಿಸಿಯೂ ಸಾವಿನ ಪ್ರಮಾಣ ನಿರ್ಧರಿಸಬೇಕಾಗುತ್ತದೆ. ಅದರಲ್ಲಿಯೂ ತೀವ್ರನಿಗಾಘಟಕದಲ್ಲಿ ಎಷ್ಟು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನೂ ಗಮನಿಸಬೇಕು. ಬಿಬಿಎಂಪಿಯವರು ತೀರಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನೇ ನಮ್ಮ ಆಸ್ಪತ್ರೆಗೆ ಕಳಿಸುತ್ತಾರೆ. ಅಲ್ಲದೆ, ಕೋವಿಡ್‌ಗೆ ಇದೇ ಸರಿಯಾದ ಚಿಕಿತ್ಸೆ ಅಥವಾ ಔಷಧಿ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಸಾವಿಗೆ ಹಲವು ಕಾರಣಗಳು ಇರುತ್ತವೆ’ ಎಂದು ಎಂ.ಎಸ್. ರಾಮಯ್ಯ ಆಸ್ಪತ್ರೆಯ ಡಾ. ನರೇಶ್‌ ಶೆಟ್ಟಿ ಹೇಳುತ್ತಾರೆ. 

ಜುಲೈ 31ರವರೆಗೆ, ಬೌರಿಂಗ್‌ ಆಸ್ಪತ್ರೆಯಲ್ಲಿ 75 ಜನ ಸಾವಿಗೀಡಾಗಿದ್ದರೆ, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 62 ಮಂದಿ ಮೃತಪಟ್ಟಿದ್ದಾರೆ.

‘ನಮ್ಮ ಆಸ್ಪತ್ರೆಯಲ್ಲಿ ಸಾವಿಗೀಡಾದವರ ಪೈಕಿ, ಕನಿಷ್ಠ 24 ಜನ ಆಸ್ಪತ್ರೆಗೆ ದಾಖಲಾಗಿ ಒಂದು ದಿನದೊಳಗೇ ಸಾವಿಗೀಡಾಗಿದ್ದಾರೆ. ದಾಖಲಾದ ಐದು ದಿನದೊಳಗೆ ನಿಧನರಾದವರು 19 ಜನ. ಅದರಲ್ಲಿಯೂ, ಬೇರೆ ಆಸ್ಪತ್ರೆಯವರು ನಿರಾಕರಿಸಿದ ನಂತರವೇ ನಮ್ಮಲ್ಲಿ ಬಂದು ದಾಖಲಾಗಿರುತ್ತಾರೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ದಾಖಲಿಸಿಕೊಳ್ಳಲು ನಾವು ನಿರಾಕರಿಸುವುದಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ಬೌರಿಂಗ್‌ ಆಸ್ಪತ್ರೆಯ ಉಸ್ತುವಾರಿ ಡೀನ್‌ ಡಾ. ಮನೋಜ್‌ಕುಮಾರ್.

ಭಾರತೀಯ ನಿರ್ವಹಣಾ ಸಂಸ್ಥೆ ಸಿಬ್ಬಂದಿ ಕ್ವಾರಂಟೈನ್‌

ನಗರದ ಭಾರತೀಯ ನಿರ್ವಹಣಾ ಸಂಸ್ಥೆಯಲ್ಲಿ (ಐಐಎಂಬಿ) ತೋಟಗಾರಿಕೆ ಕೆಲಸವನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೋವಿಡ್‌ ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

‘ಸೋಂಕಿತ ವ್ಯಕ್ತಿಗೆ ಸಂಸ್ಥೆಯಿಂದ ಎಲ್ಲ ಸಹಾಯ, ನೆರವು ನೀಡಿದ್ದೇವೆ. ಅವರ ಸಂಪರ್ಕಕ್ಕೆ ಬಂದ ಸಿಬ್ಬಂದಿಯನ್ನು 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸಂಸ್ಥೆಯ ಆವರಣವನ್ನು ಸ್ಯಾನಿಟೈಸ್‌ ಮಾಡಲಾಗಿದೆ’ ಎಂದು ಸಂಸ್ಥೆಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬ ಪತ್ರಕರ್ತ ಸಾವು

ಪತ್ರಕರ್ತ ಎಂ.ಕೆ. ಹಾಲಪ್ಪ (65) ಕೋವಿಡ್‌ನಿಂದ ಸೋಮವಾರ ಸಾವಿಗೀಡಾದರು.

ದೇವನಹಳ್ಳಿ ಬಳಿಯ ಆಕಾಶ್‌ ಆಸ್ಪತ್ರೆಗೆ ಅವರು ದಾಖಲಾಗಿದ್ದರು.  ಸುಮಾರು 30 ವರ್ಷಗಳಿಂದ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೆಳಗುಂಬ ಅವರ ಹುಟ್ಟೂರು. ಅವರಿಗೆ ಪತ್ನಿ, ಪುತ್ರ ಇದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದ ಎರಡನೇ ಪತ್ರಕರ್ತ ಇವರು. ಗೌರೀಪುರ ಚಂದ್ರು ಕೋವಿಡ್‌ನಿಂದ ಜೂನ್‌ 18ರಂದು ಮೃತಪಟ್ಟಿದ್ದರು.

ಐಐಎಸ್‌ಸಿ: ಕೋವಿಡ್‌–19 ನಿರ್ವಹಣೆಗೆ ಸಮಿತಿ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್‌–19 ನಿರ್ವಹಣೆಗೆಂದೇ ಪ್ರತ್ಯೇಕ ಸಮಿತಿ ರಚಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

‘15 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌ ಎಂದು ವರದಿ ಬಂದಿತ್ತು. ಈಗ, ಸಂಸ್ಥೆಯಲ್ಲಿಯೇ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, 12 ವಿದ್ಯಾರ್ಥಿಗಳ ವರದಿ ನೆಗೆಟಿವ್‌ ಎಂದು ಬಂದಿದೆ’ ಎಂದು ಸಂಸ್ಥೆ ಹೇಳಿದೆ. ಐಐಎಸ್‌ಸಿಯಲ್ಲಿನ ಬೋಧಕ ವರ್ಗ, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಈ ನಿರ್ವಹಣಾ ಸಮಿತಿಯಲ್ಲಿದ್ದಾರೆ. ಗಂಟಲುದ್ರವ ಸಂಗ್ರಹಿಸಿ, ಪರೀಕ್ಷೆ ನಡೆಸಲು ಬಿಬಿಎಂಪಿಯಿಂದ ಅನುಮೋದನೆ ಪಡೆಯಲಾಗಿದೆ ಎಂದು ಅದು ತಿಳಿಸಿದೆ.

ನಗರ ಕೋವಿಡ್‌ ಅಂಕಿ–ಅಂಶ

ಒಟ್ಟು ಸೋಂಕಿತರು;60,998

ಸೋಮವಾರ ದೃಢಪಟ್ಟ ಪ್ರಕರಣಗಳು;1,497

ಸಕ್ರಿಯ ಪ್ರಕರಣಗಳು;36,290

ಗುಣಮುಖರಾದವರು; 23,603

ಸೋಮವಾರ ಗುಣಮುಖರಾದವರು; 2,693

ಒಟ್ಟು ಮೃತಪಟ್ಟವರು; 1,104

ಸೋಮವಾರ ದೃಢಪಟ್ಟ ಸಾವು ಪ್ರಕರಣಗಳು; 27

ತೀವ್ರ ನಿಗಾ ಘಟಕದಲ್ಲಿರುವವರು;330

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು