ಬುಧವಾರ, ಆಗಸ್ಟ್ 10, 2022
23 °C

‘ಕೋವಿರಕ್ಷಾ’ ಉತ್ಪನ್ನ ಬಿಡುಗಡೆ: ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂತನ್ ಲ್ಯಾಬ್ಸ್‌ ಕಂಪನಿಯು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ‘ಕೋವಿರಕ್ಷಾ’ ಉತ್ಪನ್ನವನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.

‘14 ತಿಂಗಳ ಅಧ್ಯಯನ ಹಾಗೂ ಪರಿಶ್ರಮದಿಂದ ಈ ಉತ್ಪನ್ನ ಅಭಿವೃದ್ಧಿಪಡಿಸಿದ್ದೇವೆ. ಇದಕ್ಕಾಗಿ ದೇಶದ ಪ್ರಮುಖ ಸಂಶೋಧನಾ ಸೌಲಭ್ಯ ಹಾಗೂ ಪರಿಣತರ ನೆರವು ಪಡೆಯಲಾಗಿದೆ. ಹಿಂದಿನ ಮೂರು ತಿಂಗಳಲ್ಲಿ ರಾಜ್ಯದ 10 ಸಾವಿರಕ್ಕೂ ಹೆಚ್ಚು ಜನರ ಮೇಲೆ ಇದನ್ನು ಪ್ರಯೋಗಿಸಿದ್ದು, ಸಕಾರಾತ್ಮಕ ಫಲಿತಾಂಶ ದೊರೆತಿದೆ. ರಾಜ್ಯ ಆಯುಷ್‌ ಇಲಾಖೆಯ ಅನುಮೋದನೆಯೂ ಸಿಕ್ಕಿದೆ. ಕೇಂದ್ರದ ಆಯುಷ್‌ ಇಲಾಖೆಯ ಅನುಮೋದನೆಗೂ ಅರ್ಜಿ ಸಲ್ಲಿಸಿದ್ದೇವೆ’ ಎಂದು ನೂತನ್‌ ಲ್ಯಾಬ್ಸ್‌ನ ನಿರ್ದೇಶಕ ಹಾಗೂ ವಿಜ್ಞಾನಿ ಎಚ್‌.ಎಸ್‌.ನೂತನ್‌ ತಿಳಿಸಿದರು.

‘ಆಧುನಿಕ ವಿಜ್ಞಾನ ಹಾಗೂ ಭಾರತೀಯ ಪರಂಪರೆಯ ಔಷಧ ಪದ್ಧತಿ ಅನ್ವಯಿಸಿಕೊಂಡು ಈ ಉತ್ಪನ್ನವನ್ನು ಆವಿಷ್ಕರಿಸಿದ್ದೇವೆ. 10 ಎಂ.ಎಲ್‌. ದ್ರಾವಣವನ್ನೊಳಗೊಂಡ ಒಂದು ಬಾಟಲ್‌ಗೆ ₹300 ಮೊತ್ತ ನಿಗದಿಪಡಿಸಲಾಗಿದೆ. ಇದು ಎಲ್ಲಾ ಔಷಧ ಅಂಗಡಿಗಳಲ್ಲೂ ಲಭ್ಯವಿರಲಿದೆ. ಕೈ, ಮೂಗು, ಗಂಟಲು ಮತ್ತು ಮುಖಗವಸಿನ ಹೊರಭಾಗದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ದ್ರಾವಣ ಲೇಪಿಸಿದರೆ 3 ಗಂಟೆಗಳಿಗೂ ಹೆಚ್ಚು ಕಾಲ ವೈರಾಣುವಿನಿಂದ ರಕ್ಷಿಸುತ್ತದೆ. ಮನೆ ಯಿಂದ ಹೊರ ಹೋಗುವಾಗ ಇದನ್ನು ಬಳಸಬೇಕು. ಸೋಂಕಿತರೂ ಇದನ್ನು ಉಪಯೋಗಿಸಬಹುದು. ಮಕ್ಕಳಿಗೂ ಇದು ಉಪಯುಕ್ತ’ ಎಂದರು.

ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ಷೇತ್ರ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ನೂತನ್‌ ಲ್ಯಾಬ್ಸ್‌ನ ಸಲಹೆಗಾರ ವೇಣು ಶರ್ಮಾ, ಐಐಎಸ್‌ಸಿಯ ಡೇನಿಯಲ್‌, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ವೂಡೆ ಪಿ.ಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು