ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಳಿಕ ಲಿಂಗಾಯತ ಧರ್ಮ ಕುರಿತು ನಿಲುವು: ಅಮಿತ್‌ ಶಾ

Last Updated 31 ಮಾರ್ಚ್ 2018, 8:04 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭಾ ಚುನಾವಣೆ ಬಳಿಕ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಲ್ಲಿ ಶನಿವಾರ ತಿಳಿಸಿದರು.

‘ಚುನಾವಣೆ ಸಂದರ್ಭದಲ್ಲಿ ಜನರ ಭಾವನೆಗಳೊಂದಿಗೆ ನಾವು ಚೆಲ್ಲಾಟ ಆಡುವುದಿಲ್ಲ. ಅಷ್ಟಕ್ಕೂ ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧ ರಾಜ್ಯ ಸರ್ಕಾರದ ಶಿಫಾರಸು ಪತ್ರ ಇದುವರೆಗೆ ಕೇಂದ್ರ ಸರ್ಕಾರ ತಲುಪಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯಡಿಯೂರಪ್ಪ ಅವರನ್ನು ಮಖ್ಯಮಂತ್ರಿ ಮಾಡದಂತೆ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಂತ್ರ ರೂಪಿಸಿದ್ದಾರೆ. ಇಷ್ಟು ವರ್ಷ ಸುಮ್ಮನಿದ್ದ ಅವರು ಚುನಾವಣೆ ಸಮಯದಲ್ಲಿ ಏಕೆ ಈ ವಿಚಾರ ಎತ್ತಿಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

ದಲಿತರ ಆಕ್ರೋಶ ಕುರಿತು ಪ್ರತಿಕ್ರಿಯಿಸಿ, ‘ಸಂವಿಧಾನ ಕುರಿತು ನೀಡಿದ ಹೇಳಿಕೆ ಬಗ್ಗೆ ಅನಂತಕುಮಾರ್‌ ಹೆಗಡೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಅಲ್ಲಿಗೆ ಮುಗಿಯಿತು. ಇನ್ನು ಅಂಬೇಡ್ಕರ್‌ ತಂದೆ ಹೆಸರು ರಾಮಜೀ. ಹೀಗಾಗಿ, ಅಂಬೇಡ್ಕರ್‌ ಹೆಸರಿನ ಜೊತೆ ರಾಮಜೀ ಸೇರಿಸಲಾಗಿದೆ’ ಎಂದರು.

ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ. ಹಿಂದುತ್ವದಿಂದಲೂ ಹಿಂದೆ ಸರಿಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕರ್ನಾಟಕ ಪರಿವರ್ತನೆ ಅವರಿಂದ ಅಸಾಧ್ಯ ಎಂದು ನುಡಿದರು.

‘ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರದ ಸುನಾಮಿ ಎದ್ದಿದೆ. ಭ್ರಷ್ಟಾಚಾರದ ಎಟಿಎಂ ಆಗಿದೆ. ರಾಜ್ಯದ ವಿಕಾಸಕ್ಕೆ ಅಡ್ಡಿಯಾಗಿ ಪರಿಣಮಿಸಿದೆ’ ಎಂದು ಆರೋಪಿಸಿದರು.

ಉತ್ತರ ಹಾಗೂ ದಕ್ಷಿಣ ರಾಜ್ಯಗಳ ನಡುವೆ ಬಿಜೆಪಿ ತಾರತಮ್ಯ ಮಾಡುತ್ತಿಲ್ಲ. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಕೂಡ ಮನ್ನಾ ಮಾಡಿವೆ. ಕೇಂದ್ರಕ್ಕೆ ತನ್ನದೇ ಆದ ಜವಾಬ್ದಾರಿಗಳಿವೆ. ಸಿದ್ದರಾಮಯ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನುಡಿದರು.

ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪ್ರತಾಪಸಿಂಹ, ಶಾಸಕರಾದ ಆರ್‌.ಅಶೋಕ, ಸಿ.ಟಿ.ರವಿ ಇದ್ದರು.

ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ
ತಮ್ಮ ಪ್ರವಾಸದ ವೇಳಾಪಟ್ಟಿಯಲ್ಲಿ ನಿಗದಿಯಾಗದಿದ್ದರೂ ಅಮಿತ್‌ ಶಾ ಅವರು ಶನಿವಾರ ಬೆಳಿಗ್ಗೆ ಕೋಟೆ ಅಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು.

ಮೈಸೂರು ಅರಮನೆ ಆವರಣದಲ್ಲಿರುವ ಈ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕು ಚಿನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತ ರಾಜೇಂದ್ರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT